Advertisement

ಫ್ರಾನ್ಸ್‌ ದೇಶದ ಕತೆ: ಬಡ ಹುಡುಗಿಯ ಸಾಹಸ

10:21 AM Dec 23, 2019 | mahesh |

ಒಬ್ಬ ಧನಿಕನಿದ್ದ. ಅವನಿಗೆ ಮಕ್ಕಳಿರಲಿಲ್ಲ. ವಂಶವನ್ನು ಬೆಳಗಲು ಒಂದು ಮಗು ಬೇಕು ಎಂದು ಹಲವಾರು ಸಾಧು ಸಂತರನ್ನು ಭೇಟಿ ಮಾಡಿ ಪ್ರಾರ್ಥಿಸಿಕೊಂಡ. ಅವನ ಮನದ ಆಶೆ ಈಡೇರಲು ಸೂಕ್ತ ಕಾಲ ಬಂದಿತು. ಧನಿಕನ ಹೆಂಡತಿ ಗರ್ಭಿಣಿಯಾದಳು. ಅವಳಿಗೆ ಹೆರಿಗೆಯಾಗುವ ಹಿಂದಿನ ದಿನ ರಾತ್ರೆ ಧನಿಕ ಒಂದು ಕನಸು ಕಂಡ. ಅದರಲ್ಲಿ ಸಂತನೊಬ್ಬ ಕಾಣಿಸಿಕೊಂಡು, “”ಮಗನೊಬ್ಬನ ತಂದೆಯಾಗಲಿರುವೆ. ಆದರೆ, ಅದಕ್ಕಾಗಿ ತುಂಬ ಹಿಗ್ಗಬೇಡ. ಜನಿಸಿದ ಮಗುವನ್ನು ಹನ್ನೆರಡು ವರ್ಷ ತುಂಬುವವರೆಗೂ ನೆಲದ ಮೇಲಿಡಬಾರದು. ಕೈಬಿಟ್ಟರೆ ಮಗು ನಿನ್ನದಾಗಿ ಉಳಿಯುವುದಿಲ್ಲ” ಎಂದು ಎಚ್ಚರಿಸಿದ.

Advertisement

ಧನಿಕನು ಸಂತನ ಎಚ್ಚರಿಕೆಯನ್ನು ಅಲಕ್ಷ್ಯ ಮಾಡಲಿಲ್ಲ. ಮಗು ಜನಿಸಿದ ಕೂಡಲೇ ಎಲ್ಲ ದಾಸ, ದಾಸಿಯರನ್ನೂ ಬಳಿಗೆ ಕರೆದ. “”ಇಂದಿನಿಂದ ಹನ್ನೆರಡು ವರ್ಷ ತುಂಬುವವರೆಗೂ ಮಗುವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಒಬ್ಬರಲ್ಲದಿದ್ದರೆ ಒಬ್ಬರು ರಾತ್ರೆ-ಹಗಲೆಂದಿಲ್ಲದೆ ಹೆಗಲಿನ ಮೇಲೆ ಹೊತ್ತುಕೊಂಡು ನಿಲ್ಲಬೇಕು. ಅವನ ಸ್ನಾನ, ಊಟ, ನಿದ್ರೆ ಯಾವುದೂ ನೆಲದಲ್ಲಿ ನಡೆಯಬಾರದು. ಇದನ್ನು ಮೀರಿದರೆ ಮಗುವಿಗೆ ಅಪಾಯ ಬರುತ್ತದೆ. ನೀವು ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಿ” ಎಂದು ಹೇಳಿದ. ಅವರೆಲ್ಲರೂ ಧನಿಕನ ಸೂಚನೆಯನ್ನು ಚಾಚೂತಪ್ಪದೆ ಪಾಲಿಸುವುದಾಗಿ ಮಾತು ಕೊಟ್ಟರು. ಹೀಗೆ ಎಚ್ಚರಿಕೆಯಿಂದಲೇ ಮಗುವನ್ನು ಕೆಳಗಿಳಿಸದೆ ನೋಡಿಕೊಂಡರು. ಹನ್ನೆರಡು ವರ್ಷಗಳು ತುಂಬಲು ಕೇವಲ ಒಂದು ದಿನ ಉಳಿದಿತ್ತು.

ಹನ್ನೆರಡು ವರ್ಷಗಳ ಕಾಲ ಮಗನನ್ನು ಜೋಪಾನವಾಗಿ ನೋಡಿಕೊಂಡ ದಾಸ, ದಾಸಿಯರನ್ನು ಅಭಿನಂದಿಸಿ ಬೆಲೆಬಾಳುವ ಉಡುಗೊರೆ ನೀಡಲು ಧನಿಕ ಯೋಚಿಸಿದ. ಅದಕ್ಕಾಗಿ ದೊಡ್ಡ ಔತಣ ಕೂಟವನ್ನು ಏರ್ಪಡಿಸಿದ. ಎಲ್ಲರೂ ಸಂತೋಷವಾಗಿ ಅದರಲ್ಲಿ ಭಾಗಿಯಾಗಿರುವಾಗ ಒಂದು ಅಚಾತುರ್ಯವು ನಡೆಯಿತು. ದ್ರಾಕ್ಷಾರಸ ತುಂಬಿದ್ದ ಒಂದು ಗಾಜಿನ ಹೂಜಿಯು ಕೆಳಗೆ ಬಿದ್ದು ಒಡೆದು ನೆಲದ ಮೇಲೆ ಗಾಜಿನ ಚೂರುಗಳು ಹರಡಿದವು. ಮಗುವನ್ನು ಎತ್ತಿಕೊಂಡಿದ್ದ ದಾಸಿಯು ಅದನ್ನು ಕಂಡು ಯಾರ ಕಾಲಿಗಾದರೂ ಗಾಜಿನ ಚೂರು ತಗುಲಿದರೆ ಅಪಾಯವಾಗಬಹುದೆಂದು ಭಾವಿಸಿ ಆರಿಸಲು ನೆಲದ ಮೇಲೆ ಕುಳಿತಳು. ಆಗ ಕೈಯಲ್ಲಿದ್ದ ಮಗು ನೆಲಕ್ಕೆ ಜಾರಿತು. ನೆಲ ಮುಟ್ಟಿದ ಮರುಕ್ಷಣವೇ ಮಗು ಅದೃಶ್ಯವಾಗಿ ಹೋಯಿತು.

ಮಗುವನ್ನು ಕಳೆದುಕೊಂಡ ಧನಿಕ ಸಾಕಷ್ಟು ಗೋಳಾಡಿದ. ತಪ್ಪೆಸಗಿದ ಸೇವಕಿಯನ್ನು ಬಾಯಿಗೆ ಬಂದಂತೆ ನಿಂದಿಸಿದ. ಕಡೆಗೆ ತನಗೆ ತಾನೇ ಸಮಾಧಾನ ತಂದುಕೊಂಡ. ಅವನ ಹೆಂಡತಿ ಕೂಡ, “”ವಿಧಿ ಲಿಖೀತ ಹೀಗೆಯೇ ಇದ್ದರೆ ದಾಸಿಯನ್ನು ದೂರಿ ಫ‌ಲವೇನಿದೆ? ಮಗನನ್ನು ಹುಡುಕಿಸಿ ತರಲು ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವುದಕ್ಕೆ ಮುಂದಾಗೋಣ” ಎಂದು ಹೇಳಿದಳು. ಧನಿಕನಿಗೂ ಇದು ಸರಿಯಾದ ಸಲಹೆ ಅನಿಸಿತು. ಮರಳಿ ಮಗನನ್ನು ತಂದುಕೊಟ್ಟವರಿಗೆ ಮುನ್ನೂರು ಚಿನ್ನದ ತುಂಡುಗಳನ್ನು ಬಹುಮಾನ ನೀಡುವುದಾಗಿ ಎಲ್ಲ ಕಡೆಯೂ ಸಾರಿದ. ಚಿನ್ನದ ಆಶೆಯಿಂದ ಅನೇಕರು ಅದಕ್ಕಾಗಿ ಪ್ರಯತ್ನಿಸಿದರು. ಆದರೆ ಯಾರೂ ಅದರಲ್ಲಿ ಯಶಸ್ಸು ಸಂಪಾದಿಸಲಿಲ್ಲ.

