ಸದಾ ನಗುಮುಖ, ಗುಂಗುರು ಕೂದಲು, ಎದುರಾಳಿ ಬ್ಯಾಟ್ಸ್‌ಮನ್ ದಿಕ್ಕೆಡುವಂತಹ ಸ್ವಿಂಗ್ ಬೌಲಿಂಗ್, ವಿಕೆಟ್ ಕಿತ್ತಾಗ ಒಂದು ಕೈ ಮೇಲೆತ್ತಿ ಸರಳ ಸಂಭ್ರಮಾಚರಣೆ. ಇವೆಲ್ಲ ಒಂದು ಕಾಲದಲ್ಲಿ ಅದ್ಭುತ ಆಲ್ ರೌಂಡರ್ ಆಗಿ ಮೆರೆದಾಡಿದ್ದ, ಮತ್ತೋರ್ವ ಕಪಿಲ್ ದೇವ್, ವಾಸಿಂ ಅಕ್ರಂ ಎಂದೆನಿಸಿಕೊಂಡಿದ್ದ ಇರ್ಫಾನ್ ಪಠಾಣ್ ಸ್ಟೈಲ್.ಇರ್ಫಾನ್ ಪಠಾಣ್ ಜನಿಸಿದ್ದು 1984ರ ಅಕ್ಟೋಬರ್ 27ರಂದು. ಗುಜರಾತ್ ರಾಜ್ಯದ ಬರೋಡಾದಲ್ಲಿ. ( ಈಗಿನ ವಡೋದರಾ) ಸಹೋದರ ಖ್ಯಾತ ಕ್ರಿಕೆಟಿಗ ಯೂಸುಫ್ ಪಠಾಣ್. ಬರೋಡಾದ ಮಸೀದಿಯೊಂದರಲ್ಲಿ ಇವರ ತಂದೆ ಮೌಲ್ವಿಯಾಗಿದ್ದರು. ಹೀಗಾಗಿ ಪಠಾಣ್ ಸಹೋದರ ಬಾಲ್ಯ ಮಸೀದಿಯಲ್ಲೇ ಕಳೆದಿತ್ತು.
ಮೌಲ್ವಿಯಾಗಿದ್ದ ತಂದೆಗೆ ಸಹಜವಾಗಿಯೇ ಮಕ್ಕಳು ಅರೇಬಿಕ್ ಓದಿ ಇಸ್ಲಾಂ ಪಂಡಿತರಾಗಬೇಕೆಂಬ ಬಯಕೆಯಿತ್ತು. ಮಸೀದಿಗೆ ಭೇಟಿ ನೀಡುತ್ತಿದ್ದ ಇತರ ವಿದ್ವಾಂಸರೂ ಇದೇ ಸಲಹೆ ನೀಡುತ್ತಿದ್ದರು. ಆದರೆ ಈ ಸಹೋದರರ ಆಸಕ್ತಿ ಬೇರೆಯದೇ ಆಗಿತ್ತು. ಅದೇ ಕ್ರಿಕೆಟ್.
ಅಣ್ಣ ಯೂಸುಫ್ ಬ್ಯಾಟಿಂಗ್ ನಡೆಸುತ್ತಿದ್ದರೆ ತಮ್ಮನದು ಬೌಲಿಂಗ್. ಈ ಪುಟ್ಟ ಪೋರರು ಎಸೆದ ಚೆಂಡುಗಳು ಮಸೀದಿಯ ಗೋಡೆಯ ಮೇಲೆ ಅಚ್ಚೊತ್ತಿರುತ್ತಿದ್ದವು. ಆದರೆ ಮುಂದೊಂದು ದಿನ ಅದೇ ಮಸೀದಿಯನ್ನು ವಿಶ್ವ ಪ್ರಸಿದ್ದಿ ಮಾಡಿದ್ದು ಇದೇ ಪಠಾಣ್ ಸಹೋದರರು.
ಎಡಗೈ ವೇಗಿ ಮತ್ತು ಎಡಗೈ ಬ್ಯಾಟ್ಸಮನ್ ಆಗಿರುವ ಇರ್ಫಾನ್ ಪಠಾಣ್, ಅಂಡರ್ 14, ಅಂಡರ್-15 ಕೂಟಗಳಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದರು. 2003ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಮುಂದಿನ ವರ್ಷವೇ ಏಕದಿನ ಪದಾರ್ಪಣೆ ಮಾಡಿದರು. ಅದು 2006ರ ಪಾಕಿಸ್ಥಾನ ಟೆಸ್ಟ್ ಸರಣಿ. ಮೊದಲರೆಡು ಪಂದ್ಯಗಳು ನೀರಸ ಡ್ರಾನಲ್ಲಿ ಅಂತ್ಯವಾಗಿದ್ದವು. ಆದರೆ ಮೂರನೇ ಪಂದ್ಯಕ್ಕೆ ಕಿಚ್ಚು ಹಚ್ಚಿದ್ದು ಇರ್ಫಾನ್ ಪಠಾಣ್ ಹ್ಯಾಟ್ರಿಕ್. ಪಂದ್ಯದ ಮೊದಲ ಓವರ್ ನ ಕೊನೆಯ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು ಪಠಾಣ್ ದಾಖಲೆ ಬರೆದಿದ್ದರು. ಅದು ಕೂಡಾ ಪಾಕಿಸ್ಥಾನದ ದಿಗ್ಗಜ ಆಟಗಾರರಾದ ಸಲ್ಮಾನ್ ಭಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ರ ವಿಕೆಟ್ ಪಡೆದಿದ್ದರು.
2007ರಲ್ಲಿ ನಡೆದ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಚಾಂಪಿಯನ್ ಆಗುವಲ್ಲಿ ಪಠಾಣ್ ಕೊಡುಗೆ ಅಪಾರ. ಪಾಕಿಸ್ಥಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ಕುಸಿಯುವಂತೆ ಮಾಡಿದ್ದರು ಈ ಎಡಗೈ ಸ್ವಿಂಗ್ ಬೌಲರ್. ಈ ಸಾಧನೆಗೆ ಇರ್ಫಾನ್ ಪಠಾಣ್ ಗೆ ಪಂದ್ಯಶ್ರೇಷ್ಠ ಗೌರವವೂ ಸಿಕ್ಕಿತ್ತು.
ಲಂಕಾ ವಿರುದ್ಧ ದಿಲ್ಲಿ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್ ಗಾಯಾಳಾಗಿ ಹೊರಬಿದ್ದಾಗ ಅವರ ಸ್ಥಾನ ತುಂಬಿದ್ದು ಇದೇ ಇರ್ಫಾನ್. ಆ ಪಂದ್ಯದಲ್ಲಿ ಪಠಾಣ್ 93 ರನ್ ಗಳಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ತಮ್ಮ ಟೆಸ್ಟ್ ಜೀವನದ ಚೊಚ್ಚಲ ಮತ್ತು ಏಕೈಕ ಶತಕ ಬಾರಿಸಿದ್ದರು.
ಆಲ್ ರೌಂಡರ್ ಪಟ್ಟಿಯಲ್ಲಿ ವಿಶ್ವದ ಎರಡನೇ ಸ್ಥಾನಕ್ಕೇರಿದ್ದ ಇರ್ಫಾನ್ ಪಠಾಣ್ ಸತತ ಗಾಯಗಳಿಂದ ತಂಡದಲ್ಲಿ ಆಗಾಗ ಹೊರಬೀಳುತ್ತಿದ್ದರು. ಫಿಟ್ ನೆಸ್ ಕೊರತೆಯಿಂದಾಗಿ ಪಠಾಣ್ ಬೌಲಿಂಗ್ ಶೈಲಿಯೂ ಬದಲಾಯಿತು. ಇದರಿಂದಾಗಿ ಬೌಲಿಂಗ್ ವೇಗವೂ ತಗ್ಗಿತು. ಹೀಗಾಗಿ 2012ರ ನಂತರ ರಾಷ್ಟ್ರೀಯ ತಂಡದಲ್ಲಿ ಪಠಾಣ್ ಕಾಣಿಸಿಕೊಳ್ಳಲೇ ಇಲ್ಲ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಇರ್ಫಾನ್ ಪಠಾಣ್, ಕ್ರಿಕೆಟ್ ಕಾಮೆಂಟೇಟರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