Advertisement

ಬಲಿಪೀಠದಲ್ಲಿ ಹತ್ಯೆ ಯತ್ನ… ಭರತನನ್ನು ಮಹಾಕಾಳಿ ರಕ್ಷಿಸಿದ ಕಥೆ

02:57 PM Oct 23, 2018 | Team Udayavani |

ಅಂಗೀರಸ ಗೋತ್ರದಲ್ಲಿ ವಿನಯ ಶೀಲನಾದ ಒಬ್ಬ ಬ್ರಾಹ್ಮಣ ಶ್ರೇಷ್ಠನಿದ್ದನು. ಅವನ ಹಿರಿಯ ಹೆಂಡತಿಯಲ್ಲಿ ತನಗೆ ಸಮಾನರಾದ ಒಂಬತ್ತು ಪುತ್ರರನ್ನು ಪಡೆದನು. ಕಿರಿಯ ಮಡದಿಯಲ್ಲಿ ಒಬ್ಬ ಪುತ್ರನು ಹಾಗೂ ಒಬ್ಬ ಪುತ್ರಿಯು ಜನಿಸಿದರು. ಕಿರಿಯ ಮಡದಿಯ ಪುತ್ರನಾಗಿದ್ದವನೇ ರಾಜರ್ಷಿಯಾದ ಭರತನು. ‘ಅವನು ಮೃಗೇಶರೀರವನ್ನು ತೊರೆದು ಕೊನೆಯ ಜನ್ಮದಲ್ಲಿ ಬ್ರಾಹ್ಮಣನಾಗಿ ಜನ್ಮಪಡೆದನು’.

Advertisement

        ಬ್ರಾಹ್ಮಣನಾಗಿ ಜನ್ಮಪಡೆದಾಗಲೂ ಭಗವಂತನ ದಯೆಯಿಂದ ತನ್ನ ಹಿಂದಿನ ಜನ್ಮ ಪರಂಪರೆಯ ನೆನಪು ಇದ್ದುದ್ದರಿಂದ ಅವನು “ತನ್ನ ಯೋಗದಲ್ಲಿ ಪುನಃ ವಿಗ್ನವೂ ಒದಗದಿರಲಿ’ ಎಂಬ ಆ ಶಂಕೆಯಿಂದಲೇ ತಮ್ಮ ಬಂಧುಗಳ ಸಹವಾಸದಿಂದಲೂ ಹೆದರುತ್ತಿದ್ದನು. ಯಾರ ಸ್ಮರಣೆ ಮತ್ತು ಗುಣಕೀರ್ತನೆಗಳನ್ನೂ ಸದಾ ಮಾಡುತ್ತಿರುವುದರಿಂದ ಸಕಲ ಕರ್ಮಬಂಧನಗಳು ಕತ್ತರಿಸಿ ಹೋಗುವುದೋ, ಆ ಭಗವಂತನ ಅಡಿದಾವರೆಗಳನ್ನೇ ಸದಾ ನೆನೆಯುತ್ತಾ ತಾನು ಹುಚ್ಚನಂತೆಯೂ, ಮೂರ್ಖನಂತೆಯೂ, ಕುರುಡನಂತೆಯೂ , ಕಿವುಡನಂತೆಯೂ, ತೋರ್ಪಡಿಸಿಕೊಳ್ಳುತ್ತಿದ್ದನು.

