“ನೀನು ಬೇಗ ಹುಷಾರಾಗಿ ಆಟ ಆಡೋಕೆ ಹೋಗಬೇಕಾ ಬೇಡವಾ? ಜಾಣೆ ಅಲ್ವಾ ನೀನು ಹಠ ಮಾಡಬೇಡ. ನನ್ನ ಬಂಗಾರಿ ಅಲ್ವಾ? ಮಾತ್ರೆ ತಿನ್ನು. ಈಗೇನು ತಿನ್ನುತ್ತೀಯೋ ಇಲ್ಲ ಪೆಟ್ಟು ಬೇಕಾ? ನೋಡು ನಾನು ಒಳಗೆ ಹೋಗಿ ನೀರು ತರುವುದರೊಳಗೆ ನೀನು ಮಾತ್ರೆ ತಿಂದಿರಬೇಕು. ಇಲ್ಲ ಅಂದ್ರೆ ಬೆನ್ನಿಗೆ ಬೀಳುತ್ತೆ.’
ಆರಂಭದಲ್ಲಿ ಸಮಾಧಾನದಿಂದ, ಅನಂತರದಲ್ಲಿ ಮುದ್ದಿನಿಂದ, ಅದಕ್ಕೂ ಬಗ್ಗದಿದ್ದಾಗ ಜೋರು ಮಾಡಿ, ಕೆಲವೊಮ್ಮೆ ಒಂದೆರಡು ಏಟು ಕೊಟ್ಟು ಹೀಗೆ ಚಿಕ್ಕ ವಯಸ್ಸಿನಲ್ಲಿ ಹುಷಾರು ತಪ್ಪಿದಾಗ ನಮ್ಮಮ್ಮ ನನಗೆ ಮಾತ್ರೆ ತಿನ್ನಿಸುತ್ತಿದ್ದರು. ಕೆಲವೊಮ್ಮೆ ಇದ್ಯಾವುದಕ್ಕೂ ಬಗ್ಗದೇ ಇದ್ದಾಗ ಅಣ್ಣಾನೋ, ಅಕ್ಕಾನೋ, ಇಲ್ಲ ಅಜ್ಜಿಯ ಬಳಿ ನನ್ನ ಕೈಕಾಲನ್ನು ಹಿಡಿದುಕೊಳ್ಳಲು ಹೇಳಿ ಮೂಗು ಒತ್ತಿಹಿಡಿದು ಮಾತ್ರೆ ತಿನ್ನಿಸುತ್ತಿದ್ದರು. ಈ ಮಾತ್ರೆಯನ್ನು ಪುಡಿ ಮಾಡಿ ನೀರಿನಲ್ಲಿ ಮಿಶ್ರಮಾಡಿ ಕುಡಿಯುವುದಿದೆಯಲ್ಲ ಅದನ್ನು ಈಗಲೂ ನೆನಪಿಸಿಕೊಂಡರು ನಾಲಿಗೆಗೆ ಕಹಿ ಅನುಭವವಾಗಿ ಮೈಕೊಡವಿಕೊಳ್ಳುತ್ತೀನಿ.
ನಿಮ್ಮಲ್ಲಿ ಹೆಚ್ಚಿನವರಂತೆ ನನಗೂ ಕೂಡ ಬಾಲ್ಯದಲ್ಲಿ ಈ ಮಾತ್ರೆ ತಿನ್ನೊದೆಂದರೇ ಆಗ್ತಾ ಇರಲಿಲ್ಲ. ಒಂದು ಮಾತ್ರೆ ತಿನ್ನೋಕೆ ಅರ್ಧಗಂಟೆ ತೆಗೆದುಕೊಂಡಿದ್ದೂ ಇದೆ. ಇಂಜೆಕ್ಷನ್ನಿಗೂ ಹೆದರದ ನಾನು ಮಾತ್ರೆ, ಕಹಿಯಾದ ಟಾನಿಕ್‌ಗೆà ಹೆದರುತ್ತಿದ್ದೆ. ಮಾತ್ರೆಯ ಕಹಿ ನಾಲಿಗೆಗೆ ತಗಲದಂತೆ ಗಂಟಲ ಸಮೀಪ ಮಾತ್ರೆಯಿಟ್ಟು ತತ್‌ಕ್ಷಣ ನೀರು ಕುಡಿದು ಮಾತ್ರೆಯನ್ನು ಹೊಟ್ಟೆಗೆ ಸೇರಿಸುವುದು ಒಂದು ಕಲೆ. ಅದಕ್ಕೆ ಚಾಣಾಕ್ಷತನ ಬೇಕು. ಇಲ್ಲದಿದ್ದರೇ, ಒಮ್ಮೊಮ್ಮೆ ನೀರು ಕುಡಿಯುವ ಸಂದರ್ಭದಲ್ಲಿ ನಾಲಿಗೆಗೆ ಕಹಿ ತಾಗಿ ನೀರಿನ ಜತೆ ಮಾತ್ರೆಯು ಹೊರಬಂದು ಅಮ್ಮನ ಏಟಿನೊಂದಿಗೆ ಮತ್ತೆ ಮಾತ್ರೆ ನುಂಗಬೇಕಾಗುತ್ತದೆ.
