Advertisement

ಒಂದು ಮುತ್ತಿನ ಕತೆ, ಅವಳು ಪ್ರೀತಿಯಿಂದ ಕರೆದರೆ ಸಮುದ್ರವೂ ಓಗೊಡತ್ತೆ!

11:02 AM Feb 08, 2017 | Harsha Rao |

ಆಕೆ ಅಷ್ಟೆತ್ತರದಿಂದ ಸುಯ್ಯಂತ ಮೀನಿನ ಹಾಗೆ ಧುಮುಕುತ್ತಾಳೆ. ಅವಳು ಧುಮುಕುವಲ್ಲಿಂದ ನೋಡಿದರೆ ಯಾರಿಗಾದರೂ ತಲೆ ತಿರುಗೀತು. ಅದೊಂದು ಪ್ರಪಾತದ ಅಂಚಿನ ಹಾಗಿರುವ ಜಾಗ. ದೊಡ್ಡ ಗುಡ್ಡವೊಂದರ ಕಡಿದಾದ ಕಾಲುಹಾದಿ, ಮಳೆಗಾಲದಲ್ಲಿ ಅಕ್ಕಪಕ್ಕದಲ್ಲಿ ಹುಲ್ಲುಬೆಳೆದು ನೆಲದಲ್ಲಿ ಅಲ್ಲಲ್ಲಿ ಪಾಚಿಕಟ್ಟಿದಂತಾಗುತ್ತದೆ. ಆ ದಾರಿಯಲ್ಲಿ ದೊಡ್ಡವರಿಲ್ಲದೇ ಓಡಾಡಬಾರದು ಅನ್ನೋದು ಚಿಕ್ಕಮಕ್ಕಳಿಗೆ ಅಮ್ಮಂದಿರ ಕಟ್ಟಪ್ಪಣೆ. ಆದರೆ ಈ ಹುಡುಗಿ ಚಿಕ್ಕವಳಿದ್ದಾಗಿಂದ ಈವರೆಗೆ ಅದೇ ದಾರಿಯಲ್ಲಿ ನಡೆಯುತ್ತಾಳೆ. “ಆ ಜಾರುವ ನೆಲದಲ್ಲಿ ಓಡಾಡಿದರೆ ಕಾಲು ಮುರೀತೀನಿ ಹುಷಾರ್‌’ ಎಂಬ ಅಮ್ಮನ ಗದರಿಕೆ ಅವಳಿಗಿಲ್ಲ. ಅವಳಮ್ಮ ಎಂದೋ ಇವಳನ್ನು ತೊರೆದು ನಡೆದುಬಿಟ್ಟಿದ್ದಾಳೆ, ಅಪ್ಪ ಕುಡುಕ. ಅವನ ಕುಡಿತಕ್ಕೆ, ಮನೆಯ ರೇಶನ್‌ಗೆ ಇವಳೇ ದುಡಿದ ಹಣ ಕೊಡಬೇಕು. ಸೊಂಟಕ್ಕೆ ಕಟ್ಟಿದ ಚೀಲ ತುಂಬಿದಷ್ಟೂ ಅವಳ ಮುಖ ಅರಳುತ್ತದೆ.  

Advertisement

ಈ ದಾರಿಯಲ್ಲಿ ನಡೆಯುವಾಗ ಅವಳಿಗೆ ಚಪ್ಪಲಿ ತೊಟ್ಟು ಅಭ್ಯಾಸ ಇಲ್ಲ. ಅವಳ ಬರಿಗಾಲ ಸ್ಪರ್ಶಕ್ಕೆ ದಾರಿ ತೆರೆದಿದೆ. ಅಷ್ಟಕ್ಕೂ ಅವಳು ಮಾಡೋ ಕೆಲಸ ನಮ್ಮ ನಿಮ್ಮ ಊಹೆಗೆ ನಿಲುಕದ್ದು. ಮುತ್ತು ಹುಡುಕುವ ಹುಡುಗಿ ಅವಳು. ಹುಟ್ಟಿದಾಗ ಇಟ್ಟ ಹೆಸರು ಮರೆತುಹೋಗಿದೆ. ಎಲ್ಲರೂ ಕರಿಯೋದು ಹೇನ್ಯೋ ಅಂತ. 

ಹೆನ್ಯೋ ಅಂದರೆ ಕೊರಿಯನ್‌ ಭಾಷೆಯಲ್ಲಿ ಸಮುದ್ರದ ಹೆಂಗಸು ಅಂತರ್ಥ. ಕೊರಿಯಾದ ಜೆಜು ಪ್ರಾಂತ್ಯದ ಕಡಲು ಹೇರಳ ಮುತ್ತುಗಳ ಖಜಾನೆ. ಬೇರೆ ಕಡೆಯೆಲ್ಲ ಗಂಡಸರು ಹೊರಗೆ ದುಡಿದು ಹೆಂಗಸರು ಮನೆವಾರ್ತೆ ನೋಡಿಕೊಂಡರೆ ಈ ಪ್ರದೇಶದಲ್ಲಿ ಉಲ್ಟಾ. ಗಂಡಸರು ಮನೆ, ಮಕ್ಕಳನ್ನು ನೋಡಿಕೊಂಡು ಸಂಜೆ ದಿನಸಿ ತರುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಹೆಂಗಸರು ಇಡೀ ದಿನ ಕಡಲಾಳದಲ್ಲಿ ಮುತ್ತು ಹುಡುಕಿ ಅದನ್ನು ಮಾರುಕಟ್ಟೆಯಲ್ಲಿ ಮಾರಿ ಸಂಪಾದನೆ ಮಾಡುತ್ತಾರೆ. 

ಸಮುದ್ರ ತಟದಲ್ಲೇ ಹುಟ್ಟಿ ಬೆಳೆದ ಹೇನ್ಯೋಗೆ ಈಜು ಮೀನಿನಷ್ಟೇ ಸರಾಗ. ಮುತ್ತು ಆರಿಸಲು ಅವಳನ್ನು ಹಚ್ಚಿದ್ದು ಅವಳಪ್ಪ. ಉಳಿದ ಮಕ್ಕಳೆಲ್ಲ ಪಾಟಿ ಚೀಲಹೊತ್ತು, ಕಚಪಚ ಮಾತಾಡ್ತಾ ನಗ್ತಾ ಶಾಲೆಗೆ ಹೋಗ್ತಿದ್ರೆ ಇವಳು ಮನೆಕೆಲಸದ ಗಡಿಬಿಡಿಯಲ್ಲಿ ಮುಳುಗಿರುತ್ತಿದ್ದಳು. ಒಮ್ಮೊಮ್ಮೆ ಪಾತ್ರೆ ತೊಳೆಯುವಾಗ ಕಣ್ಣಿಗೆ ಬಿದ್ದರೆ ಎಷ್ಟೋ ಹೊತ್ತು ನೋಡುತ್ತಲೇ ನಿಂತಿರುತ್ತಿದ್ದಳು. ಅವರು ದೂರ ..ದೂರ ಕಣ್ಣಳತೆ ದೂರವನ್ನೂ ಮೀರಿ ನಡೆದುಹೋಗುತ್ತಿದ್ದರೆ ಇವಳು ಪ್ರತಿಮೆಯ ಹಾಗೆ ನೋಡಿಕೊಂಡೇ ನಿಂತಿರುತ್ತಿದ್ದಳು, ಒಂದು ಕೈಯಲ್ಲಿ ನೀರು ತೊಟ್ಟಿಕ್ಕುವ ಪಾತ್ರೆ, ಇನ್ನೊಂದು ಕೈಯಲ್ಲಿ ಪಾತ್ರೆತಿಕ್ಕುವ ಮೆಶ್‌. 

