Advertisement

ನಿಮ್ಮ ನಿರೀಕ್ಷೆ ಸುಳ್ಳು ಮಾಡದ ಚಂಡಿ ಕಥೆ!

11:26 AM Mar 12, 2017 | |

ಆಕೆಗೆ ಸೀರೆ ಸುತ್ತಿಕೊಂಡು, ಅಡುಗೆ ಮಾಡಿಕೊಂಡು, ಮನೆ ನೋಡಿಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಲೈಫ್ನಲ್ಲಿ ಥ್ರಿಲ್‌ ಇರಬೇಕು ಎಂಬುದು ಆಕೆಯ ಆಸೆ. ಥ್ರಿಲ್‌ ಬೇಕು ಎಂದರೆ ಗನ್‌ ಹಿಡಿಯಬೇಕು ಎಂಬುದೂ ಗೊತ್ತಿದೆ. ಆದರೆ, ಅದಕ್ಕೆ ಅವಳಣ್ಣ ಒಪ್ಪುವುದಿಲ್ಲ. ಈ ಗನ್ನು, ಗ್ಯಾಂಗ್‌ವಾರ್‌, ರಕ್ತ ಎಲ್ಲಾ ಬೇಡ ಕಣೇ ತಂಗ್ಯವ್ವಾ ಎನ್ನುತ್ತಾನೆ. ಅದಕ್ಕವಳು ರಕ್ತ ಬರದೆ, ಜ್ಯೂಸ್‌ ಬರೋಕೆ ನಾನೇನು ಹಣ್ಣಾ ಅಣ್ಣಯ್ಯ ಎಂದು ಬಾಯಿ ಮುಚ್ಚಿಸುತ್ತಾಳೆ.

Advertisement

ಹೀಗೆ ಅಣ್ಣ-ತಂಗಿಯರ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯಗಳೆದ್ದು, ಅಣ್ಣ-ತಂಗಿ ಸೆಂಟಿಮೆಂಟು ಶುರುವಾಗಬೇಕು ಎನ್ನುವಷ್ಟರಲ್ಲಿ, ಅಣ್ಣನ ಕೊಲೆಯಾಗುತ್ತದೆ. ತಂಗಿಯ ಮೇಲೆ ಮಾರಣಾಂತಿಕವಾದ ಹಲ್ಲೆಯಾಗುತ್ತದೆ … ಅಲ್ಲಿಗೆ ರಾಗಿಣಿ ಎಂಬ ಡೇರ್‌ಡೆವಿಲ್‌ ಹೆಣ್ಣುಮಗಳ “ರಣಚಂಡಿ’ ಚರಿತ್ರೆಯ ಮೊದಲ ಅಧ್ಯಾಯ ಪರಿಸಮಾಪ್ತಿಯಾಗುತ್ತದೆ. ಹಾಗೆ ಹಲ್ಲೆಗೊಳಗಾದ ರಾಗಿಣಿ ಮತ್ತೆ ಎದ್ದು ಬಂದು ಸೇಡು ತೀರಿಸಿಕೊಳ್ಳುತ್ತಾಳಾ? ತೀರಿಸಿಕೊಂಡರೂ ಅದ್ಯಾವ ತರಹ ಎಂಬುದಕ್ಕೆ “ರಣಚಂಡಿ’ ಚಿತ್ರವನ್ನು ನೋಡಬೇಕು.

ಮಹಿಳಾ ಪ್ರಧಾನ ಚಿತ್ರಗಳು ಒಂದು ಕಡೆ ಕಡಿಮೆಯಾಗುತ್ತಿದ್ದರೆ, ಮಹಿಳಾ ಸಾಹಸ ಪ್ರಧಾನ ಚಿತ್ರಗಳಂತೂ ಸಾವಿನ ಅಂಚಿಗೆ ಬಂದು ನಿಂತಿದೆ. ಹಿಂದೊಮ್ಮೆ “ಚಂಡಿ ಚಾಮುಂಡಿ’, “ದುರ್ಗಿ’, “ಚಾಮುಂಡಿ’ಯಂತಹ ಹಲವು ಮಹಿಳಾ ಸಾಹಸಮಯ ಚಿತ್ರಗಳು ಬಂದಿವೆ. ಅಂಥದ್ದೊಂದು ಚಿತ್ರಗಳ ಪರಂಪರೆಯೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ರಾಗಿಣಿ, “ರಣಚಂಡಿ’ ಅವತಾರವನ್ನು ಎತ್ತಿದ್ದಾರೆ. 

ಹೆಣ್ಮಕ್ಕಳು ಲೆದರ್‌ ಬೂಟು-ಜಾಕೆಟ್ಟು ಹಾಕಿಕೊಂಡು, ಹಣೆಗೊಂದು ತಿಲಕ ಇಟ್ಟುಕೊಂಡು, ಕೈಯಲ್ಲಿ ಲಾಂಗು ಝಳಪಿಸಿಕೊಂಡು … ಖಳನಟನ ಎದೆಯ ಮೇಲೆ ಕುಂತು ರುದ್ರನರ್ತನ ಮಾಡುವ ಚಿತ್ರಗಳು ಹಿಂದೊಮ್ಮೆ ಪ್ರೇಕ್ಷಕರಲ್ಲಿ ಭಾರೀ ಸಂಚಲನವುಂಟು ಮಾಡುತ್ತಿದ್ದವು. “ರಣಚಂಡಿ’ ಸಹ ಅಂಥದ್ದೇ ಒಂದು ಪ್ರಯತ್ನ. ಮಹಿಳಾ ಸಾಹಸ ಪ್ರಧಾನ ಚಿತ್ರಗಳ ಪ್ರಮುಖ ವಿಷಯವೆಂದರೆ ದುಷ್ಟ ಶಿಕ್ಷೆ ಮತ್ತು ಶಿಷ್ಟ ರಕ್ಷೆ. ಇಲ್ಲೂ ಸಹ ಅದು ಮುಂದುವರೆದಿದೆ.  