            ತಂದೆಗಾದರೋ ಇತರ ಮಕ್ಕಳಲ್ಲಿರುವಷ್ಟೇ ಪ್ರೇಮ ಇವನಲ್ಲಿಯೂ ಇತ್ತು. ಆ ವಿಪ್ರವರ್ಯನು ಹುಚ್ಚನಂತೆ ಕಾಣುತ್ತಿದ್ದ ತನ್ನ ಆ ಮಗನಿಗೂ ಶಾಸ್ತ್ರಾನುಸಾರವಾಗಿ ಸಮವರ್ತನೆಯವರೆಗಿನ ವಿವಾಹ ಪೂರ್ವಭಾವಿಯಾದ ಸಂಸ್ಕಾರಗಳೆಲ್ಲವನ್ನು ಮಾಡಬೇಕೆಂಬ ಮನಸ್ಸಿನಿಂದ ಅವನಿಗೆ ಉಪನಯನ ಸಂಸ್ಕಾರ ಮಾಡಿದನು. ಹುಡುಗನಿಗೆ ಇಷ್ಟವಿಲ್ಲದಿದ್ದರೂ ತಂದೆಯು ಶಾಸ್ತ್ರವಿಧಿಗನುಸಾರವಾಗಿ ಶೌಚ – ಆಚಮನವೇ ಮುಂತಾದ ಎಲ್ಲ ಅವಶ್ಯಕ ಕರ್ಮಗಳನ್ನು ತನ್ನ ಕರ್ತತ್ವವೆಂಬ ಭಾವನೆಯಿಂದ ಅವನಿಗೆ ಕಲಿಸಿದನು. ಆದರೆ ಭರತನು ತನ್ನ ತಂದೆಯ ಎದುರಿನಲ್ಲಿಯೇ ಅವರ ಉಪದೇಶಕ್ಕೆ ವಿರುದ್ಧವಾಗಿಯೇ ಆಚರಿಸುತ್ತಿದ್ದನು. ಆದರೂ ಆ ತಂದೆಯ ಪ್ರೇಮವೂ  ಬಾಲಕನ ಮೇಲೆ ಕಡಿಮೆಯಾಗಿರಲಿಲ್ಲ. ಭರತನಲ್ಲಿ ಆಸಕ್ತಿ ಇಲ್ಲದಿದ್ದರೂ ತಂದೆಯು ಅವನಿಗೆ ಕಲಿಸುವುದನ್ನು ಬಿಡಲಿಲ್ಲ. ಆದರೆ ಪುತ್ರನನ್ನು ಶಿಕ್ಷಿತನನ್ನಾಗಿ ನೋಡುವ ಅವನ ಮನೋರಥ ಪೂರ್ಣವಾಗಲೇ ಇಲ್ಲ . ಹೀಗೆಯೇ ಅವನು ಕಾಲವಶನಾದನು ಅವನ ಕಿರಿಯ ಹೆಂಡತಿ ತನ್ನ ಎರಡು ಮಕ್ಕಳನ್ನು ತನ್ನ ಸವತಿಗೆ ಒಪ್ಪಿಸಿ ಗಂಡನೊಂದಿಗೆ ಸಹಗಮನ ಮಾಡಿದಳು.

               ಭರತನ ಒಡಹುಟ್ಟಿದವರೆಲ್ಲರೂ ಕರ್ಮಕಾಂಡದ ಬದುಕನ್ನೇ ಸರ್ವ ಶ್ರೇಷ್ಠವೆಂದು ತಿಳಿಯುತ್ತಿದ್ದರು. ಬ್ರಹ್ಮಜ್ಞಾನರೂಪವಾದ ಪರಮವಿದ್ಯೆಯ ಪರಿಚಯವೇ ಇಲ್ಲದವರೂ, ಭರತನ ಪ್ರಭಾವವನ್ನು ಅರಿಯದವರೂ ಆಗಿದ್ದು, ಅವನನ್ನು ಸದಾ ಮೂರ್ಖನೆಂದು ತಿಳಿಯುತ್ತಿದ್ದರು. ಭರತನಿಗಾದರು ಮಾನಾಪಮಾನದ ಭಾವನೆಯೇ ಇರಲಿಲ್ಲ. ಅದ್ದರಿಂದ ಸಾಧಾರಣ ಮನುಷ್ಯರಿಗೆ ಅವನು ಹುಚ್ಚ, ಮೂರ್ಖ ಅಥವಾ ಕಿವುಡ  ಎಂದು ಕರೆದರೂ ಅವನು ಅದಕ್ಕೆ ಅನುರೂಪವಾಗಿಯೇ ಮಾತಾಡುತ್ತಿದ್ದನು.

             ಯಾರಾದರೂ ತನ್ನಿಂದ ಏನೇ ಕೆಲಸ ಮಾಡಿಸಿಕೊಳ್ಳಲು ಬಯಸಿದರೆ ಅವರ ಇಚ್ಛೆಗನುಗುಣವಾಗಿ ಆ ಕೆಲಸವನ್ನು ಮಾಡಿಕೊಡುತ್ತಿದ್ದನು. ಅದಕ್ಕೆ ಪ್ರತಿಯಾಗಿ ಏನನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಾಲಿಗೆಯನ್ನು ಜಡವಾಗಿಸಿದ್ದನ್ನು ಹಸಿದಾಗ ಯಾರಾದರೂ ಏನನ್ನಾದರೂ ಕೊಟ್ಟರೆ ಆ ಅನ್ನ ಒಳ್ಳೆಯದಿದ್ದರೂ, ಹಳಸಿದ್ದರೂ, ಜಾಸ್ತಿಯಿದ್ದರೂ ಯಾವುದನ್ನೂ ಗಮನಿಸದೆ ಸುಮ್ಮನೆ ತಿನ್ನುತಿದ್ದನು.

Advertisement

             ಸ್ವತಃ ಸಿದ್ದವಾದ ಕೇವಲ ಜ್ಞಾನಾನಂದ ಸ್ವರೂಪವಾದ ಆತ್ಮಜ್ಞಾನವು ಆತನಿಗೆ ಉಂಟಾಗಿದ್ದರಿಂದ ಶೀತ-ಉಷ್ಣ, ಮಾನ-ಅಪಮಾನ ಮುಂತಾದ ದ್ವಂದ್ವಗಳಿಂದುಂಟಾಗುವ ಸುಖ-ದುಃಖಾದಿಗಳಲ್ಲಿ ದೇಹಾಭಿಮಾನದ ಸ್ಫೂರ್ತಿಯೇ ಆತನಿಗೆ ಉಂಟಾಗುತ್ತಿರಲಿಲ್ಲ.

           ಚಳಿ, ಸೆಕೆ, ಮಳೆ,ಬಿರುಗಾಳಿ ಇವಾವುದನ್ನು ಲೆಕ್ಕಿಸದೆ, ನಡುವಿಗೆ ಒಂದು ಕೊಳೆಯಾದ ವಸ್ತ್ರವನ್ನು ಸುತ್ತಿಕೊಂಡು, ಬರಿಮೈಯಲ್ಲೇ ಎಲ್ಲೆಂದರಲ್ಲಿ ಬರಿ ನೆಲದಮೇಲೆ ಬಿದ್ದುಕೊಂಡಿರುತ್ತಿದ್ದನು. ಆದರೆ ಅವನು ದೃಢಕಾಯನಾಗಿದ್ದನು.  ಅವನ ಜನಿವಾರವು ತುಂಬಾ ಕೊಳಕಾಗಿತ್ತು, ಸ್ನಾನವನ್ನು ಮಾಡುತ್ತಿರಲಿಲ್ಲ, ಇದರಿಂದ ಅವನ ದೇಹವು ಕೊಳೆಯಿಂದ ಕೂಡಿರುತ್ತಿತ್ತು. ಆದರೆ ಅವನಿಗೆ ದೇಹದ ಮೇಲೆ ಯಾವುದೇ ವ್ಯಾಮೋಹವಿರಲಿಲ್ಲ ಏಕೆಂದರೆ ವ್ಯಾಮೋಹದಿಂದ ಅವನು ಮೃಗೇಶರೀರ ಪಡೆದು ಯಾತನೆಯನ್ನು ಅನುಭವಿಸಿದ್ದೆಲ್ಲವೂ ಅವನಿಗೆ ಅರಿವಿತ್ತು . ಬಂಗಾರವು ಮಣ್ಣಿನಲ್ಲಿ  ಅಡಗಿಕೊಂಡಂತೆ ಅವನ ಬ್ರಹ್ಮಜ್ಞಾನದ ತೇಜಸ್ಸು ಅವನ ಜಡತ್ವದಿಂದ ಮರೆಯದಂತೆ ಕಾಣುತಿತ್ತು. ಆದ್ದರಿಂದ ಅಜ್ಞಾನಿಗಳು ಈತನು ಯಾವನೂ ಒಬ್ಬ ಬ್ರಾಹ್ಮಣನು, ಆದರೆ ಅಧಮ ಬ್ರಾಹ್ಮಣನು ಎಂದು ಹೇಳಿ ಅವನನ್ನು ತಿರಸ್ಕರಿಸುತ್ತಿದ್ದರು. ಆದರೆ ಭರತನು ಅದಾವುದನ್ನೂ ವಿಚಾರ ಮಾಡದೇ ಸ್ವಚ್ಛಂದವಾಗಿ ಓಡಾಡುತ್ತಿದ್ದನು. ಅವನ ಸಹೋದರರು ಸಹ ಅವನನ್ನು ತುಚ್ಛವಾಗಿ ಕಾಣುತ್ತಿದ್ದರು. ಅವನನ್ನು ಕೆಸರುಗದ್ದೆಯ ಕೆಲಸಕ್ಕೆ ನೇಮಿಸಿದರು. ರಾತ್ರಿಯಲ್ಲಿ ಕಾವಲುಕಾಯಲು ಇರುವಂತೆ ಸೂಚಿಸಿದರು, ಅದರಂತೆ ಅವನು ಅಲ್ಲಿಯೆ ಇರುತ್ತಿದ್ದನು.