ಅದೇ ಊರಿನಲ್ಲಿ ಒಬ್ಬ ಬಡ ಹೆಂಗಸು ಇದ್ದಳು. ಅವಳಿಗೆ ಮೂವರು ಹೆಣ್ಮಕ್ಕಳಿದ್ದರು. ಗಂಡ ತೀರಿಕೊಂಡಿದ್ದ. ಒಂದು ಗಿರಣಿಯಲ್ಲಿ ಕೆಲಸ ಮಾಡಿ ಬಂದ ಸಂಬಳದಲ್ಲಿ ಹೆಂಗಸು ಮಕ್ಕಳನ್ನು ಸಲಹುತ್ತಿದ್ದಳು. ಧನಿಕನು ಮಗನನ್ನು ಹುಡುಕಿಕೊಂಡು ಬಂದವರಿಗೆ ಚಿನ್ನದ ತುಂಡುಗಳನ್ನು ಕೊಡುವುದಾಗಿ ಹೇಳಿದ್ದಾನೆಂಬ ಸುದ್ದಿ ಅವಳಿಗೂ ಗೊತ್ತಾಯಿತು. ಅದನ್ನು ಮಕ್ಕಳ ಮುಂದೆ ಹೇಳಿದಾಗ ಹಿರಿಯ ಮಗಳು, “”ಅಮ್ಮಾ, ನಾನು ಈ ಕೆಲಸ ಮಾಡಿ ಬಹುಮಾನ ಪಡೆಯುತ್ತೇನೆ. ಅದರಿಂದ ನಮ್ಮ ಬಡತನ ನೀಗಿ ಸುಖವಾಗಿರಬಹುದು” ಎಂದು ಹೇಳಿದಳು.

Advertisement

ಹೆಂಗಸಿಗೆ ಒಂದು ವಿಶೇಷ ಜ್ಞಾನ ಇತ್ತು. ಅವಳು ಕುಳಿತಲ್ಲಿಯೇ ಜಗತ್ತಿನಲ್ಲಿ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂದು ಹೇಳುವ ಶಕ್ತಿ ಹೊಂದಿದ್ದಳು. ಮಗಳೊಂದಿಗೆ, “”ಅದು ಸುಲಭವಲ್ಲ ಮಗಳೇ, ಹುಡುಗ ಈಗ ದೆವ್ವಗಳ ಅರಮನೆ ಸೇರಿದ್ದಾನೆ. ಇಲ್ಲಿಂದ ತುಂಬ ದೂರದ ಹಾದಿಯಿದೆ. ದೆವ್ವಗಳನ್ನು ಮೋಸಗೊಳಿಸಿ ಮಗುವನ್ನು ತರಲು ಸಾಧ್ಯವಿಲ್ಲ. ಮನಸ್ಸನ್ನು ಗೆದ್ದರೆ ಮಾತ್ರ ಸಾಧ್ಯವಾದೀತು” ಎಂದಳು ಆಕೆ. ತಾನು ಅದನ್ನು ಸಾಧಿಸಿ ತೋರಿಸುವುದಾಗಿ ಹಿರಿಯ ಮಗಳು ಹೇಳಿದಳು.

ಒಂದು ಬಾಣಲೆ, ಒಂದು ಬೆಂಕಿಪೊಟ್ಟಣ, ಸ್ವಲ್ಪ ಒಣಹುಲ್ಲು, ಕೊಂಚ ಅಕ್ಕಿ ತೆಗೆದುಕೊಂಡು ದೊಡ್ಡವಳು ದೆವ್ವಗಳ ಅರಮನೆ ಹುಡುಕುತ್ತ ಮನೆಯಿಂದ ಹೊರಟಳು. ಮಧ್ಯ ರಾತ್ರೆಯ ಹೊತ್ತಿಗೆ ಒಂದು ದೊಡ್ಡ ಕೋಟೆಯನ್ನು ತಲುಪಿದಳು. ಅವಳಿಗೆ ಹಸಿವಾಗುತ್ತಿತ್ತು. ಮೈ ಕೊರೆಯುವ ಚಳಿ ಇತ್ತು. ಕೋಟೆಯ ಬಾಗಿಲಲ್ಲಿ ಕಲ್ಲುಗಳಿಂದ ಒಂದು ಒಲೆ ಹೂಡಿದಳು. ಒಣಹುಲ್ಲನ್ನಿರಿಸಿ ಬೆಂಕಿ ಮಾಡಿದಳು. ಬಾಣಲೆಯನ್ನು ಒಲೆಯ ಮೇಲಿಟ್ಟು ಧಾನ್ಯವನ್ನು ಬೇಯಿಸಿದಳು. ಬೆಂದ ಬಳಿಕ ಒಂದು ಎಲೆಗೆ ಹಾಕಿಕೊಂಡು ತಿನ್ನಲು ಕುಳಿತಳು. ಆಗ ಯುವಕನೊಬ್ಬ ಅಲ್ಲಿಗೆ ಬಂದ. “”ವ್ವಾವ್‌, ಊಟ! ಇದು ಯಾರಿಗಾಗಿ?” ಎಂದು ಕೇಳಿದ. ಅವಳು ಅವನತ್ತ ನೋಡಿ ಮುಖ ಸಿಂಡರಿಸಿ, “”ಯಾರಿಗಾಗಿಯೂ ಅಲ್ಲ, ನನಗಾಗಿ” ಎಂದಳು. ಅವನು ಮತ್ತೆ, “”ಈ ಬೆಂಕಿ ಯಾರಿಗಾಗಿ?” ಎಂದು ಪ್ರಶ್ನಿಸಿದ. “”ಅದೂ ಬೇರೆಯವರಿಗಾಗಿ ಅಲ್ಲ, ನನಗಾಗಿಯೇ”” ಎಂದು ಉತ್ತರಿಸಿದಳು. ಆಗ ಅವನ ಕಣ್ಣುಗಳಿಂದ ಧಾರಾಕಾರವಾಗಿ ತೊಟ್ಟಿಕ್ಕಿದ ಕಂಬನಿ ಅವಳ ತಲೆಯ ಮೇಲೆ ಬಿದ್ದು ಮುಖದ ಮೇಲೂ ಇಳಿಯಿತು. ಕಂಬನಿ ಕಣ್ಣುಗಳಿಗೆ ತಗುಲಿದ ಕೂಡಲೇ ಅವಳು ಕುರುಡಿಯಾಗಿಬಿಟ್ಟಳು. ದಿಕ್ಕು ತೋಚದೆ ಅಲೆಯತೊಡಗಿದಳು.

ದಿನಗಳು ಕಳೆದರೂ ಹುಡುಗನನ್ನು ಅರಸುತ್ತ ಹೋದ ಅಕ್ಕ ಮರಳಿ ಬರಲಿಲ್ಲವೆಂದು ಅವಳನ್ನು ಹುಡುಕಲು ಎರಡನೆಯವಳು ಹೊರಟಳು. ಒಂದು ಕಂಬಳಿ, ಕುಡಿಯಲು ಸ್ವಲ್ಪ ದ್ರಾಕ್ಷಾರಸ ತೆಗೆದುಕೊಂಡಳು. ಅವಳು ಕೂಡ ನಡುರಾತ್ರೆಯ ವೇಳೆಗೆ ಅದೇ ಕೋಟೆಯ ಬಳಿಗೆ ಬಂದಳು. ದ್ರಾಕ್ಷಾರಸವನ್ನು ಕುಡಿದು, ಕಂಬಳಿ ಹೊದ್ದುಕೊಂಡು ಮಲಗಲು ನಿರ್ಧರಿಸಿದಳು. ಆಗ ಯುವಕ ಅವಳೆದುರಿಗೆ ಬಂದ. “”ಓಹೋ, ದ್ರಾûಾರಸವಿದೆ! ಇದು ಯಾರಿಗಾಗಿ?” ಎಂದು ಕೇಳಿದ. ಅವಳು, “”ಬೇರೊಬ್ಬರಿಗಾಗಿ ಅಲ್ಲ, ನನಗಾಗಿ” ಎಂದಳು. ಯುವಕ, “”ಈ ಕಂಬಳಿ ಯಾರಿಗಾಗಿ?” ಎಂದು ಕೇಳಿದ. “”ಅದೂ ನನಗಾಗಿಯೇ, ನಿನಗಾಗಿ ಅಲ್ಲ” ಎಂದಳು ಆಕೆ. ಆಗ ಅವನ ಕಣ್ಣುಗಳಿಂದ ಕಂಬನಿ ಸುರಿದು ಅವಳ ತಲೆಯ ಮೂಲಕ ಮುಖಕ್ಕೆ ಇಳಿಯಿತು. ಅವಳೂ ಕಣ್ಣುಗಳನ್ನು ಕಳೆದುಕೊಂಡು ದಾರಿ ಕಾಣದೆ ಅಲೆದಾಡಬೇಕಾಗಿ ಬಂತು.

ಹಲವು ದಿನಗಳು ಕಳೆದರೂ ಅಕ್ಕಂದಿರು ಮರಳಲಿಲ್ಲವೆಂದು ಕೊನೆಯ ಹುಡುಗಿ ಅವರನ್ನು ಹುಡುಕಲು ಹೊರಟಳು. ಕೈಯಲ್ಲಿ ಒಂದು ಶೀಸೆ ನೀರು, ಹರಕು ಚಾಪೆ ಮಾತ್ರ ತೆಗೆದುಕೊಂಡಳು. ಹುಡುಕಿಕೊಂಡು ಮುಂದೆ ಬಂದು ಅವಳೂ ಕೋಟೆಯನ್ನು ತಲುಪಿದಳು. ಮಧ್ಯರಾತ್ರೆಯಾಗಿತ್ತು. ನೀರು ಕುಡಿದು ಚಾಪೆಯ ಮೇಲೆ ಮಲಗಿಕೊಳ್ಳಲು ನಿರ್ಧರಿಸಿದಳು. ಶೀಸೆಯ ಮುಚ್ಚಳ ತೆರೆಯುವಾಗ ಯುವಕ ಬಂದ. “”ನೀರು ಚೆನ್ನಾಗಿದೆ. ಇದು ಯಾರಿಗಾಗಿ?” ಎಂದು ಕೇಳಿದ. “”ಬೇಕಿದ್ದರೆ ನೀವೂ ಕುಡಿಯಬಹುದು, ತೆಗೆದುಕೊಳ್ಳಿ” ಎಂದು ಅವಳು ಅವನಿಗೆ ಕುಡಿಯಲು ನೀರು ಕೊಟ್ಟಳು. ಅವನು ನೀರು ಕುಡಿದ. “”ತುಂಬ ನಿದ್ರೆ ಬರುತ್ತಿದೆ, ಈ ಚಾಪೆ ಯಾರಿಗಾಗಿ?” ಎಂದು ಪ್ರಶ್ನಿಸಿದ. “”ನೀವೂ ಮಲಗಿಕೊಳ್ಳಬಹುದು” ಎಂದು ಹೇಳಿ ಅವಳು ಚಾಪೆಯನ್ನು ಬಿಡಿಸಿಕೊಟ್ಟಳು. ಯುವಕ ಅದರಲ್ಲಿ ಮಲಗಿಕೊಂಡ.

ಬೆಳಗಿನ ಸೂರ್ಯನ ಕಿರಣಗಳು ಮಲಗಿದ್ದ ಯುವಕನ ಮೈಗೆ ತಗಲುವಾಗ ಅವನು ದಿವ್ಯ ವಸ್ತ್ರಾಭರಣಗಳನ್ನು ಧರಿಸಿಕೊಂಡು ಮೇಲೇಳುವುದನ್ನು ಹುಡುಗಿ ನೋಡಿದಳು. ಆತ, “”ನಾನೊಬ್ಬ ರಾಜಕುಮಾರ. ಶಾಪದಿಂದಾಗಿ ನೂರಾರು ವರ್ಷಗಳಿಂದ ದೆವ್ವವಾಗಿ ಬದುಕಿಕೊಂಡಿದ್ದೆ. ಹುಡುಗಿಯೊಬ್ಬಳು ನನ್ನ ಮೇಲೆ ಕರುಣೆ ತೋರಿ ಏನಾದರೂ ಕೊಟ್ಟರೆ ಮತ್ತೆ ಮನುಷ್ಯನಾಗುತ್ತೇನೆ ಎಂದು ನನಗೆ ದೇವರು ಹೇಳಿದ್ದ. ಯಾರೂ ಏನೂ ಕೊಡಲಿಲ್ಲ. ಈಗ ನನ್ನ ದೆವ್ವದ ಬದುಕು ಮುಗಿದಿದೆ. ಇದಕ್ಕಾಗಿ ನಿನಗೇನು ಬೇಕು?” ಎಂದು ಕೇಳಿದ. ಹುಡುಗಿ, “”ನನ್ನ ಅಕ್ಕಂದಿರಿಬ್ಬರು ಕಾಣದಾಗಿದ್ದಾರೆ. ಅವರು ಮರಳಿ ಸಿಕ್ಕಿದರೆ ಅದೇ ಸಾಕು, ಬೇರೆ ಏನೂ ಬೇಡ” ಎಂದಳು. “”ಹಾಗಿದ್ದರೆ ನಿನಗೆ ಧನಿಕನ ಮಗ ಬೇಡವೆ? ಅವನು ಇಲ್ಲಿಯೇ ಇದ್ದಾನೆ. ಅವನನ್ನು ನಾನು ಕರೆತಂದುದು ಮರುಜನ್ಮ ಪಡೆಯುವುದಕ್ಕಾಗಿ. ಹುಡುಗನನ್ನು ಕರೆದುಕೊಂಡು ಹೋಗಿ ಚಿನ್ನದ ತುಂಡುಗಳನ್ನು ಪಡೆಯುವುದಿಲ್ಲವೆ? ಸುಖವಾಗಿ ಬದುಕುವ ದಾರಿ ಬಿಟ್ಟು ಅಕ್ಕಂದಿರಿಗಾಗಿ ಯಾಕೆ ಹಂಬಲಿಸುತ್ತಿರುವೆ?” ಎಂದು ಯುವಕ ಕೇಳಿದ. ಆದರೆ ಹುಡುಗಿ, “”ನಾವು ಒಟ್ಟಾಗಿಯೇ ಬದುಕಿಕೊಂಡಿದ್ದ ಸಹೋದರಿಯರು. ಒಬ್ಬರನ್ನು ಮರೆತು ಒಬ್ಬರು ಇರುವುದು ಸಾಧ್ಯವಿಲ್ಲ. ಅಕ್ಕಂದಿರಿದ್ದರೆ ಸಾಕು, ಅದನ್ನು ಬಿಟ್ಟು ಯಾವ ಚಿನ್ನವೂ ಬೇಡ” ಎಂದಳು.

ಯುವಕ ಹಿರಿಯ ಹುಡುಗಿಯರನ್ನು ಕರೆತಂದು ಕಣ್ಣುಗಳು ಮೊದಲಿನಂತಾಗುವಂತೆ ಮಾಡಿದ. “”ನೀವು ನನ್ನ ಬಳಿಯಿರುವ ಧನಿಕನ ಮಗನನ್ನು ಅವನ ಬಳಿಗೆ ಕರೆದುಕೊಂಡು ಹೋಗಿ. ಬಹುಮಾನವಾಗಿ ಬರುವ ಚಿನ್ನದ ತುಂಡುಗಳಿಂದ ಸುಖವಾಗಿ ಜೀವನ ನಡೆಸಿ” ಎಂದು ಹೇಳಿ ಹುಡುಗನ ಜೊತೆಗೆ ಕಳುಹಿಸಿಕೊಟ್ಟ. ದಯಾಗುಣದಿಂದ ತನಗೆ ದೆವ್ವದ ಜನ್ಮ ನೀಗಿ ಮತ್ತೆ ಮನುಷ್ಯ ಜನ್ಮ ನೀಡಿದವಳನ್ನು ಮದುವೆಯಾಗಿ ಸಂತೋಷವಾಗಿದ್ದ

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next