Advertisement

ವಿತಂಡವಾದಿ

10:08 AM Dec 27, 2019 | Lakshmi GovindaRaj |

ಒಮ್ಮೆ ವಿತಂಡವಾದಿ ಶಿಷ್ಯನೊಬ್ಬ ಗುರುವಿನ ಬಳಿಗೆ ಬಂದು ವಿಷಯವೊಂದರ ಬಗ್ಗೆ ಅನವಶ್ಯಕ ವಾದಕ್ಕಿಳಿದ. ಗುರುವು ಸಮಾಧಾನದಿಂದ ಎಷ್ಟೇ ಸರಳವಾಗಿ ಬಿಡಿಸಿ ಹೇಳುತ್ತಿದ್ದರೂ ಅವನು ಒಪ್ಪುತ್ತಿರಲಿಲ್ಲ. ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ವಾದ ಮುಂದುವರಿಸುತ್ತಿದ್ದ. ಅವನಿಗೆ ಬುದ್ಧಿ ಕಲಿಸಬೇಕೆಂದು ಗುರು ನಿರ್ಧರಿಸಿದ.

Advertisement

ಶಿಷ್ಯನನ್ನು ಕೋಣೆಯಲ್ಲಿ ಕೂರಿಸಿ ತಾನು ಅಡುಗೆ ಮನೆಗೆ ಹೋಗಿ ಚಹಾ ಸಿದ್ಧಪಡಿಸಿದ. ಶಿಷ್ಯನ ಮುಂದೆ ಒಂದು ಖಾಲಿ ಲೋಟವನ್ನಿಟ್ಟು ಅದರೊಳಗೆ ಚಹಾವನ್ನು ಸುರಿಯಲಾರಂಭಿಸಿದರು. ಲೋಟ ತುಂಬಿ ಚಹಾ ಹೊರಗೆಲ್ಲಾ ಚೆಲ್ಲುತ್ತಿದ್ದರೂ ಗುರುಗಳು ಮಾತ್ರ ಚಹಾವನ್ನು ಲೋಟಕ್ಕೆ ಸುರಿಯುತ್ತಲೇ ಇದ್ದರು. ಗಲಿಬಿಲಿಗೊಂಡ ಶಿಷ್ಯ “ಇದೇನು ಗುರುಗಳೇ, ಲೋಟ ತುಂಬಿದ್ದರೂ ಚಹಾ ಸುರಿಯುತ್ತಲೇ ಇದ್ದೀರಲ್ಲಾ?’ ಎಂದು ಪ್ರಶ್ನಿಸಿದ.

ಗುರುವು “ಅದರಲ್ಲೇನು ತಪ್ಪಿದೆ?’ ಎಂದು ಮರುಪ್ರಶ್ನಿಸಿದರು. ಶಿಷ್ಯ- “ಲೋಟ ಖಾಲಿಮಾಡದ ಹೊರತು, ಚಹಾ ಹೇಗೆ ಪುನಃ ಲೋಟದೊಳಗೆ ಹೋದೀತು?’ ಎಂದು ಕೇಳಿದನು. ಅದಕ್ಕೆ ಗುರುವು “ನೀನೂ ಅಷ್ಟೇ… ಈ ತುಂಬಿರುವ ಚಹಾ ಲೋಟದಂತೆಯೇ ಆಗಿದ್ದೀಯಾ… ನಿನ್ನದೇ ಅಭಿಪ್ರಾಯ, ಆಲೋಚನೆಗಳಿಂದ ತುಂಬಿ ಹೋಗಿದ್ದೀಯಾ… ಹಾಗಾಗಿ ನಾನು ಹೇಳುವುದು ನಿನ್ನ ತಲೆಯೊಳಗೆ ಇಳಿಯುತ್ತಿಲ್ಲ.

ಮೊದಲು ಬೇಡವಾದದ್ದನ್ನೆಲ್ಲಾ ಹೊರಹಾಕು. ನಂತರವಷ್ಟೇ ನಾನು ಹೇಳುವ ಮಾತುಗಳು ನಿನ್ನೊಳಗೆ ಇಳಿಯುತ್ತದೆ.’ ಎಂದು ಹೇಳಿದರು. ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ವಾದ ಮಾಡುವುದನ್ನು ನಿಲ್ಲಿಸಿದನು. ತನಗೆ ತಿಳಿಯದೇ ಇರುವ ವಿಚಾರಗಳನ್ನು ನಿರ್ಲಕ್ಷ್ಯ ವಹಿಸದೆ, ತಿಳಿದುಕೊಳ್ಳುವ ಮನಸ್ಸು ಮಾಡುವುದಾಗಿ ನಿರ್ಧರಿಸಿದನು.

* ಪ.ನಾ.ಹಳ್ಳಿ ಹರೀಶ್‌ ಕುಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next