            ಹೀಗಿರುವಾಗ ಒಮ್ಮೆ ಅಧರ್ಮಿಷ್ಠರಾದ ಕಳ್ಳರತಂಡದ ನಾಯಕನು ಪುತ್ರಕಾಮನೆಗಾಗಿ ಭದ್ರಕಾಳಿಗೆ ನರಬಲಿಯನ್ನು ಕೊಡುವ ಸಂಕಲ್ಪ ಮಾಡಿದನು. ಅವನು ಬಲಿಕೊಡುವುದಕ್ಕಾಗಿ ಕಟ್ಟಿಹಾಕಿದ್ದ ಮನುಷ್ಯನು ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದನು, ಇದರಿಂದ ಕೋಪಗೊಂಡ ನಾಯಕನು ಸೇವಕರನ್ನು ಕರೆದು ” ಅವನನ್ನು ಎಳೆದು ತನ್ನಿ ಇಲ್ಲವಾದರೆ ಬೇರೆ ಬಲಿಯನ್ನಾದರೂ ತನ್ನಿ ಎಂದು ಆದೇಶಿಸಿದನು.

          ಎಲ್ಲ ಕಡೆಯಲ್ಲಿ ಹುಡುಕಿದರೂ ಕಗ್ಗತ್ತಲೆ ಕವಿದಿದ್ದ ಕಾರಣ ಅವರ ಬಲಿಯ ವ್ಯಕ್ತಿ ಸಿಗಲಿಲ್ಲ. ಅದೇ ಸಮಯದಲ್ಲಿ ಅವರ ದೃಷ್ಟಿಯು ಅಲ್ಲೇ ಜಿಂಕೆ-ಹಂದಿ ಮುಂತಾದ ಪ್ರಾಣಿಗಳಿಂದ ಹೊಲವನ್ನು ರಕ್ಷಿಸುವುದಕ್ಕಾಗಿ ವೀರಾಸನದಲ್ಲಿ ಕುಳಿತಿದ್ದ ಆಂಗೀರಸ ಗೋತ್ರದ ಬ್ರಾಹ್ಮಣ ಕುಮಾರ ಭರತನ ಮೇಲೆ ಬಿತ್ತು. ಆ ಕಳ್ಳರು  “ಇವನು ತುಂಬಾ ಒಳ್ಳೆಯ ಲಕ್ಷಣಗಳಿಂದ ಕೂಡಿದ ನರಪಶುವಾಗಿದ್ದಾನೆ, ಇದರಿಂದ ನಮ್ಮ ಒಡೆಯನ ಕಾರ್ಯವು ಖಂಡಿತವಾಗಿ ಸಿದ್ಧಿಸುವುದು”. ಎಂಬ ಭಾವನೆಯಿಂದ ಭರತನನ್ನು ಹಗ್ಗಗಳಿಂದ ಕಟ್ಟಿ ಚಂಡಿಕಾದೇವಿಯ ದೇವಾಲಯಕ್ಕೆ ತಂದರು.