ಇಲ್ಲೂ ದುಷ್ಟ ಶಿಕ್ಷೆ ಮತ್ತು ಶಿಷ್ಟ ರಕ್ಷೆ ಇದೆ. ರಕ್ಷಣೆ ಮಾಡುವುದಕ್ಕೆ ರಾಗಿಣಿ ಲೆದರ್‌ ಬೂಟು-ಜಾಕೆಟ್ಟು ತೊಟ್ಟು ಹಲವಾರು ಜನರೊಂದಿಗೆ ಹೊಡೆದಾಡುತ್ತಾರೆ. ಹಾರುತ್ತಾರೆ, ನೆಗೆಯುತ್ತಾರೆ, ಮಿಡ್‌ ಏರ್‌ನಲ್ಲಿ ನೇತಾಡುತ್ತಾ ವಿಲನ್‌ಗಳಿಗೆ ಹಲ್ವಾ ತಿನ್ನಿಸುತ್ತಾರೆ. ಹಾಗೆ ಹೊಡೆತ ತಿನ್ನುವವರು ನರಳಾಡುತ್ತಿದ್ದರೆ, ರಾಗಿಣಿ ಅಭಿಮಾನಿಗಳು ಖುಷಿಪಡುತ್ತಾರೆ. ರಾಗಿಣಿ ಉದ್ದುದ್ದ ಡೈಲಾಗು ಹೊಡೆಯುತ್ತಿದ್ದರೆ, ಅಕ್ಕಂಗೆ ಜೈ ಎನ್ನುತ್ತಾರೆ.

Advertisement

ಆ ಮಟ್ಟಿಗೆ ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಇಷ್ಟವಾಗುವಂತಹ ಸಿನಿಮಾ ಸಹ ಹೌದು. ಅಭಿಮಾನಿಗಳಲ್ಲದವರಿಗೆ ಮಾತ್ರ ಚಿತ್ರ ಏನೇನೂ ವಿಶೇಷವಲ್ಲ ಎಂದನಿಸಬಹುದು. ನೀವು ರಾಗಿಣಿಯವರ ಅಭಿಮಾನಿಯಾಗಿರದಿದ್ದರೆ, ಅದು ನಿಮ್ಮ ತಪ್ಪು. ಆದರೆ, ರಾಗಿಣಿ ಯಾಕೋ ಬಹಳ ಯಾಂತ್ರಿಕವಾಗಿ ನಟಿಸಿದ್ದಾರೆ ಎಂದನಿಸಿದರೆ ಅದು ನಿಮ್ಮ ತಪ್ಪಲ್ಲ. ಅಭಿನಯದ ವಿಷಯದಲ್ಲಿ ರಾಗಿಣಿ ಇನ್ನಷ್ಟು ಶ್ರಮಪಡಬೇಕಿತ್ತೋ ಅಥವಾ ನಿರ್ದೇಶಕರು ಶ್ರಮಪಡಬೇಕಿತ್ತೋ ಗೊತ್ತಿಲ್ಲ. 

ಒಟ್ಟಿನಲ್ಲಿ ರಾಗಿಣಿ ಸ್ವಲ್ಪ ಡಲ್‌ ಆಗಿಯೇ ಕಾಣುತ್ತಾರೆ. ಅಭಿನಯದ ವಿಷಯದಲ್ಲಿ ರಮೇಶ್‌ ಭಟ್‌, ಪದ್ಮಜಾ ರಾವ್‌, ಶೋಭರಾಜ್‌, ಶರತ್‌ ಲೋಹಿತಾಶ್ವ ಅಭಿನಯ ಚೆನ್ನಾಗಿದೆ. ಹಾಡುಗಳು ಮತ್ತು ಛಾಯಾಗ್ರಹಣ ವಿಶೇಷವಾಗಿ ಗಮನಸೆಳೆಯುವುದಿಲ್ಲ. ಚಂಡಿಯ ಕಥೆ ಕೇಳಿರಬಹುದು ನೀವು. ಆ ಕಥೆಯಲ್ಲಿ ಚಂಡಿ ಎಲ್ಲವನ್ನೂ ಉಲ್ಟಾ ಮಾಡುತ್ತಾ ಹೋಗುತ್ತಾಳೆ. ಆದರೆ, “ರಣಚಂಡಿ’ ನೀವೇನನ್ನು ಊಹಿಸಿರುತ್ತೀರೋ ಅದನ್ನೇ ಮಾಡುತ್ತಾಳೆ ಅನ್ನೋದೇ ವಿಶೇಷ.

ಚಿತ್ರ: ರಣಚಂಡಿ
ನಿರ್ದೇಶನ: ಆನಂದ್‌ ಪಿ ರಾಜು
ನಿರ್ಮಾಣ:  ಕುಪ್ಪುಸ್ವಾಮಿ
ತಾರಾಗಣ: ರಾಗಿಣಿ, ಶೋಭರಾಜ್‌, ರಮೇಶ್‌ ಭಟ್‌, ಪದ್ಮಜಾ ರಾವ್‌, ಶರತ್‌ ಲೋಹಿತಾಶ್ವ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next