ಹೀಗಿದ್ದ ಹೆನ್ಯೋ ದಿನಚರಿ ಒಂದು ದಿನ ಬದಲಾಯ್ತು. ಆಗ ಹನ್ನೆರಡರ ಚಿಕ್ಕ ಪೋರಿ ಅವಳು. ಎಲ್ಲೋ ಹೊರಟಿದ್ದ ಅಪ್ಪ ಮಗಳನ್ನು ಕರೆದ. ಬೇರೇನೋ ಹೇಳದೇ, “ಬೇಗ ಮನೆಗೆ ಲಾಕ್‌ ಮಾಡು, ಬಾ ನನೊjತೆ’ ಅಂದನಷ್ಟೇ. ಅವಳು ಮರು ಮಾತಿಲ್ಲದೇ ಹಿಂಬಾಲಿಸಿದಳು. ಮನೆಯ ಕಾಲು ದಾರಿಯಿಂದ ಕಲ್ಲುಕಟ್ಟಿದ ಓಣಿಯಾಗಿ ನಡೆದು ಸ್ವಲ್ಪ ದೂರ ಹೋದರೆ ಕಡಿದಾದ ಗುಡ್ಡ. ಹೆನ್ಯೋ ಬಹಳ ಸಲ ಅಲ್ಲಿ ಓಡಾಡಿದ್ದಾಳೆ. ಅವಳಿಗಿಷ್ಟದ ಝಿಲ್ಲಕೋಟ್‌ ಹೂವುಗಳು ಅಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ. ಅದನ್ನು ಕಿತ್ತು ತಂದು ಹೂದಾನಿಯಲ್ಲಿಟ್ಟು ಖುಷಿ ಪಡ್ತಾಳೆ. ಅವತ್ತು ಮಾತ್ರ ಅಪ್ಪ ಎಲ್ಲಿಗೆ ಕರೊRಂಡು ಹೋಗ್ತಿದ್ದಾರೆ ಅನ್ನೋದು ಗೊತ್ತಾಗ್ಲಿಲ್ಲ. ತುದಿ ಹತ್ತಿ ಇನ್ನೊಂದು ಭಾಗದಲ್ಲಿ ಇಳಿದು ಕಡಿದಾದ ಕಾಲುದಾರಿಯಲ್ಲಿ ನಡೆದು ಒಂದು ಪಾರ್ಶ್ವಕ್ಕೆ ತಿರುಗಿದರೆ  ಕೆಳಗೆ ಭೋರ್ಗರೆಯುವ ಸಮುದ್ರ. ಸಮುದ್ರ ಆ ಪರಿಸರ ಅವಳಿಗೆ ಹೊಸದು. ಆದರೆ ಇಲ್ಯಾಕೆ ಕರೆತಂದಿದ್ದಾರೆ ಅಂತ ಗೊತ್ತಾಗಲಿಲ್ಲ, ಸ್ವಲ್ಪ ಹೊತ್ತಿಗೆ ಅಲ್ಲಿ ಕೆಲವು ಹೆಂಗಸರು ಬಂದರು. ಅವರೆಲ್ಲ ಅವಳ ಪರಿಚಯದ ಮುತ್ತು ಆರಿಸುವ ಹೆಂಗಸರು.

Advertisement

ಕಡಿದಾದ ಜಾಗದಿಂದ ಸಮುದ್ರಕ್ಕೆ ಜಿಗಿಯೋದು, ಆಳದಲ್ಲಿ ಮುತ್ತುಚಿಪ್ಪುಗಳನ್ನು ಗುರುತಿಸಿ, ಆರಿಸಿ ಸೊಂಟಕ್ಕೆ ಕಟ್ಟಿದ ಚೀಲದಲ್ಲಿ ಹಾಕಿಕೊಳ್ಳೋದು. ಸಮುದ್ರದಾಳದಲ್ಲಿ ಉಸಿರುಗಟ್ಟಿ ಮುತ್ತು ಇರುವ ಚಿಪ್ಪನ್ನ ಹುಡುಕೋದು ಮೊದಮೊದಲು ಕಷ್ಟವಾಗ್ತಿತ್ತು, ನಿಧಾನಕ್ಕೆ ಅವಳು ಮತ್ಸéಕನ್ಯೆಯೇ ಆದಳು. 

ಮುತ್ತು ಆರಿಸಿ ಮಾರ್ಕೆಟ್‌ನಲ್ಲಿ ಮಾರಿ ವಾಪಾಸಾಗುವಾಗ ಶಾಲೆ ಬಿಟ್ಟು ಬರುವ ಅವಳ ಪ್ರಾಯದ ಮಕ್ಕಳು ಕಾಣಸಿಗುತ್ತಾರೆ. ಅವರು ಹೋಗುವ ತನಕವೂ ಅವರನ್ನು ನೋಡುತ್ತಾ ನಿಂತಿರುತ್ತಿದ್ದಳು, ಅರಿವಿಲ್ಲದೇ ನಡೆಯುವ ಈ ಕ್ರಿಯೆ ಕೆಲವೊಮ್ಮೆ ಅವಳಿಗೇ ಸೋಜಿಗ ತರಿಸುತ್ತಿತ್ತು. 