                   ಅನಂತರ ಆ ಕಳ್ಳರು ತಮ್ಮ ಪದ್ದತಿಯಂತೆ ಆತನಿಗೆ ವಿಧಿಪೂರ್ವಕವಾಗಿ ಸ್ನಾನಮಾಡಿಸಿ, ಹೊಸ ಬಟ್ಟೆಗಳನ್ನು ಉಡಿಸಿ, ಬಗೆ-ಬಗೆಯ ಒಡವೆಗಳಿಂದಲೂ, ಗಂಧ, ಮಳೆ,ತಿಲಕ ಮುಂತಾದವುಗಳಿಂದ ಚೆನ್ನಾಗಿ ಅಲಂಕರಿಸಿ ಊಟ ಮಾಡಿಸಿದರು. ಮತ್ತೆ ಧೂಪ, ದೀಪ ಮುಂತಾದ ಪೂಜಾಸಾಮಗ್ರಿಗಳೊಡನೆ ಬಲಿದಾನದ  ವಿಧಿಯಂತೆ ಭಜನೆ ಮಾಡಿ, ವಾದ್ಯಗಳನ್ನು ನುಡಿಸುತ್ತಾ ಭರತನನ್ನು ಭದ್ರಕಾಳಿಯ ಎದುರಿನ ಬಲಿಪೀಠದಲ್ಲಿ ತಲೆಬಾಗಿಸಿ ಕುಳ್ಳಿರಿಸಿದರು. ಅನಂತರ ಕಳ್ಳರ ಪುರೋಹಿತನು ನರಬಲಿಗೆ ಅಣಿಯಾದವನ ರಕ್ತದಿಂದ ದೇವಿಯನ್ನು ತೃಪ್ತಿಪಡಿಸಲಿಕ್ಕಾಗಿ ದೇವಿಮಂತ್ರಗಳಿಂದ ಅಭಿಮಂತ್ರಿಸಿದ ಒಂದು ಹರಿತವಾದ ಖಡ್ಗವನ್ನು ಎತ್ತಿಕೊಂಡನು.

                  ಆ ದರೋಡೆಕೋರರಾದರೂ ಸ್ವಾಭಾವಿಕವಾಗಿಯೇ ರಜೋಗುಣೀ -ತಮೋಗುಣಿಗಳಾಗಿದ್ದರು. ಅಲ್ಲದೆ ಹಿಂಸೆಯಲ್ಲಿ ಅವರಿಗೆ ಅಭಿರುಚಿಯಿತ್ತು. ಆ ಸಮಯದಲ್ಲಿ ಅವರು “ ಆಪತ್ಕಾಲದಲ್ಲಿ ಯಾವ ಹಿಂಸೆಯನ್ನು ಅನುಮೋದಿಸಲಾಗಿದೆಯೋ ಅದರಲ್ಲಿಯೂ ಬ್ರಾಹ್ಮಣನ ವಧೆಯನ್ನು ಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ”. ಅದರಲ್ಲಿಯೂ ಇವನು ಸಾಕ್ಷಾತ್ ಬ್ರಹ್ಮಭಾವವನ್ನು ಹೊಂದಿದ , ಬ್ರಾಹ್ಮಣ ಕುಮಾರನನ್ನು ಬಲಿಕೊಡಲು ಬಯಸುತ್ತಿದ್ದರು.

                 ಇಂತಹ ಭಯಂಕರವಾದ ಕುಕರ್ಮವನ್ನು ಕಂಡು ಭದ್ರ ಕಾಳಿಯ ಶರೀರದಲ್ಲಿ ತಡೆಯಲಸಾಧ್ಯವಾದ ಭರತನ ಬ್ರಹ್ಮ ತೇಜಸ್ಸಿನ ತಾಪವು ತುಂಬಿ ಆಕೆಯು ಇದ್ದಕ್ಕಿದ್ದಂತೆ ಮೂರ್ತಿಯನ್ನು ಒಡೆದುಕೊಂಡು ಅಲ್ಲಿ ಪ್ರಕಟವಾದಳು. ಕಡುರೋಷದಿಂದಲೂ, ಅಸಹನೆಯಿಂದಲೂ ಆಕೆಯ ಹುಬ್ಬುಗಳು ಮೇಲೆದ್ದು ಗಂಟುಹಾಕಿಕೊಂಡಿದ್ದವು. ಕರಾಳವಾದ ಕೋರೆದಾಡೆಗಳು ಹೊರಗೆ ಚಾಚಿಕೊಂಡಿದ್ದವು. ಕಣ್ಣುಗಳು ಕೆಂಪಾಗಿ ಆಕೆಯ ಮುಖವು ಅತ್ಯಂತ ಭೀಕರವಾಗಿತ್ತು. ಆಕೆಯ ಆ ಕರಾಳವಾದ ರೂಪವನ್ನು ನೋಡಿದಾಗ ಆಕೆಯು ಈ ಜಗತ್ತನ್ನೇ ಸಂಹರಿಸಿ ಬಿಡುವಳೆನೋ ಎಂಬಂತೆ ತೋರುತ್ತಿತ್ತು. ದೇವಿಯು ರೋಷಾವೇಶದಿಂದ ಗಟ್ಟಿಯಾಗಿ ಅಟ್ಟಹಾಸ ಮಾಡಿ ಪುರೋಹಿತನ ಕೈಯಿಂದ ಅಭಿಮಂತ್ರಿತವಾದ ಆ ಖಡ್ಗವನ್ನು ಕಿತ್ತುಕೊಂಡು ಅದರಿಂದಲೇ ಆ ಎಲ್ಲ ಪಾಪಿಗಳ ತಲೆಗಳನ್ನು ಹಾರಿಸಿದಳು ಮತ್ತು ತನ್ನ ಗಣಗಳೊಡನೆ ಆ ದುಷ್ಟರ ಕುತ್ತಿಗೆಗಳಿಂದ ಹರಿಯುತ್ತಿದ್ದ ಬಿಸಿರಕ್ತವನ್ನು ಹೀರಿ ಕುಣಿದು ಕುಪ್ಪಳಿಸುತ್ತ ಅವರ ತಲೆಬುರುಡೆಗಳನ್ನು ಚೆಂಡಾಡಿ ಭರತನನ್ನು ರಕ್ಷಿಸಿದಳು.

ಯಾರು ಭಗವಂತನ ನಿರ್ಭಯ ಚರಣಕಮಲಗಳನ್ನು ಆಶ್ರಯಿಸಿರುವನೂ ಅಂತಹ ಭಗವದ್ ಭಕ್ತನಿಗೆ ಎಂತಹ ಆಪತ್ತು ಬಂದರು ಯಾವ ರೀತಿಯ ಕಳವಳವೂ ಉಂಟಾಗುವುದಿಲ್ಲ.. ಆ ಭಗವಂತನು ಒಂದಲ್ಲ ಒಂದು ರೂಪದಲ್ಲಿ ಬಂದು ಭಕ್ತರನ್ನು ರಕ್ಷಿಸಿಯೇ ರಕ್ಷಿಸುತ್ತಾನೆ.

ಮುಂದುವರೆಯುವುದು…

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next