Advertisement

ಜಲೀಲ ರೆಬೆಲ್‌ ಆದ ಕಥೆ

12:03 PM May 29, 2018 | |

ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯದಲ್ಲಿ ಏಕಕಾಲಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಬಂದ ನಟರು ಅನೇಕರಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಅಂಬರೀಶ್‌ ಅವರು ಮಾತ್ರ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ನಟರೆಂದು ಹೇಳಬಹುದು. ಸಾಮಾನ್ಯವಾಗಿ ಯಾರೇ ಆಗಲಿ ತಮ್ಮನ್ನು ತಾವು ಚಿತ್ರರಂಗಕ್ಕೆ ಪರಿಚಯಿಸಿಕೊಳ್ಳ ಬಯಸುವುದು ನಾಯಕನ ಪಾತ್ರದ ಮೂಲಕ.

Advertisement

ಆದರೆ, ಅಂಬರೀಶ್‌ ಚಿತ್ರರಂಗಕ್ಕೆ ಕಾಲಿರಿಸಿದ್ದೇ ಪೋಷಕ ನಟರಾಗಿ. ಪುಟ್ಟಣ್ಣರಂಥ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿ, ಬೆಳೆದು ಬಂದ ಅವರಿಗೆ ಯಾವುದೇ ಪಾತ್ರವಾಗಲಿ- ಸಲೀಸು. ನಟನೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿರುವ ಅಂಬರೀಶ್‌ ಕನ್ನಡ ಚಿತ್ರರಂಗದ ಪಾಲಿಗೆ ಇಂದಿನ ಸಂದರ್ಭದಲ್ಲಿ ಹಿರಿಯಣ್ಣ.

ಚಿತ್ರರಂಗ, ಕನ್ನಡದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುವ ನಾಯಕ-ನಟ, ತಮ್ಮ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಜನಾನುರಾಗಿ. ಅಂಬರೀಶ್‌ – ಮಂಡ್ಯದ ಮಂದಿಗೆ, ಅಭಿಮಾನಿಗಳಿಗೆ -ಅಂಬಿ 66ನೇ ವಸಂತಕ್ಕೆ ಕಾಲಿರಿಸುತ್ತಿರುವ ಈ ಸಂದರ್ಭದಲ್ಲಿ 46 ವರ್ಷಗಳ ಚಿತ್ರಜೀವನದ ವಿಶ್ಲೇಷಣಾತ್ಮಕ ಲೇಖನ ನಿಮಗಾಗಿ….

ಅಂಬರೀಶ್‌ ಅಭಿನಯದಲ್ಲಿ ಸುದೀಪ್‌ ಒಂದು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಮತ್ತು ಆ ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಮಾತು ಕಳೆದ ವರ್ಷದ ಕೊನೆಯಲ್ಲಿ ಕೇಳಿ ಬಂತು. ಆದರೆ, ಅಂಬರೀಶ್‌ ಮಾತ್ರ ಎಲ್ಲೂ ತಾವು ಚಿತ್ರದಲ್ಲಿ ನಟಿಸಿರುವ ಬಗ್ಗೆ ಹೇಳಿಕೊಂಡಿರಲಿಲ್ಲ. ಅದೊಂದು ಪತ್ರಿಕಾಗೋಷ್ಠಿಯಲ್ಲಿ ಸುದೀಪ್‌ ಅವರು ಸಿಕ್ಕಾಗ, ಅಂಬರೀಶ್‌ ಅಭಿನಯದಲ್ಲಿ ಒಂದು ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದರು. ಆ ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಸುದೀಪ್‌ ಹೆಸರನ್ನು ಇಟ್ಟಿದ್ದಾಗಿ ಹೇಳಿದ್ದರು.

“ಅಂಬರೀಶ್‌ ಅವರಿಗೆ ಈ ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ. ಅವರ ಎನರ್ಜಿ ನೋಡಿದೆ. ಬಹಳ ಫ್ರೆಶ್‌ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಚರ್ಚೆಗಳಿಗೆ ಬಂದು ಕೂರುತ್ತಾರೆ. ಬಹಳ ಕಡಿಮೆ ನಾನು ಆತರ ನೋಡಿದ್ದು. ಎಷ್ಟೋ ಸರಿ, ಅವರೇ ಚರ್ಚೆಗೆ ಕರೀತಾರೆ. ಹೆಸರು ಬಹಳ ಚೆನ್ನಾಗಿದೆ ಅನಿಸ್ತು. ಟ್ರೈಲರ್‌ ಇನ್ನೂ ಚೆನ್ನಾಗಿರುತ್ತೆ. ಸಾಮಾನ್ಯವಾಗಿ ನಾವು ನಮಗೆ ವಯಸ್ಸಾಗಿರುವುದನ್ನು ಒಪ್ಪುವುದಿಲ್ಲ. ಅಂತಹ ಪಾತ್ರವದು. ಆ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಅದನ್ನು ಅವರೇ ಮಾಡಬೇಕು’ ಎಂದಿದ್ದರು ಸುದೀಪ್‌.

Advertisement

ಅದಾದ ಮೇಲೆ ಆ ಚಿತ್ರ ಸೆಟ್ಟೇರಿದ್ದೂ ಆಯ್ತು, ಚಿತ್ರೀಕರಣದಲ್ಲಿ ಅಂಬರೀಶ್‌ ಭಾಗವಹಿಸಿದ್ದೂ ಆಯಿತು. ಈಗ ಆ ಚಿತ್ರ ಮುಗಿಯುವ ಹಂತ ಬಂದಿದೆ. ಚಿತ್ರ ಹೇಗೆ ಮೂಡಿ ಬರುತ್ತಿದೆ, ಅಂಬರೀಶ್‌ ಹೇಗೆ ತೊಡಗಿಸಿಕೊಂಡಿದ್ದಾರೆ ಮತ್ತು ಚಿತ್ರದ ಬಗ್ಗೆ ಅವರು ಏನನ್ನುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಈ ಕುರಿತು ಅಂಬರೀಶ್‌ ಅವರನ್ನು ಮಾತಾಡಿಸುವ ಪ್ರಯತ್ನವೂ ಆಯಿತು.

ಆದರೆ, ಅಂಬರೀಶ್‌ ಅವರು ಮಾತನಾಡಲಿಲ್ಲ. “ಏನಿದೆ ಮಾತಾಡೋದು. ಯಾಕೆ ಮಾತಾಡಬೇಕು. ಮಾತಾಡೋದರಿಂದ ಏನಾಗತ್ತೆ. ಹೇಳಿದ್ದೇ ಹೇಳಬೇಕು. ಅದಕ್ಕೊಂದು ಸಂದರ್ಭ, ಕಾಲ ಅಂತ ಬರಬೇಕು. ಆಗ ಮಾತಾಡಬೇಕು. ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಮಾತನಾಡಿದರಾಯಿತು. ಆಗ ಅದಕ್ಕೊಂದು ಅರ್ಥ ಇರುತ್ತದೆ ‘ ಎಂಬುದು ಅವರ ನಿಲುವು.

“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವು ಇನ್ನು ಕೆಲವು ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾರೆ. ಅದರಿಲಿ. ಆದರೆ, ಚಿತ್ರತಂಡದವರು ಹೇಳುವಂತೆ ಅಂಬರೀಶ್‌ ಬಹಳ ಪ್ರೀತಿಯಿಂದ ತೊಡಗಿಸಿಕೊಂಡಿದ್ದಾರಂತೆ. ಹಗಲು-ರಾತ್ರಿ ಎನ್ನದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಈ ಚಿತ್ರದಲ್ಲಿ ಅವರು ಎರಡೆರೆಡು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪಾತ್ರಕ್ಕಾಗಿ ಲೀಸೆಯನ್ನೂ ಬಿಟ್ಟಿದ್ದಾರೆ.

ಯಮ, ಕೆಂಪೇಗೌಡ, ಗೊಂಬೆ ಆಡ್ಸೋನು: ಅಂಬರೀಶ್‌ ಅವರು ನಟನಾಗಿ ಯಾವುದೇ ಮಹತ್ವಾಕಾಂಕ್ಷೆ ಹೊತ್ತವರೇ ಅಲ್ಲ. ಇಂಥ ಪಾತ್ರ ಒಮ್ಮೆ ಮಾಡಬೇಕು ಅಂತ ಅಂಬಿ ಯಾವತ್ತೂ ಹೇಳಿದವರಲ್ಲ, ನಟನಾಗಿ ಅಷ್ಟೊಂದು ಪ್ಯಾಷಿನೇಟ್‌ ಆಗಿ ಅವರು ತೊಡಗಿಕೊಂಡವರಲ್ಲ. ತಮ್ಮ ಸಮಯಕ್ಕೆ ಬಂದು, ಬಣ್ಣ ಹಚ್ಚಿ, ಭಾರವಾದ ಕಾಸ್ಟೂಮ್‌ ಹೊತ್ತು ಅದರ ಹೊರುವಿಕೆಗೆ ಬೈದುಕೊಳ್ಳುತ್ತಾ ಹೊರೆ ಇಳಿಸಿ ಹೊರನಡೆದುಬಿಡುವ ಅವಸರದಲ್ಲೇ ಇರುವ ಅಂಬರೀಶ್‌ ಅವರು ಇನ್ಯಾವ ಪಾತ್ರದಲ್ಲಿ ನಮ್ಮೆದುರು ಎದುರಾದಾರು?

ಹಾಗೆ ನೋಡಿದರೆ, ಕೆಲವು ವರ್ಷಗಳ ಹಿಂದೆ ಅವರು ಊರ ಗೌಡನಾಗಿ “ವೀರ ಪರಂಪರೆ’ ಮಾಡಿದರು. ಯಮನ ಕಾಸ್ಟೂಮ್‌ನಲ್ಲಿ “ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಪಂಕಜ್‌ ಜೊತೆ “ರಣ’ ಎಂಬ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದರು. ಗೊಂಬೆ ಶಾಸ್ತ್ರ ಹೇಳುವ ವಿಶಿಷ್ಟ ಪಾತ್ರದಲ್ಲಿ “ಡ್ರಾಮಾ’ದಲ್ಲಿ ಎದುರಾದರು. ಫ್ಯಾಮಿಲಿ ಸೆಂಟಿಮೆಂಟ್‌ ಇರುವ “ಬುಲ್‌ಬುಲ್‌’ ಮಾಡಿದರು. “ಅಂಬರೀಶ’ ಚಿತ್ರದಲ್ಲಿ ಕೆಂಪೇಗೌಡನಾದರು.

ಇತ್ತೀಚಿನಷ್ಟು ವೈವಿಧ್ಯಮಯ, ಪೋಷಕ ಪಾತ್ರಗಳು ಹಿಂದೆಂದೂ ಅಂಬರೀಶ್‌ ಅವರಿಗೆ ಸಿಕ್ಕಿಯೇ ಇರಲಿಲ್ಲವೆನ್ನಬೇಕು. ಈಗೊಂದೈದು ವರ್ಷಗಳಿಂದಿತ್ತೀಚೆಗೆ ಮೈಚಳಿಬಿಟ್ಟು ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡ ಅಂಬರೀಶ್‌, ನಿರ್ದೇಶಕರು ಹೇಳಿದಂತೆ ಅಭಿನಯಿಸಿದರು. ಇನ್ನೂ ಸಾಕಷ್ಟು ಪಾತ್ರವನ್ನು ತಲೆಯಲ್ಲಿಟ್ಟುಕೊಂಡು ನಿರ್ದೇಶಕರು ಅಂಬಿ ಮನೆಯನ್ನು ಸಂಕೋಚದಿಂದ ಪ್ರವೇಶಿಸುತ್ತಿದ್ದರೇನೋ?

