ಕನ್ನಡದಲ್ಲಿ ಗ್ರಾಮೀಣ ಚಿತ್ರಗಳು ಸಾಕಷ್ಟು ಬಂದಿವೆ. ಈಗ ಗ್ರಾಮವೊಂದನ್ನಿಟ್ಟುಕೊಂಡು “ಗ್ರಾಮ’ ಎಂಬ ಚಿತ್ರ ಶುರುವಾಗತ್ತಿದೆ. ಈ ಶೀರ್ಷಿಕೆ ಕೇಳಿದರೆ, ಕಲಾತ್ಮಕ ಸಿನಿಮಾ ಇರಬಹುದೇನೋ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಈ ಚಿತ್ರದ ಮೂಲಕ ಹರಿಕಿರಣ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ತೆಲುಗಿನ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹರಿಕಿರಣ್, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
“ಲೈಫ್ ಸೂಪರ್’ ಹಾಗೂ “ಭಾರತಿಪುರ ಕ್ರಾಸ್’ ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲಿಖೀತ್‌ಸೂರ್ಯ ಈ ಚಿತ್ರದ ಹೀರೋ. ಯಶ್‌ದೀಪ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಂತ್‌ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಅನುಭವ. ವಿಶೇಷವೆಂದರೆ, ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ತೆಲುಗಿನಲ್ಲಿ “ಗ್ರಾಮಂ’ ಎಂದು ಹೆಸರಿಡಲಾಗಿದೆ.
ಏನಿದು “ಗ್ರಾಮ’? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕರು, “ಬರೋಬ್ಬರಿ 30 ವರ್ಷಗಳಿಂದ ಖಾಲಿ ಇರುವ ಹಳ್ಳಿಯೊಂದರಲ್ಲಿ ನಡೆಯುವ ವಿಭಿನ್ನ ಕಥೆ ಇದು. ಖಾಲಿ ಇರುವಂತಹ ಆ ಹಳ್ಳಿಗೆ ನಾಯಕ ಹಾಗೂ ನಾಯಕಿ ಇಬ್ಬರೂ ಕಟ್ಟಿಕೊಂಡು ಕಾಲಿಡುತ್ತಾರೆ. ಆ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳೆಲ್ಲ ಇದ್ದರೂ ಜನ ಮಾತ್ರ ಇಲ್ಲದೆ, ಊರೆಲ್ಲಾ ಖಾಲಿ ಖಾಲಿಯಾಗಿರುತ್ತೆ.
ಆ ಹಳ್ಳಿಗೆ “ನೋ ಎಂಟ್ರಿ’ ಎಂಬ ಬೋರ್ಡ್ ಕೂಡ ಹಾಕಲಾಗಿರುತ್ತೆ. ಯಾರೂ ಹೋಗುವಂತಿಲ್ಲ. ಹೋದವರ್ಯಾರೂ ಹಿಂದಿರುಗಿ ಬರುವುದೇ ಇಲ್ಲ. ಅಂತಹ ಹಳ್ಳಿಗೆ ನಾಯಕಿ ಅಗೋಚರ ಶಕ್ತಿಗಳ ಕುರಿತಾದ ಸಂಶೋಧನೆಗೆ ಹೋಗುತ್ತಾಳೆ. ಹೀರೋ ಕೂಡ ಟಿವಿಯೊಂದರ ರಿಪೋರ್ಟರ್. ಆ ಹಳ್ಳಿಗೆ ಹೋದಾಗ, ಏನೆಲ್ಲಾ ನಡೆದುಹೋಗುತ್ತೆ ಎಂಬುದೇ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕರು.
ಇಲ್ಲಿ ಆ್ಯಕ್ಷನ್, ಕಾಮಿಡಿ, ಪ್ರೀತಿ ಜೊತೆಗೆ ಹಾರರ್ ಫೀಲ್ ಕೂಡ ಇದೆ. ಪರಿಪೂರ್ಣ ಮಾಸ್ ಅಂಶಗಳುಳ್ಳ ಚಿತ್ರವಿದು. ಇಲ್ಲಿ ಮೂರು ಭರ್ಜರಿ ಫೈಟ್‌ಗಳಿವೆ. ಚಿತ್ರದ ವಿಶೇಷವೆಂದರೆ, ಸೌಂಡಿಂಗ್. ಅದರ ಮೇಲೆಯೇ ಇಲ್ಲಿ ಹೆಚ್ಚು ಕೆಲಸ ನಡೆಯಲಿದೆ. “ಸುಲ್ತಾನ್’, “ದಂಗಲ್’ ಸೇರಿದಂತೆ ನೂರಾರು ಸಿನಿಮಾಗಳಿಗೆ ಕೆಲಸ ಮಾಡಿರುವ ವಿಕ್ರಮ್ ವಿಶ್ವಾಸ್ ಇಲ್ಲಿ ಎಫೆಕ್ಟ್ ಟಚ್ ಕೊಡಲಿದ್ದಾರೆ. ಬಾಬಿ ಸಂಕಲನ ಮಾಡುತ್ತಿದ್ದಾರೆ.
ರಾಮ್‌ಗೊಪಾಲ್‌ವರ್ಮ ಅವರ “ಕಿಲ್ಲಿಂಗ್ ವೀರಪ್ಪನ್’, “ರಕ್ತ ಚರಿತ್ರೆ’, “ಸರ್ಕಾರ್’, “ಐಸ್‌ಕ್ರೀಮ್’ ಸೇರಿದಂತೆ ಹಲವು ಚಿತ್ರಗಳಿಗೆ ಸಂಕಲನ ಮಾಡಿದ್ದ ಬಾಬಿ ಇಲ್ಲೂ ಸಂಕಲನ ಮಾಡುತ್ತಿದ್ದಾರೆ. “ಮಿಷನ್ ಇಂಪಾಸಿಬಲ್’, “ಎಂಐ4′ ಮತ್ತು ‘ಅವೆಂಜರ್’ ಚಿತ್ರಗಳಿಗೆ ಛಾಯಾಗ್ರಾಹಕರ ಜೊತೆ ಕ್ಯಾಮೆರಾ ಹಿಡಿದಿದ್ದ ಪ್ರಸಾದ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ರವಿಕಲ್ಯಾಣ್ ಸಂಗೀತವಿದ್ದು, ನಾಲ್ಕು ಹಾಡುಗಳು ಚಿತ್ರದಲ್ಲಿರಲಿವೆ. ರಾಣಾ ದಗ್ಗುಬಾಟಿ ಅವರಿಂದ ತೆಲುಗು ಮತ್ತು ಕನ್ನಡದಲ್ಲೂ ಹಾಡು ಹಾಡಿಸುವ ಯೋಚನೆ ಕೂಡ ಇದೆ ಎಂಬುದು ಹರಿಕಿರಣ್ ಮಾತು.
ಚಿತ್ರದಲ್ಲಿ ಸತ್ಯಪ್ರಕಾಶ್ ಎಂಎಲ್‌ಎ ಪಾತ್ರ ನಿರ್ವಹಿಸುತ್ತಿದ್ದಾರೆ. ಆಂಧ್ರ, ಕರ್ನಾಟಕ ಗಡಿಯಲ್ಲಿರುವ ಕದಿರಿ ಸಮೀಪದ ಒಂದು ಹಳ್ಳಿ ಸೇರಿದಂತೆ ಬೆಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಯಲಿದೆ. ಆಂಧ್ರ, ಕರ್ನಾಟಕ ಎರಡು ಸರ್ಕಾರಗಳು ತಮ್ಮ ಗಡಿಯ ಸಮೀಪದ ಹಳ್ಳಿ ಬಗ್ಗೆ ಕಾಳಜಿ ತೋರದ ಊರಲ್ಲಿ ಏನೇನು ನಡೆಯುತ್ತೆ ಎಂಬುದೇ ವಿಶೇಷ ಎನ್ನುವ ಹರಿಕಿರಣ್, ಮಾರ್ಚ್ 5ರಿಂದ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ.