ಕನ್ನಡದಲ್ಲಿ ಸದ್ದಿಲ್ಲದೆಯೇ ಒಂದಷ್ಟು ಚಿತ್ರಗಳು ಚಿತ್ರೀಕರಣಗೊಳ್ಳುತ್ತವೆ. ಆ ಸಾಲಿಗೆ ಈಗ “ಒಂಥರಾ ಬಣ್ಣಗಳು’ ಚಿತ್ರವೂ ಒಂದು. ಈ ಚಿತ್ರದ ಮೂಲಕ ಸುನೀಲ್ ಭೀಮರಾವ್ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸುನೀಲ್, ಈ ಹಿಂದೆ ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ್ದರು. ಆ ಅನುಭವದ ಮೇಲೆ ಈಗ “ಒಂಥರಾ ಬಣ್ಣಗಳು’ ಚಿತ್ರ ಮಾಡುತ್ತಿದ್ದಾರೆ.
ಇನ್ನು, ಈ ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳಿವೆ. ಕಿರಣ್ ಶ್ರೀನಿವಾಸ್, ಹಿತ ಚಂದ್ರಶೇಖರ್, ಸೋನು ಗೌಡ, ಪ್ರತಾಪ್‌ನಾರಾಯಣ್ ಮತ್ತು ಪ್ರವೀಣ್ ನಟಿಸುತ್ತಿದ್ದಾರೆ. ಇಲ್ಲಿ ಯುವ ನಟ,ನಟಿಯರೇ ಇದ್ದಾರೆ ಅಂದಮೇಲೆ ಇದೊಂದು ಲವ್‌ಸ್ಟೋರಿ ಇರಬಹುದು ಎಂಬ ಮಾತು ಸಹಜವಾಗಿ ಕೇಳಿಬರುತ್ತೆ.
ಇಲ್ಲಿ ಪ್ರೀತಿ ಇದ್ದರೂ, ಅದರಲ್ಲೊಂದು ಗೆಳೆತನದ ಅಂಶವೂ ಇದೆ. ಇನ್ನು, ಇದು ಜರ್ನಿಯಲ್ಲಿ ಸಾಗುವ ಕಥೆ. “ಒಂಥರಾ ಬಣ್ಣಗಳು’ ಶೀರ್ಷಿಕೆಯೇ ಹೇಳುವಂತೆ, ಇಲ್ಲಿ ತರಹೇವಾರಿ ವ್ಯಕ್ತಿತ್ವಗಳ ದರ್ಶನವಾಗಲಿದೆ. ಅದೇನೆಂಬುದನ್ನು ಸಿನಿಮಾದಲ್ಲೇ ನೋಡಬೇಕು. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಉಳಿದಿದೆ.
ಆ ಹಾಡನ್ನು ಚಿತ್ರೀಕರಿಸಿದರೆ, ಚಿತ್ರ ಪೂರ್ಣಗೊಳ್ಳಲಿದೆ. ಆರಂಭದಲ್ಲಿ ಈ ಚಿತ್ರದ ಚಿತ್ರೀಕರಣವನ್ನು 51 ದಿನದಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ, ಎಲ್ಲವೂ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರಿಂದಲೇ ಕೇವಲ 29 ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರಕ್ಕೆ ಮನೋಹರ್ ಜೋಶಿ ಕ್ಯಾಮೆರಾ ಹಿಡಿದರೆ, ಭರತ್ ಬಿ.ಜೆ. ಸಂಗೀತ ನೀಡಿದ್ದಾರೆ.