ಅಂಬರೀಶ್‌ ಮತ್ತೂಂದು ಇನ್ನಿಂಗ್ಸ್‌ನಲ್ಲಿ ಅಮಿತಾಭ್‌ ಬಚ್ಚನ್‌ ರೀತಿ ಬಿಡುವಿಲ್ಲದಷ್ಟು ತೊಡಗಿಕೊಳ್ಳುತ್ತಿದ್ದರೋ ಏನೋ? ಅಷ್ಟರಲ್ಲಿ ಚುನಾವಣೆ ಬಂತು, ಚುನಾವಣೆ ನಂತರ ರಾಜಕೀಯ ಜವಾಬ್ದಾರಿಯೂ ಅರಸಿ ಬಂದವು. ಕಳೆದ ಐದು ವರ್ಷಗಳಲ್ಲಿ ಅವರು ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ. “ದೊಡ್ಮನೆ ಹುಡುಗ’ ಮತ್ತು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಗಳನ್ನು ಬಿಟ್ಟರೆ,

ಅವರು ನಟಿಸಿದ್ದು ಅತಿಥಿ ಪಾತ್ರಗಳಲ್ಲೇ ಹೆಚ್ಚು. “ಅಂಬರೀಶ’, “ಹ್ಯಾಪಿ ಬರ್ಥ್ಡೇ’, “ರಾಜಸಿಂಹ’, “ಕುರುಕ್ಷೇತ್ರ’ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ನಂತರವೇನು ಎಂದು ಗೊತ್ತಿಲ್ಲ. ಏಕೆಂದರೆ, ಅಂಬರೀಶ್‌ ಮತ್ತೆ ಚುನಾವಣೆ ಎದುರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವುದು, ಈ ಚುನಾವಣೆಯ ಮೇಲೆ ಅವಲಂಬಿತವಾಗಿದೆ.

ವಿಲನ್‌ ಟು ರೆಬೆಲ್‌ ಹೀರೋ: ಅಂಬರೀಶ್‌ ಅವರು ಯಾವತ್ತೂ ರಾಜಕುಮಾರ್‌ ಅವರಂತೆ ಬಹುಮುಖವಿರುವ ಪಾತ್ರಗಳನ್ನು ಮಾಡಿ ಜನರನ್ನು ಮೆಚ್ಚಿಸಿದವರಲ್ಲ. ಡಾ. ವಿಷ್ಣುವರ್ಧನ್‌ ಅವರಂತೆ ಹೆಚ್ಚು ಫ್ಯಾಮಿಲಿ ಚಿತ್ರಗಳನ್ನು ಮಾಡಲಿಲ್ಲ. ಅಂಬರೀಶ್‌ ಅವರ ಸಿನಿಮಾಗಳ ಪಟ್ಟಿಯಲ್ಲೂ ಇನ್ನೂರಕ್ಕೂ ಹೆಚ್ಚಿಗೆ ಚಿತ್ರಗಳಿವೆ, ಆದರೆ ಅವೆಲ್ಲವೂ ಇವತ್ತಿಗೆ ನಮಗೆ ಥಟ್ಟನೆ ನೆನಪಾಗುವುದಿಲ್ಲ. ಪ್ರಾರಂಭದ ಬಹಳಷ್ಟು ಚಿತ್ರಗಳಲ್ಲಿ ಅವರು ವಿಲನ್‌ ಆಗಿಯೇ ಗುರುತಾದವರು.

ಥಟ್ಟನೆ ನೆನಪಿಸಿಕೊಂಡರೆ “ನಾಗರಹಾವು’ ಚಿತ್ರದ ಜಲೀಲನ ಪೆಡಸು ಹಣೆ, ಚುಡಾಯಿಸುವ ಮಾತು, “ಅವಳ ಹೆಜ್ಜೆ’ಯ ಕ್ರಿಮಿನಲ್‌, “ಅಂತ’ದ ಎದೆ ಝಲ್ಲೆನಿಸುವ ಕನ್ವರ್‌, “ದೇವರ ಕಣ್ಣು’ ಚಿತ್ರದ ರೇಪಿಸ್ಟ್‌, “ಧೈರ್ಯಲಕ್ಷಿ’ಯ ಗರ್ವದ ಗಂಡುಗಳೆಲ್ಲಾ ನೆನಪಾಗುತ್ತಾರೆ. ಅದರ ಮಧ್ಯೆ ಅವರು ತುಂಬ ಪ್ರೀತಿ ಹುಟ್ಟಿಸುವಂತೆ ಕಂಡಿದ್ದು ಕಣಗಾಲ್‌ ನಿರ್ದೇಶನದ “ಶುಭಮಂಗಳ’, “ರಂಗನಾಯಕಿ’, “ಮಸಣದ ಹೂ’ ಚಿತ್ರಗಳ ವಿಶಿಷ್ಟ ಪಾತ್ರಗಳಿಂದಾಗಿ.

ಬಹುಶಃ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಒಂದು ದಶಕದ ನಂತರ ಸ್ಟಾರ್‌ ಯಾರಾದರೂ ಆಗಿದ್ದಾರೆ ಎಂದರೆ ಅದು ಅಂಬರೀಶ್‌ ಅವರೇ ಇರಬೇಕು. ಆರಂಭದ 10 ವರ್ಷಗಳ ಕಾಲ ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, 80ರ ದಶಕದಲ್ಲಿ ಆರಂಭದಲ್ಲಿ ರೆಬೆಲ್‌ ಇಮೇಜ್‌ ಪಡೆದುಕೊಂಡರು. ಹಿಂದಿ ಚಿತ್ರರಂಗದಲ್ಲಿ ಅದಾಗಲೇ ಅಮಿತಾಭ್‌ ಬಚ್ಚನ್‌ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಗುರುತಿಸಿಕೊಂಡಿದ್ದರು. ಅದೇ ಕನ್ನಡದ ವಿಷಯಕ್ಕೆ ಬಂದಾಗ ಆ್ಯಂಗ್ರಿ ಯಂಗ್‌ ಮ್ಯಾನ್‌ ಎಂದರೆ, ಜನ ತೋರಿಸುವುದು ಅಂಬರೀಶ್‌ರನ್ನ.

ಅಷ್ಟರಲ್ಲಿ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಿರುದ್ಯೋಗ ತಾಂಡವವಾಡುತಿತ್ತು. ಭ್ರಷ್ಟಾಚಾರ ಹೆಚ್ಚತೊಡಗಿತ್ತು. ಕಳ್ಳದಂಧೆ, ಹೊಲಸು ರಾಜಕೀಯ ಇವೆಲ್ಲಾ ಕ್ರಮೇಣ ಹೆಚ್ಚಾಗತೊಡಗಿತ್ತು. ಇವಕ್ಕೆಲ್ಲಾ ಕೊನೆಯೆಂದು ಎಂದು ಸಾಮಾನ್ಯ ಜನ ಸಹ ಕೇಳುವಂಥಾ ಪರಿಸ್ಥಿತಿ ಇತ್ತು. ಇಂಥಾ ಸಂದರ್ಭದಲ್ಲಿ ಅವರು ತಮ್ಮ ಪ್ರತಿನಿಧಿಯಾಗಿ, ಅಪ್ಪಟ ಹೋರಾಟಗಾರನಾಗಿ, ಆ್ಯಂಗ್ರಿ ಯಂಗ್‌ ಮ್ಯಾನ್‌ನನ್ನು ಕಂಡಿದ್ದು ಅಂಬರೀಶ್‌ರಲ್ಲಿ.

ಕನ್ನಡದ ಆ್ಯಂಗ್ರಿ ಯಂಗ್‌ ಮ್ಯಾನ್‌: ಬಹುಶಃ ಅಂಬರೀಶ್‌ ಮೊದಲ ಬಾರಿಗೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದು “ಅಂತ’ ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರು ಸ್ಮಗ್ಲರ್‌ಗಳ ವಿರುದ್ಧ ಹೋರಾಡುವ ಶಿಷ್ಟ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದರು. ಅವರಿಗೆ ಇನ್ನೂ ದೊಡ್ಡ ಹೆಸರು ತಂದುಕೊಟ್ಟಿದ್ದು “ಚಕ್ರವ್ಯೂಹ’. ಈ ಚಿತ್ರದಲ್ಲಿ ಇಡೀ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕುವ ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದರು.

