ನಿರ್ದೇಶಕ ವಿಠಲ್ ಭಟ್ ಈ ಹಿಂದೆ “ಪ್ರೀತಿ ಕಿತಾಬು’ ಎಂಬ ಸಿನಿಮಾ ಮಾಡಿದ್ದರು. ಅದು ಔಟ್ ಅಂಡ್ ಔಟ್ ಲವ್‌ಸ್ಟೋರಿ. ಈ ಬಾರಿ ಅವರು ಸಸ್ಪೆನ್ಸ್-ಥ್ರಿಲ್ಲರ್ ಮೊರೆ ಹೋಗಿದ್ದಾರೆ. ಅದು “ಹ್ಯಾಂಗೋವರ್’ ಮೂಲಕ. ಹೌದು, ವಿಠಲ್ ಈಗ “ಹ್ಯಾಂಗೋವರ್’ ಎಂಬ ಸಿನಿಮಾವನ್ನು ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ನಟ ಗಣೇಶ್ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
“ಹ್ಯಾಂಗೋವರ್’ ಪಕ್ಕಾ ಯೂತ್‌ಫುಲ್ ಕಥೆ. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ಸಾಗುತ್ತದೆ. ಮೂವರು ಹುಡುಗರು- ಮೂವರು ಹುಡುಗಿಯರು ಸೇರಿ ಪಾರ್ಟಿ ಮಾಡಿ, ಬೆಳಗ್ಗೆ ಎದ್ದು ನೋಡಿದಾಗ ಒಂದು ಕೊಲೆಯಾಗಿರುತ್ತದೆ. ಪಾರ್ಟಿ ಗುಂಗಿನಲ್ಲಿ ಎಲ್ಲವನ್ನು ಮರೆತಿರುವ ಹುಡುಗರು, ಆ ನಂತರ ಒಂದೊಂದೇ ಸನ್ನಿವೇಶಗಳನ್ನು ನೆನಪಿಸಿಕೊಳ್ಳುತ್ತಾ ಹೋಗುತ್ತಾರೆ. ಈ ಮೂಲಕ ಕಥೆ ಸಾಗುತ್ತದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಠಲ್, “ನಾವೇ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ನನ್ನ ಆ್ಯಕ್ಟಿಂಗ್ ಸ್ಕೂಲ್ ವಿದ್ಯಾರ್ಥಿಗಳು ಕೂಡಾ ನಟಿಸಿದ್ದಾರೆ. ಇಂದಿನ ಟ್ರೆಂಡ್‌ಗೆ ಬೇಕಾದಂತೆ ಕಥೆ ಸಿದ್ಧಪಡಿಸಿದ್ದು, ಇಡೀ ಸಿನಿಮಾ ರಿವರ್ ಸ್ಕ್ರಿನ್‌ಪ್ಲೇಯಲ್ಲಿ ಸಾಗುತ್ತದೆ’ ಎಂದು ವಿವರ ನೀಡಿದರು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಮೈಸೂರಿನ ಭರತ್ ಅವರ ಸ್ನೇಹಿತ ರಾಕೇಶ್ ಈ ಸಿನಿಮಾ ನಿರ್ಮಿಸಿದ್ದಾರೆ. ವಿಠಲ್ ಅವರ ಕಥೆಯನ್ನು ಭರತ್, ರಾಕೇಶ್‌ಗೆ ಕೇಳಿಸಿದ್ದು, ಕಥೆ ಇಷ್ಟಪಟ್ಟು ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಭರತ್, ವಿಠಲ್ ಅವರ ಸ್ಟೂಡೆಂಟ್. ಅವರು ಮಾಡಿಕೊಂಡಿದ್ದ ಕಥೆ ಇಷ್ಟವಾಗಿ ತಮ್ಮ ಸ್ನೇಹಿತರಿಗೆ ಹೇಳಿ, ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡರು ಭರತ್. ಅದರ ಹೊರತಾಗಿ ಇದೊಂದು ಹೊಸ ಬಗೆಯ ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾವಾಗುವ ವಿಶ್ವಾಸ ಅವರಿಗಿದೆ. ಉಳಿದಂತೆ ಚಿತ್ರದಲ್ಲಿ ನಟಿಸಿದ ತೆಲುಗು ಮೂಲದ ರಾಜ್ ಅವರಿಗೆ ನಟನೆ, ಚಿತ್ರರಂಗದ ಬಗ್ಗೆ ಏನೂ ಗೊತ್ತಿರಲಿಲ್ಲವಂತೆ. ಅವೆಲ್ಲವನ್ನು ವಿಠಲ್ ಹೇಳಿಕೊಟ್ಟು, ನಟಿಸಲು ಪ್ರೋತ್ಸಾಹಿಸಿದರಂತೆ.
ಉಳಿದಂತೆ ಚಿತ್ರದಲ್ಲಿ ಚಿರಾಗ್, ಮಹತಿ ಭಿಕ್ಷು, ಸಹನ್ ಪೊನ್ನಮ್ಮ, ನಂದಿನಿ ನಟರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ತೆಲುಗು ನಟ ಶಫಿ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸಿದ್ದು, ವಿಠಲ್ ಅವರ ಕೆಲಸ ಹಾಗೂ ಅವರ ಜೊತೆಗಿರುವ ತಂಡ ನೋಡಿ ಖುಷಿಯಾಯಿತಂತೆ. ಚಿತ್ರಕ್ಕೆ ಪತ್ರಕರ್ತ ಗಣೇಶ್ ರಾಣೇಬೆನ್ನೂರು ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಮುಗಿದ ಬಳಿಕವೂ ಪ್ರೇಕ್ಷಕ ಹ್ಯಾಂಗೋವರ್‌ನಲ್ಲಿರುತ್ತಾನೆ ಎಂಬ ಭರವಸೆ ಅವರಿಂದ ಬರುತ್ತದೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಬೆಂಗಳೂರು, ಮೈಸೂರು, ಊಟಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ.