Advertisement
ಅಲ್ಲಿ ಆಹಾರಪ್ರಿಯರೆಲ್ಲ ಇರುವೆಯಂತೆ ಲಗ್ಗೆ ಇಟ್ಟಿದ್ದರು. ಬೆಂಗಳೂರಿನ ಆರ್.ಟಿ. ನಗರದ ಮೈದಾನದಲ್ಲಿ ಹಾಗೆ ಜಾತ್ರೆ ರೂಪುಗೊಳ್ಳಲು ಕಾರಣ ಒಂದು, “ಅಡುಗೆ’ ಎನ್ನುವ ಆಕರ್ಷಣೆ. ಇನ್ನೊಂದು, ಅಲ್ಲಿಗೆ ಬಂದಿದ್ದ ಒಬ್ಬ ವಿಶಿಷ್ಟ ಬಾಣಸಿಗ. ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಅಕ್ಷರಶಃ ಗಾಂಧಾರಿಯಂತೆ ನಿಂತುಬಿಟ್ಟಿದ್ದ. ಮಹಾಭಾರತದಲ್ಲಿ ಗಾಂಧಾರಿ ಏನಾದರೂ, ಅಡುಗೆ ಮಾಡುವಂತಿದ್ದರೆ, ಆ ದೃಶ್ಯಗಳು ಹೇಗಿರುತ್ತಿದ್ದವು? ಎನ್ನುವುದನ್ನು ನಿಂತಲ್ಲೇ ನಾವೆಲ್ಲ ಕಲ್ಪಿಸಿಕೊಳ್ಳುತ್ತಿದ್ದೆವು.
Related Articles
Advertisement
ನನಗೆ ಈತನ ಬಗ್ಗೆ ಕುತೂಹಲ ತಡೆಯಲಾಗಲಿಲ್ಲ. “ಗಾಂಧಾರಿಯಂತೆ ಬಟ್ಟೆ ಕಟ್ಟಿಕೊಂಡು, ಅದ್ಹೇಗೆ ಅಡುಗೆ ಮಾಡುತ್ತೀರಿ?’ ಎಂದು ಕೇಳಿದೆ. “ಹೊರಗಿನ ಕಣ್ಣು ಮುಚ್ಚಿದ್ದರೂ ದೇಹವೇ ಕಣ್ಣಾಗಿ ನನ್ನೊಳಗಿನ ಚೈತನ್ಯ ಜಾಗೃತವಾಗುತ್ತದೆ. ಅಡುಗೆಯ ಪರಿಮಳವೇ ಪದಾರ್ಥದ ರುಚಿಯನ್ನು, ಬೆಂದ ಹದವನ್ನೂ ಸೂಕ್ಷ್ಮವಾಗಿ ಹೇಳುತ್ತದೆ. ಹೀಗಾಗಿ, ನಾನು ಈ ಹೊತ್ತಿನಲ್ಲಿ ನನ್ನ ಲಕ್ಷ್ಯವನ್ನು ಪರಿಮಳದತ್ತ ಕೇಂದ್ರೀಕರಿಸುತ್ತೇನೆ’ ಎಂದು ತನ್ನ ಅಡುಗೆಯ ಗುಟ್ಟನ್ನು ಹೇಳಿದ.
“ಇದು ಸರಸವಲ್ಲ, ಸಾಹಸವೂ ಅಲ್ಲ. ಕಲೆಯನ್ನು ಕ್ಯಾನ್ವಾಸ್‌ನ ಮೇಲೆ, ಚಿತ್ರಿಸುವುದಿಲ್ಲವೇ. ಇದೂ ಹಾಗೇ. ಆದರೆ, ಎಲ್ಲ ದಿನವೂ ನನ್ನ ದಿನವೇ ಆಗಿರಬೇಕಿಲ್ಲವಲ್ಲ? ಹೀಗಾಗಿ, ಬೆಂಕಿ ಅವಘಡ ತಪ್ಪಿಸಲು ನೀರನ್ನು ಹತ್ತಿರವೇ ಇಟ್ಟುಕೊಂಡಿರುತ್ತೇನೆ. ಈ ಕಲೆಯನ್ನು ತಪಸ್ಸಿನ ಶ್ರದ್ಧೆಯಲ್ಲಿ ಮಾಡುವುದರಿಂದ, ಇಲ್ಲಿಯತನಕ ಅಂಥದ್ದೇನೂ ದುರ್ಘಟನೆ ಸಂಭವಿಸಿಲ್ಲ’ ಎಂದು ಮಾತು, ವಿಸ್ತರಿಸಿದ.
ಆರಂಭದಲ್ಲಿ ಈತ ಬ್ಲೈಂಡ್ ಫೋಲ್ಡ್ ಕುಕ್ಕಿಂಗ್ ಪರಿಚಯಿಸಿದಾಗ, ಜನ ಇದೇನು ಹುಚ್ಚಾಟ ಎಂದಿದ್ದರಂತೆ. ಆದರೆ, ಸಂದೇಶ್‌ಗೆ ಕಲಿತ ಕಲೆಯಲ್ಲಿ ವಿಶ್ವಾಸವಿತ್ತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ, ಗೋಬಿ ಮಂಚೂರಿಯ ಮೊದಲ ಪ್ರಯತ್ನದಲ್ಲಿ, ಯಶಸ್ಸು ಸಿಕ್ಕಿತು. ಕ್ರಮೇಣ, ಆ ಕಲೆ ಈತನಿಗೆ ಒಲಿದುಬಂತು. ಬಾಲ್ಯದಿಂದಲೂ ಅಡುಗೆಯ ಜೊತೆಗೆ ಆಪ್ತ ನಂಟು ಇಟ್ಟುಕೊಂಡು, ಗಂಗಾವತಿಯಲ್ಲಿ ಈತ ಹೋಟೆಲ್ ತೆರೆದಾಗ, ಬಡವರ ಬಗ್ಗೆ ಕನಿಕರ ಹುಟ್ಟುತ್ತಿತ್ತಂತೆ.
ಭಿಕ್ಷುಕರಿಗೆ 2 ರೂ.ಗೆ ಉಪಾಹಾರ ಕೊಟ್ಟ ದಿನಗಳನ್ನೂ ಈತ ಸ್ಟಾರ್ ಹೋಟೆಲ್‌ನಲ್ಲಿದ್ದರೂ, ಮರೆಯುತ್ತಿಲ್ಲ. ಕಣ್ಣು ಕಟ್ಟಿಕೊಂಡೇ, ತರಕಾರಿಯನ್ನು ಹೆಚ್ಚುವುದು; ಕರುನಾಡಿನ ನಾನಾ ಖಾದ್ಯಗಳು, ಉತ್ತರ ಮತ್ತು ದಕ್ಷಿಣ ಭಾರತೀಯ ವಿಶೇಷಗಳನ್ನು ಲೀಲಾಜಾಲವಾಗಿ ತಯಾರಿಸುವುದು; ಪರಿಮಳದಿಂದಲೇ, “ಇದು ಇಂಥ ಪದಾರ್ಥ’ ಎಂದು ಹೇಳುವ ಈತನ ಜಾಣ್ಮೆ ನಿಜಕ್ಕೂ ಅಚ್ಚರಿ.
“ನಾವು ದಿನಕ್ಕೆ ಕೋಟಿ ಗಳಿಸಬಹುದು. ಆದರೆ, ಒಂದು ಅಗುಳನ್ನು ಒಂದೇ ದಿನಕ್ಕೆ ಸೃಷ್ಟಿಸಲಾರೆವು. ಅನ್ನದ ಬೆಲೆ ಅಷ್ಟು ದೊಡ್ಡದು. ನಮಗೆ ಹೆಚ್ಚಾಗಿ, ಚೆಲ್ಲುವ ಒಂದೇ ತುತ್ತಿಗಾಗಿ, ಇನ್ನೆಲ್ಲೋ ಒಂದು ಜೀವ ಕಾದು ಕುಳಿತಿರುತ್ತದೆ. ದಯವಿಟ್ಟು ಆಹಾರ ವ್ಯರ್ಥ ಮಾಡಬೇಡಿ’ ಎನ್ನುವ ಸಲಹೆ ಕೊಟ್ಟು, ಆತ ಕಾರ್ಯಕ್ರಮ ಮುಗಿಸಿದ್ದ.
* ಕವಿತಾ ಭಟ್