ಆ ನಂತರ ಅಂಬರೀಶ್‌ ಎಂದೂ ಹಿಂದಿರುಗಿ ನೋಡುವಂಥಾ ಪ್ರಮೇಯವೇ ಬರಲಿಲ್ಲ. ಅದರ ನಂತರ ಅಂಬರೀಶ್‌ ಸಾಲು ಸಾಲು ಚಿತ್ರಗಳಲ್ಲಿ ಅದೇ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡರು. “ಗಜೇಂದ್ರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಇದೇ ತರಹದ ಪಾತ್ರಗಳಲ್ಲಿ ಮುಂದುವರೆದರು. ಆ್ಯಂಗ್ರಿ ಯಂಗ್‌ ಮ್ಯಾನ್‌ ಜೊತೆಗೆ ಅಂಬರೀಶ್‌ ಇನ್ನೂ ಹಲವು ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ, ಜನ ಅವರನ್ನ ಗುರುತಿಸಿದ್ದು ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿಯೇ. ಅದಕ್ಕೆ ಕಾರಣವೂ ಇದೆ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಲೀ, ಕಳ್ಳನಾಗಲೀ, ಸುಳ್ಳನಾಗಲೀ, ಪ್ರೇಮಿಯಾಗಲೀ, ಡಾಕ್ಟರ್‌ ಆಗಲೀ- ಎಲ್ಲೆಲ್ಲೂ ಅವರ ಮುಖದೊಳಗೊಬ್ಬ ಗಡಸು ಗಂಡಸು, ಎದೆಯಲ್ಲಿ ಕೆಚ್ಚು, ಕಣ್ಣಲ್ಲಿ ಮಚ್ಚು. ಅಂಬರೀಶ್‌ ಎಂದರೆ ಅಭಿಮಾನಿಗಳ ಪಾಲಿಗೆ ಹಾಗೇ ಇರಬೇಕು. ಮಧ್ಯೆಮಧ್ಯೆ ಅಂಬಿ “ಮೇಘ ಬಂತು ಮೇಘ’ ಅಂತ ಹಾಡಿದರು, “ಸಪ್ತಪದಿ’, “ಹೃದಯ ಹಾಡಿತು’, “ಮಿಡಿವ ಹೃದಯಗಳು’ಗಾಗಿ ತುಂಬ ಮೃದು ಪ್ರೇಮಿಯಾದರು, “ಒಲವಿನ ಉಡುಗೊರೆ’ ತರುವ ಹತಾಶ ಪ್ರಿಯಕರನಾದರು, ಚಳಿ ಚಳಿ ಎನ್ನುತ್ತಾ ಅಂಬಿಕಾನನ್ನು ತಬ್ಬುವ ರಸಿಕನಾದರು,

“ನಮ್ಮೂರ ಹಮ್ಮಿರ’ನಾದರು, “ನ್ಯೂಡೆಲ್ಲಿ’ಯ ಪತ್ರಿಕಾ ಸಂಪಾದಕರಾದರು, ಮಠಗಳ ಬಣ್ಣ ಬಯಲು ಮಾಡುವ “ಗುರು ಜಗದ್ಗುರು’ವಿನಲ್ಲಿ ಗುರುವಿಗೆ ಜಗದ್ಗರುವಾದರು. ದುಡಿದ ಹಣದಲ್ಲಿ ಒಂದಿಷ್ಟು ಉಳಿಸಿ ಥಿಯೇಟರ್‌ಗೆ ಬಂದು ಕುಳಿತರೆ ಹಣೆ ಮೇಲಿನ ಕೂದಲನ್ನು ಎಡಗೈಲಿ ಸರಿಸಿ ಬೆವರುತ್ತಾ, ಖಳರನ್ನು ಕಣ್ಣಲ್ಲೇ ಬೆದರಿಸುತ್ತಾ ಫೈಟು ಮಾಡುವ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಅಂಬಿ ಕಂಡರು. ದೊಡ್ಡ ಕಣ್ಗಳು, ತಮ್ಮದೇ ವಿಶಿಷ್ಟ ಹೇರ್‌ಸ್ಟೈಲ್‌, ಎತ್ತರದ ವ್ಯಕ್ತಿತ್ವ, ಗಡಸು ದನಿಗಳು ಅಂಬರೀಶ್‌ ಅವರನ್ನು ನೆಚ್ಚಿನ ಹೀರೋ ಮಾಡಿದವು.

ಅಂಬರೀಶ್‌ ನಂತರ ಹಲವು ನಾಯಕರು ಆ್ಯಂಗ್ರಿ ಯಂಗ್‌ ಮ್ಯಾನ್‌ಗಳಾಗಿ ವಿಜೃಂಭಿಸಿದರು. ಆದರೆ, ಕನ್ನಡದ ಮೊದಲ ಆ್ಯಂಗ್ರಿ ಯಂಗ್‌ ಮ್ಯಾನ್‌ ಎಂದರೆ ಅದು ಅಂಬರೀಶ್‌ ಮಾತ್ರ. ಇಂಥ ಅಂಬರೀಶ್‌, ಇದೀಗ “ಅಂಬಿ ನಿಂಗೆ ವಯಸ್ಸಾಯ್ತೋ’ ಅಂತ ಹೇಳಿಕೊಂಡು ಮತ್ತೂಮ್ಮೆ ಜನರ ಎದುರು ಬರುತ್ತಿದ್ದಾರೆ. ವಯಸ್ಸಾದ ಅಂಬರೀಶ್‌ ಅವರನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಅದಕ್ಕೆ ಉತ್ತರ ಸಿಗಬೇಕು ಎಂದರೆ ಇನ್ನಷ್ಟು ದಿನಗಳು ಕಾಯಲೇಬೇಕು.

ಅಂಬರೀಶ್‌ ಅವರ ಟಾಪ್‌ ಟೆನ್‌ ಚಿತ್ರಗಳು
* ರಂಗನಾಯಕಿ
* ಅಂತ
* ಚಕ್ರವ್ಯೂಹ
* ನ್ಯೂಡೆಲ್ಲಿ
* ಮಸಣದ ಹೂ
* ಏಳು ಸುತ್ತಿನ ಕೋಟೆ
* ಒಲವಿನ ಉಡುಗೊರೆ
* ಇಂದ್ರಜಿತ್‌
* ಮಣ್ಣಿನ ದೋಣಿ
* ದಿಗ್ಗಜರು

ಅಂಬರೀಶ್‌ ಅವರ ಟಾಪ್‌ 12 ಹಾಡುಗಳು
* ಕನ್ನಡ ನಾಡಿನ ರಸಿಕರ ಮನವ (ರಂಗನಾಯಕಿ)
* ಅಕ್ಕಿ ಇಲ್ಲ ಬೇಳೆ ಇಲ್ಲ (ಗಜೇಂದ್ರ)
* ಆಲಯ ಮೃಗಾಲಯ (ಮೃಗಾಲಯ)
* ನಾನೇ ಕನ್ವರ್‌ಲಾಲ್‌ (ಅಂತ)
* ಸಂತಸ ಅರಳುವ ಸಮಯ (ಏಳು ಸುತ್ತಿನ ಕೋಟೆ)
* ಒಲವಿನ ಉಡುಗೊರೆ  (ಒಲವಿನ ಉಡುಗೊರೆ)
* ಚಕ್ರವ್ಯೂಹ ಇದು ಚಕ್ರವ್ಯೂಹ (ಚಕ್ರವ್ಯೂಹ)
* ಮೇಘ ಬಂತು ಮೇಘ (ಮಣ್ಣಿನ ದೋಣಿ)
* ಕೋಗಿಲೆ ಓ ಕೋಗಿಲೆ (ನಮ್ಮೂರ ಹಮ್ಮಿàರ)
* ನಲಿಯುತಾ ಹೃದಯ (ಹೃದಯ ಹಾಡಿತು)
* ಕುಚಿಕು ಕುಚಿಕು (ದಿಗ್ಗಜರು)
* ಗೊಂಬೆ ಆಡ್ಸೋನು (ಡ್ರಾಮ)

Advertisement

Udayavani is now on Telegram. Click here to join our channel and stay updated with the latest news.

Next