Advertisement
ಪಂಜಾಬ್‌ನ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಪಾಕಿಸ್ಥಾನದಲ್ಲಿಯೇ ಉಳಿದಿದೆ.
Related Articles
Advertisement
ಈ ನಂಕನಾ ಸಾಹಿಬ್ ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಜಗಜಿತ್ ಕೌರ್ ಎಂಬ ಬಾಲಕಿ.
ಜಗಜಿತ್ ಕೌರ್‌ನನ್ನು ಮೊಹಮ್ಮದ್ ಹಸನ್ ಎಂಬ ಹುಡುಗ ಬಲವಂತವಾಗಿ ಅಪಹರಿಸಿ, ಮದುವೆಯಾಗಿ ಮತಾಂತರ ಮಾಡಿದ್ದಾನೆ ಎಂದು ಕುಟುಂಬ ಆರೋಪಿಸಿತ್ತು. ಮೊಹಮ್ಮದ್ ಹಸನ್ ಅವರನ್ನು ಮದುವೆಯಾದ ಬಳಿಕ ಜಗಜಿತ್ ಕೌರ್ ಅವರನ್ನು ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲಾಗಿದೆ. ಮಾತ್ರವಲ್ಲದೇ ಇದೀಗ ಅವರ ಹೆಸರನ್ನು ಆಯೆಷಾ ಎಂದು ಬದಲಾಯಿಸಲಾಗಿದೆ ಎಂಬ ಮಾತುಗಳು ಆ ಪ್ರಾಂತ್ಯದಲ್ಲಿ ಆತಂಕವನ್ನು ಸೃಷ್ಟಿಸಿದ್ದವು.
ಆದರೆ ತನ್ನ ರಕ್ಷಣೆಗೆ ಧಾವಿಸಿದ ಕುಟುಂಬದ ಪರವಾಗಿ ನಿಲ್ಲಬೇಕಾಗಿದ್ದ ಜಗಜಿತ್ ಕೌರ್ ಅವರು, ಈ ಆರೋಪಗಳೆಲ್ಲಾ ಕಟ್ಟುಕತೆಗಳು ಎಂದು ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ತಿರುವು ಕೊಟ್ಟಿತ್ತು.
ಕಳೆದ ವರ್ಷ ನಡೆದ ಘಟನೆ ಇದಾಗಿದ್ದು, ಬಾಲಕಿಯ ಕುಟುಂಬದ ದೂರಿನಂತೆ ಪೊಲೀಸರು ಮೊಹಮ್ಮದ್ ಹಸನ್ ಅವರನ್ನು ಬಂಧಿಸಿದ್ದಾರೆ. ಜಗಜಿತ್ ಅಲಿಯಾಸ್ ಆಯೆಷಾ ಅವರನ್ನು ಲಾಹೋರ್‌ನ ದಾರ್-ಉಲ್-ಅಮನ್ ಅವರ ಆಶ್ರಯ ಮನೆಗೆ ಕಳುಹಿಸಿದ್ದರು. ಇದೀಗ ಹುಡುಗಿಯ ತಂದೆ ನೀಡಿದ ದೂರನ್ನು ಆಧರಿಸಿ ಪ್ರಕರಣದ ವಿಚಾರಣೆಯನ್ನು ಕಳೆದ ವಾರವಷ್ಟೇ ಪೂರ್ಣಗೊಳಿಸಿದ ಲಾಹೋರ್ ಹೈಕೋರ್ಟ್, ಜಗಜಿತ್ ಕೌರ್ ಅವರನ್ನು ಮೊಹಮ್ಮದ್ ಹಸನ್ ಅವರ ಮನೆಗೆ ಕಳುಹಿಸಲು ಅನುಮತಿ ನೀಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಭಾರತ ಸಹಾಯಕ್ಕೆ ಆಗ್ರಹಜಗಜಿತ್ ಕೌರ್ ಅವರ ಪ್ರಕರಣ ಭಾರತದಲ್ಲಿಯೂ ಅನುರಣಿಸಿತು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಭಾರತವನ್ನು ಜಗಜಿತ್ ಅವರ ಕುಟುಂಬ ವಿನಂತಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮಾಡಿರುವ ಟ್ವೀಟ್ ಪ್ರಕಾರ ಪಾಕಿಸ್ಥಾನದ ಪ್ರಧಾನಮಂತ್ರಿ ಅವರು ಈ ವಿಷಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ಎಂದು ಟ್ವೀಟ್ ಮಾಡಿದ್ದರು. “ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಜಗಜಿತ್ ಕೌರ್ ವಿಚಾರದಲ್ಲಿ ಸಹಾಯ ಮಾಡಲು ವಿಫಲರಾಗಿದ್ದಾರೆ. ಜಗಜಿತ್ ಅವರನ್ನು ಬಲವಂತವಾಗಿ ಮತಾಂತರಗೊಳಿಸಿ ಅವರ ಇಚ್ಚೆಗೆ ವಿರುದ್ಧವಾಗಿ ವಿವಾಹ ನಡೆಸಲಾಗಿದೆ. ಆ ಹುಡುಗಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಮಾತ್ರವಲ್ಲದೇ ಇಡೀ ಕುಟುಂಬವನ್ನು ಪಂಜಾಬ್‌ಗ ಕರೆತರುತ್ತೇನೆ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.
ಪಾಕಿಸ್ಥಾನದಲ್ಲಿ ಮುಸ್ಲಿಮೇತರರ ಪರಿಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಬಲವಂತವಾಗಿ ಅಪಹರಿಸಲಾಗುತ್ತಿದೆ ಎಂದು ಅಮೆರಿಕದ ಆಯೋಗವೊಂದು ಇತ್ತೀಚೆಗೆ ಪಾಕ್‌ನಲ್ಲಿ ಅಧ್ಯಯನ ನಡೆಸಿ ಹೇಳಿತ್ತು. ಆದರೆ ಜಗಜಿತ್ ಕೌರ್ ಅವರ ಪ್ರಕರಣ ಭಿನ್ನವಾಗಿದೆ. ಕುಟುಂಬ ಮತ್ತು ಬಾಲಕಿಯ ಹೇಳಿಕೆಗಳು ಭಿನ್ನವಾಗಿದ್ದ ಕಾರಣ ಲಹೋರ್ ಹೈಕೋರ್ಟ್ ಜಗಜಿತ್ ಅವರನ್ನು ಪತಿಯೊಂದಿಗೆ ಇರಲು ಅನುಮತಿಸಿ ತೀರ್ಪು ನೀಡಿದೆ. ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ನಿಜಕ್ಕೂ ಪಂಜಾಬ್‌ನಲ್ಲಿ ಆಗಿದ್ದೇನು?
ಜಗಜಿತ್ ಕೌರ್ ತನ್ನ ಕುಟುಂಬದೊಂದಿಗೆ ನಂಕನಾ ಸಾಹಿಬ್‌ನಲ್ಲಿ ವಾಸಿಸುತ್ತಿದ್ದಾರೆ. ಪತಿ ಮೊಹಮ್ಮದ್ ಹಸನ್ ಅವಳ ನೆರೆಯವನು. ಜಗಜಿತ್ ತಂದೆ ಸಿಖ್ ಪಾದ್ರಿ. ಮೊಹಮ್ಮದ್ ಹಸನ್ ಮೊದಲು ಮಗಳನ್ನು ಅಪಹರಿಸಿ, ಮದುವೆಯಾಗಿದ್ದು, ಅವಳನ್ನು ಮತಾಂತರ ಮಾಡಿದ್ದಾಗಿ ಕಳೆದ ಆಗಸ್ಟ್‌ನಲ್ಲಿ ಜಗಜಿತ್ ಕೌರ್ ಕುಟುಂಬ ಆರೋಪಿಸಿತ್ತು. ಇದಕ್ಕೆ ಪೂರಕವಾಗಿ ಬಾಲಕಿಯ ಹೆಸರನ್ನು ಆಯಿಷಾ ಎಂದು ಬದಲಾಯಿಸಲಾಗಿತ್ತು.
ಜಗಜಿತ್ ಕೌರ್ ಅವರ ಕುಟುಂಬವು ಮೊಹಮ್ಮದ್ ಹಸನ್ ಮತ್ತು ಅವರ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಅವರನ್ನು ಆಶ್ರಯ ಮನೆಯಲ್ಲಿ ಇರಿಸಲಾಗಿತ್ತು. ಬಾಲಕಿಗೆ 15 ವರ್ಷ ಎಂದು ಮನೆಯವರು ಹೇಳುತ್ತಿದ್ದರು. ಇದಕ್ಕಾಗಿ ಶಾಲೆಯ ಪ್ರಮಾಣಪತ್ರವನ್ನೂ ಬಾಲಕಿ ಮನೆಯವರು ಸಾಕ್ಷಿಯಾಗಿ ನೀಡಿದ್ದರು. ಆದರೆ ಮೊಹಮ್ಮದ್ ಹಸನ್ ಅವರ ವಕೀಲರು ಕೆಲವು ದಾಖಲೆಗಳನ್ನು ಕೋರ್ಟ್ ಮುಂದಿರಿಸಿ, ಜಗಜಿತ್ ಅವರಿಗೆ 19 ವರ್ಷ ವಯಸ್ಸು ಎಂದು ಕೋರ್ಟ್‌ಗೆ ಹೇಳಿದ್ದರು. ನ್ಯಾಯಕ್ಕಾಗಿ ಆಗ್ರಹ
ಮಗಳನ್ನು ಹಿಂದಿರುಗಿಸುವಂತೆ ಜಗಜಿತ್ ಅವರ ಕುಟುಂಬ ಸರಕಾರಕ್ಕೆ ಮನವಿ ಮಾಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ಥಾನದ ಆಂತರಿಕ ಸಚಿವ ಬ್ರಿಗೇಡಿಯರ್ ಇಜಾಜ್ ಅಹ್ಮದ್ ಷಾ ಕೂಡ ಈ ವಿಷಯವನ್ನು ಬಗೆಹರಿಸುವ ಭರವಸೆ ನೀಡಿದ್ದರು. ಇಜಾಜ್ ಷಾ ಅವರು ಸ್ವತಃ ಅದೇ ನಂಕಾನಾ ಸಾಹಿಬ್‌ನಿಂದ ಬಂದರಾಗಿದ್ದಾರೆ. ಈ ಇಡೀ ವಿಷಯವನ್ನು ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿಯೂ ಚರ್ಚಿಸಲಾಗಿತ್ತು. ವಿಶ್ವದಾದ್ಯಂತ ಸಿಕ್ಖ್ ಸಮುದಾಯದ ಜನರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಗಜಿತ್‌ಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಜಗಜಿತ್ ಅವರೇ ನ್ಯಾಯಾಲಯದಲ್ಲಿ ಹಸನ್ ಅವರನ್ನು ತಾನು ಸ್ವ ಇಚ್ಚೆಯಿಂದ ವಿವಾಹವಾಗಿದ್ದೇನೆ. ಇಚ್ಚೆಯಂತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ತನ್ನ ಗಂಡನೊಂದಿಗೆ ವಾಸಿಸಲು ಬಯಸುತ್ತೇನೆ ಎಂದು ಕೋರ್ಟ್ ಕಟಕಟೆಯಲ್ಲಿ ಹೇಳಿದ್ದಳು. ಇದು ಒಟ್ಟಾರೆ ಪ್ರಕರಣಕ್ಕೆ ತಿರುವು ನೀಡಿತ್ತು. ಗವರ್ನರ್ ಸಂಧಾನ
ಜಗಜಿತ್ ಕೌರ್ ಅವರ ಪ್ರಕರಣದ ವಿಚಾರಣೆ ಹೈಕೋರ್ಟ್‌ಲ್ಲಿ ನಡೆಯುತ್ತಿರುವಾಗ, ಲಾಹೋರ್‌ನಲ್ಲಿ ಅಂತಾರಾಷ್ಟ್ರೀಯ ಸಿಖ್ ಸಮ್ಮೇಳನವೂ ನಡೆಯುತ್ತಿತ್ತು. ಈ ಸಮ್ಮೇಳನದಲ್ಲಿ ಜಗಜಿತ್ ಅವರನ್ನು ಮರಳಿ ಕರೆತರುವಂತೆ ಮನವಿಗಳು ಏರ್ಪಟ್ಟಿದ್ದವು. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಒತ್ತಡ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಪಂಜಾಬ್ ಪ್ರಾಂತ್ಯದ ಗವರ್ನರ್ ಚೌಧರಿ ಮೊಹಮ್ಮದ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಜಗಜಿತ್ ಕೌರ್ ಮತ್ತು ಮೊಹಮದ್ ಹನಸ್ ಕುಟುಂಬದ ನಡುವೆ ಒಪ್ಪಂದವೊಂದನ್ನು ಮಾಡಿಕೊಂಡರು. ಆ ಸಮಯದಲ್ಲಿ ಹಸನ್ ತಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಹುಡುಗಿ ತನ್ನ ಹೆತ್ತವರೊಂದಿಗೆ ಹೋಗಲು ಬಯಸಿದರೆ, ನಾವು ಅವಳನ್ನು ತಡೆಯುವುದಿಲ್ಲ ಎಂದಿದ್ದರು. ಪರಸ್ಪರ ಒಪ್ಪಂದದ ಮೂಲಕ ವಿಷಯವನ್ನು ಇತ್ಯರ್ಥಪಡಿಸಲಾಗಿದೆ ಎಂದು ಗಮರ್ನರ್ ಹೇಳಿದ್ದರು. ಆದರೆ ಒಪ್ಪಂದದ ಅನ್ವಯ ಜಗಜಿತ್‌ಳನ್ನು ಆಶ್ರಯ ಮನೆಗೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರ ಭರವಸೆಯ ಹೊರತಾಗಿಯೂ ಜಗಜಿತ್ ಅವರನ್ನು ತಮಗೆ ಹಸ್ತಾಂತರಿಸಲಾಗಿಲ್ಲ ಎಂದು ಜಗಜಿತ್ ಸಹೋದರ ಸವಿಂದರ್ ಸಿಂಗ್ ಹೇಳಿದ್ದರು. ಇದರ ಪರ ವಾದ-ಪ್ರತಿವಾದ ಏರ್ಪಟ್ಟು ಹಲ್ಲೆಗಳು ನಡೆದವು. ಆಗಸ್ಟ್ 12ರ ಕೋರ್ಟ್ ತೀರ್ಪು
ಜಗಜಿತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಂದರೆ ಆಗಸ್ಟ್ 12ರಂದು ಲಾಹೋರ್ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ ಜಗಜಿತ್ ಕೌರ್ ಅಲಿಯಾಸ್ ಆಯೆಷಾ ತನ್ನ ಮುಸ್ಲಿಂ ಪತಿ ಮೊಹಮ್ಮದ್ ಹಸನ್ ಅವರ ಮನೆಗೆ ಹೋಗಬೇಕು ಎಂದಿತ್ತು. ಈ ತೀರ್ಪಿನಿಂದ ನಿರಾಶೆಗೊಂಡ ಪಾಕಿಸ್ಥಾನದ ಸಿಖ್ ಸಮುದಾಯದ ಜನರು ಈಗ ಸಹಾಯಕ್ಕಾಗಿ ಭಾರತೀಯರ ಮೊರೆ ಹೋಗಿದ್ದಾರೆ. ಜಗಜಿತ್ ಅವರ ಕುಟುಂಬವು ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗುವ ಕುರಿತು ಮಾತುಕತೆಗಳು ನಡೆಯುತ್ತಿವೆ.