ಚಿಕ್ಕವಳಿದ್ದಾಗ ನಾನು ಮಾತ್ರೆ ತಿನ್ನುವುದನ್ನು ತಪ್ಪಿಸಿಕೊಳ್ಳಲು ಮಾಡುತ್ತಿದ್ದ ಪ್ರಯತ್ನಗಳು ಒಂದೆರಡಲ್ಲ. ಆದರೆ ಪತ್ರೀ ಬಾರಿಯೂ ಅಮ್ಮನ ಜಾಣತನದ ಮುಂದೆ ನನ್ನ ಪ್ರಯತ್ನಗಳೆಲ್ಲ ವಿಫಲವಾಗುತ್ತಿದ್ದವು. ನಾನು ಏನೇ ಮಾಡಿದರು ಹುಷಾರಾಗುವ ವರೆಗೂ ಅಮ್ಮ ನನಗೆ ಮಾತ್ರೆ ನುಂಗಿಸದೇ ಬಿಡುತ್ತಿರಲಿಲ್ಲ.
ಈಗ ಮೂರು ಮೂರು ಮಾತ್ರೆಗಳನ್ನು ಒಮ್ಮೆಲೆ ಬಾಯಿಗೆ ಹಾಕಿಕೊಂಡು ನೀರು ಕುಡಿಯುವಾಗ ಇದೆಲ್ಲ ನೆನಪಾಗಿ ನಗು ಬರುತ್ತದೆ. ಬಾಲ್ಯದಂತೆ ಈಗಲೂ ನನಗೆ ಮಾತ್ರೆ ತಿನ್ನೋದು ಅಂದ್ರೆ ಆಗಲ್ಲ. ಆದರೂ ಹುಷಾರಾಗಬೇಕು ಅಂದರೆ ಮಾತ್ರೆ ಕುಡಿಲೇಬೇಕು. ಬಾಲ್ಯದಲ್ಲಿ ಮಾತ್ರೆ ತಿನ್ನಲಿಲ್ಲ ಅಂದರು ಹತ್ತಿರವೇ ಇದ್ದು ಅಮ್ಮ ತೋರುವ ಕಾಳಜಿಗೆ ನಾನು ಅರ್ಧ ಗುಣ ಆಗುತ್ತಿದ್ದೆ. ಅದಕ್ಕೆ ಮಾತ್ರೆ ತಿನ್ನದೆ ಅಮ್ಮನನ್ನು ಗೋಳಾಡಿಸುತ್ತಿದ್ದೆ. ಆದರೂ ಅಮ್ಮ ಬಿಡದೇ ಮಾತ್ರೆ ತಿನ್ನಿಸುತ್ತಿದ್ದಳು. ಈಗ ಕೆಲಸ ನಿಮಿತ್ತ ಅಮ್ಮನಿಂದ ದೂರ ಇರುವ ನನಗೆ ಹುಷಾರು ತಪ್ಪಿದಾಗ ಮಾತ್ರೆ ತಿನ್ನದೇ ಬೇರೆ ಆಯ್ಕೆಗಳೇ ಇಲ್ಲ. ಹುಷಾರಿಲ್ಲದೇ ಮಲಗಿದರೇ ಕಾಳಜಿ ಮಾಡುವವರು ಹತ್ತಿರವಿಲ್ಲ ಅನ್ನುವ ಭಯ ಮಾತ್ರೆಯ ಕಹಿಯನ್ನು ಮರೆಸಿದೆ.
-ಸುಶ್ಮಿತಾ ನೇರಳಕಟ್ಟೆ