ಅಕ್ಕಿಆಲೂರು: ಮಹಿಳೆ ಮನಸ್ಸು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲಳು ಎಂಬುದಕ್ಕೆ ಸಮೀಪದ ಲಕ್ಷ್ಮೀಪುರ ನಾಗವೇಣಿ ಬಾಬಣ್ಣ ಗೊಲ್ಲರ ಎಂಬ ಮಹಿಳೆಯೇ ಸಾಕ್ಷಿ. ಕಳೆದ 15 ವರ್ಷಗಳಿಂದ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿರುವ ಅವರು ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ.
ಪ್ರಾಥಮಿಕ ಹಂತದ ಶಿಕ್ಷಣವೂ ಪಡೆಯದ ನಾಗವೇಣಿ ಅವರು ಕೃಷಿ ಕ್ಷೇತ್ರದಲ್ಲಿ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಕೃಷಿ ಮೇಲೆ ಅವರಿಗೆ ಎಲ್ಲಿಲ್ಲದ ಒಲವು, ಶ್ರದ್ಧೆ. ಕೃಷಿ ಕೂಡ ಅವರ ಕೈಹಿಡಿದಿದೆ. ಬಡತನ ಸಾಧಕರಿಗೆ ಮಾರಕವಲ್ಲ ಎಂಬುದು ಅರಿತಿದ್ದ ನಾಗವೇಣಿ ಛಲದಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಪತಿಗೆ ಆಸರೆಯಾಗಿ ನಿಂತಿರುವ ಅವರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯ ಗಳಿಸುತ್ತ ಇತರರಿಗೆ ಮಾದರಿ ಎನಿಸಿದ್ದಾರೆ.
ಶಾಲೆಯ ಮುಖವನ್ನೇ ನೋಡದ ನಾಗವೇಣಿ ಗೊಲ್ಲರ, ಎರೆಹುಳು ಸಾಕಾಣಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಕಾಯಕದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಕೃಷಿ ಕುಟುಂಬದಿಂದ ಬಂದಿದ್ದ ನಾಗವೇಣಿ ರೈತ ಬಾಬಣ್ಣ ಗೊಲ್ಲರ ಅವರ ಕೈಹಿಡಿದು, ಪತಿಗೆ ಸಹಕಾರಿಯಾಗುವ ಉದ್ದೇಶದಿಂದ ಕೃಷಿ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಪತಿ ಬಾಬಣ್ಣರಿಗೆ ಎರೆಹುಳು ಸಾಕಾಣಿಕೆ ಬಗ್ಗೆ ಆಸಕ್ತಿ ಇತ್ತು. ಇದನ್ನರಿತ ನಾಗವೇಣಿ ತಾನೂ ಕೂಡ ಅವರೊಟ್ಟಿಗೆ ಎರೆಹುಳು ಸಾಕಾಣಿಕೆ ಮಾಡಬೇಕೆಂಬ ಹಂಬಲದಿಂದ ಬೇರೆಯವರು ಸಾಕಿದ್ದ 2 ಕೆಜಿ ಎರೆಹುಳು ತಂದು ಪೋಷಣೆ ಮಾಡಿದ್ದರು. ನಂತರ ಎರೆಹುಳು ಗೊಬ್ಬರ ತಯಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ನಾಗವೇಣಿ ಅವರು ಆಯ್ಕೆ ಮಾಡಿಕೊಂಡಿರುವ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಎರೆಹುಳು ಸಾಕಣೆ ವೃತ್ತಿ ಇದೀಗ ಉದ್ಯಮ ಸ್ವರೂಪ ಪಡೆದುಕೊಳ್ಳುತ್ತಿದೆ. ಇವರು ತಯಾರಿಸುತ್ತಿರುವ ಎರೆಹುಳು ಗೊಬ್ಬರಕ್ಕೆ ಹೆಚ್ಚು ಬೇಡಿಕೆಯೂ ಬರಲಾರಂಭಿಸಿದೆ. ಇಲ್ಲಿನ ಎರೆಹುಳು ಗೊಬ್ಬರ ಕುಂದಾಪುರ, ಉಡುಪಿ, ಮಹಾರಾಷ್ಟ್ರ, ಶಿವಮೊಗ್ಗ, ಗಂಗಾವತಿ, ರಾಯಚೂರು, ದಾವಣಗೆರೆ, ಬೆಳಗಾವಿ, ಧಾರವಾಡ ಹೀಗೆ ರಾಜ್ಯದ ವಿವಿಧ ಭಾಗಗಳಿಗೆ ತಲುಪುತ್ತಿದೆ.
ಸಹಾಯಧನ ಪಡೆದು ಸಾಹಸ: ಖಾದಿ ಗ್ರಾಮೋದ್ಯೋಗ ಯೋಜನೆಯಡಿ ಸಹಾಯಧನ ಪಡೆದು ನಾಗವೇಣಿ, ತನ್ನ ಬಳಿ ಇದ್ದ ಹಣವನ್ನೂ ಹಾಕಿ 39 ಅಡಿ ಉದ್ದ ಮತ್ತು 27 ಅಡಿ ಅಗಲದ ಶೆಡ್ ಅನ್ನು ಎರೆಹುಳು ಸಾಕಣೆ ಮತ್ತು ಗೊಬ್ಬರ ತಯಾರಿಕೆಗಾಗಿ ನಿರ್ಮಿಸಿದ್ದಾರೆ. ಅದರಲ್ಲಿ ಸುಮಾರು 10 ತೊಟ್ಟಿ ನಿರ್ಮಿಸಿಗೊಬ್ಬರ ತಯಾರಿಸಲು ಪ್ರಾರಂಭಿಸಿದ್ದರು. ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಒಂದು ನೆಲದ ತೊಟ್ಟಿ ಮತ್ತು ಒಂದು ತಿಪ್ಪೆ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿ ಎರೆಹುಳು ಬಿಟ್ಟು ಗೊಬ್ಬರ ತಯಾರಿಕೆಯಲ್ಲಿ ನಾಗವೇಣಿ ತೊಡಗಿದ್ದಾರೆ. “ಗೊಬ್ಬರದ ತೊಟ್ಟಿಗಳಿಗೆ ಹಸಿರೆಲೆ ಸೊಪ್ಪು, ಚದುರಂಗ ಸೊಪ್ಪು, ಗೊಬ್ಬರದ ಸೊಪ್ಪು ಬಿಳಿಹುಲ್ಲಿನ ಪುಡಿ ಇನ್ನು ಅನೇಕ ತ್ಯಾಜ್ಯವಸ್ತು ಹಾಕಿ ಕೊಳೆಯಲು ಬಿಟ್ಟು ನಂತರ ಎರೆಹುಳು ಬಿಡುತ್ತಾರೆ. ಶೇ.50 ತೇವಾಂಶ ಇರುವಂತೆ ನೋಡಿಕೊಳ್ಳುತ್ತಾರೆ. ತೊಟ್ಟಿಗಳ ಮೇಲೆ ಬಿಸಿಲಿನ ಝಳ ಬೀಳದಂತೆ ಎಚ್ಚರ ವಹಿಸುತ್ತಾರೆ. ತ್ಯಾಜ್ಯ ವಸ್ತುಗಳನ್ನೆಲ್ಲ ಹುಳುಗಳುತಿಂದು ಹಾಕಿ ಚಹಾಪುಡಿಯಂತಹ ಎರೆಹುಳು ಗೊಬ್ಬರ ಸಿದ್ಧವಾಗುತ್ತದೆ. ಯುಡ್ರಿಲೇಸ್ ಜರ್ಮನ್ ತಳಿ ಮತ್ತು ಐಸೇನೀಯಾ ಪೆಟಿಡಾ ಎರೆಹುಳು ಸಾಕುವುದರಿಂದ ಗೊಬ್ಬರ ಬೇಗ ಸಿದ್ಧವಾಗುತ್ತದೆ’ ಎನ್ನುತ್ತಾರೆ ನಾಗವೇಣಿ.
ತಾವು ತಯಾರಿಸಿದ ಗೊಬ್ಬರ ತಮ್ಮ ಸ್ವಂತ ಹೊಲಕ್ಕೆ ಉಪಯೋಗಿಸುತ್ತಾರೆ ಮತ್ತು ತಾವೇ ಸಿದ್ಧಪಡಿಸಿದ ಸಂಜೀವಿನಿ ಎರೆ ಗೊಬ್ಬರ ಎಂ ಹೆಸರಿನಲ್ಲಿ ಬ್ರ್ಯಾಂಡೆಡ್ 50 ಕೆಜಿ ಚೀಲದಲ್ಲಿ ಮಾರಾಟ ಮಾಡುತ್ತಾರೆ. ಎರೆಹುಳು ಮಾರಾಟದಿಂದ ವರ್ಷಕ್ಕೆ ಏನ್ನಿಲ್ಲ ಎಂದರೂ 1ರಿಂದ 2 ಲಕ್ಷದವರೆಗೆ ಲಾಭ ಗಳಿಸುತ್ತಾರೆ. ತಮಗಿರುವ 5 ಎಕರೆ ಜಮೀನಿನಲ್ಲಿ ಭತ್ತ, ಅಡಕೆ, ಬಾಳೆ ಅಷ್ಟೇ ಅಲ್ಲದೇ ಹೈನುಗಾರಿಕೆ ಮಾಡಿದ್ದಾರೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಮತ್ತು ವಿನಾಕಾರಣ ಕಾಲಹರಣ ಮಾಡುವ ಇಂದಿನ ಯುವಕ-ಯುವತಿಯರಿಗೆ ನಾಗವೇಣಿ ಗೊಲ್ಲರ ಮಾದರಿ ರೈತ ಮಹಿಳೆ.
ಕಳೆದ 10-15 ವರ್ಷಗಳಿಂದ ಎರೆಹುಳುವಿನ ಗೊಬ್ಬರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಸ್ವತಃ ನಮ್ಮ ಹೊಲಕ್ಕೆ ಗೊಬ್ಬರ ಸಿಂಪಡಿಸುವ ಮೂಲಕ ಕೃಷಿಯಿಂದ ಸಾಕಷ್ಟು ಲಾಭ ಬಂದಿದೆ. ಇತ್ತೀಚಿನ ದಿನಗಳಲ್ಲಿ ಗೊಬ್ಬರ ತಯಾರಿಕೆ ಹೆಚ್ಚಿನ ಆರ್ಥಿಕಸಹಾಯವನ್ನೂ ಮಾಡುತ್ತಿದೆ. ಪತಿಯ ಸಹಕಾರವೂ ಈ ಕಾರ್ಯಕ್ಕೆ ಪ್ರೇರಣೆಯಾಗಿದೆ.
–ನಾಗವೇಣಿ ಬಾಬಣ್ಣ ಗೊಲ್ಲರರೈತ ಮಹಿಳೆ
-ಪ್ರವೀಣಕುಮಾರ ಶಿ. ಅಪ್ಪಾಜಿ