ಸೀನ್‌ ಕಟ್‌ ಮಾಡಿದ್ರೆ ಹೇನ್ಯೋ ಫಾಸ್ಟಾಗಿ ಬರೀತಿದ್ದಾಳೆ, ಪುಟ ತುಂಬುತ್ತಿರುವಂತೆ ಪುನಃ ಅಷ್ಟೇ ಫಾಸ್ಟಾಗಿ ಇರೇಸರ್‌ ತಗೊಂದು ಉಜ್ಜುತ್ತಾಳೆ. ಮತ್ತೆ ಖಾಲಿ ಕಾಗದ, ಅದರಲ್ಲಿ ಮತ್ತೆ ಬರಿಯೋದು, ಮತ್ತೆ ಅಳಿಸೋದು ಹೀಗೆ ಸಾಗಿದೆ ಅವಳ ಅಭ್ಯಾಸ. ಅವಳ ಗುರು ಪಕ್ಕದೂರಿನ ತಾತ. ನಿವೃತ್ತ ಶಿಕ್ಷಕ ಆತ. ಚೋಟುದ್ದದ ಗಂಟುಗಂಟಾದ ಜಡೆಯ ನಸುಗೆಂಪಿನ ಹುಡುಗಿ ಮಾರ್ಕೆಟ್‌ನಲ್ಲಿ ನಿಂತು ಶಾಲೆಯಿಂದ ಬರುವ ಮಕ್ಕಳನ್ನೇ ಬಹಳ ಹೊತ್ತು ದಿಟ್ಟಿಸುತ್ತ ನಿಲ್ಲೋದನ್ನು ಅವರು ಅಚಾನಕ್‌ ಆಗಿ ನೋಡಿದ್ದಾರೆ. ನಂತರ ಅವಳನ್ನು ಪಕ್ಕ ಕರೆದು ಮಾತನಾಡಿಸಿದ್ದಾರೆ. ಅವತ್ತಿಂದ ಸಂಜೆ ಅವರ ಮನೆಗೆ ಹೋಗಿ ಕಲಿಯೋದು ಶುರುವಾಗಿದೆ. ಮುತ್ತು ಮಾರಿ ಬಂದ ದುಡ್ಡಲ್ಲಿ ಅಪ್ಪನ ಕುಡಿತಕ್ಕಿಷ್ಟು, ಮನೆ ಖರ್ಚಿಗಿಷ್ಟು ಅಂತ ಎತ್ತಿಟ್ಟು ಉಳಿದದ್ದನ್ನು ಪೆನ್ಸಿಲ್‌, ಪೇಪರ್‌, ಇರೇಸರ್‌ಗೆ ಬಳಸ್ತಾಳೆ. ಅವಳು ಬರೆದದ್ದನ್ನು ಅಳಿಸಿ, ಮತ್ತೆ ಬರೆದು ಅಭ್ಯಾಸ ಮಾಡೋದನ್ನು ಕಂಡ ಶಾಲೆ ಹುಡುಗಿಯೊಬ್ಬಳು ಕೊನೆಯ ಒಂದಿಷ್ಟು ಪುಟಗಳು ಖರ್ಚಾಗದೇ ಉಳಿದ ತನ್ನ ಪುಸ್ತಕಗಳನ್ನು ಆಕೆಗೆ ನೀಡಿದ್ದಾಳೆ. ಬಳಿಕ ಉಜೊjàದು ಕ್ರಮೇಣ ಕಡಿಮೆಯಾಗಿದೆ. 

ಪುಟ್ಟ ಹುಡುಗಿ ಹೆನ್ಯಾ ಈಗ ಬರೆದದ್ದನ್ನು ಹಾಗೇ ಇಡಲು ಶುರುಮಾಡಿದ್ದಾಳೆ. ಬೆಳ್ಳಂಬೆಳಗು ತನಗಷ್ಟೇ ಕಾಣುವ ಕಡಲ, ಕಡಲೊಳಗಿನ ಜಗತ್ತು, ಅಲ್ಲಿ ಮಾತಿಗಳಿಯುವ ಮೀನುಗಳು, ಕಣ್ಣಾಮುಚ್ಚಾಲೆಯಾಡುವ ಮುತ್ತಿನ ಚಿಪ್ಪುಗಳ ಬಗ್ಗೆ ಬರೀತಾಳೆ. ಆಗಷ್ಟೇ ಮಾತು ಕಲಿತ ಮಗುವಿನಂಥ ಸ್ಥಿತಿ ಅವಳದು. ಇಡೀ ಕಡಲನ್ನೇ ಹಾಳೆಗೆಳೆಯುವ ತವಕ. ಕಡಲು ಜಾಣ ಕಳ್ಳನಂತೆ ತಪ್ಪಿಸಿಕೊಳ್ಳಲು ನೋಡತ್ತದೆ. ಆದರೆ ಕಡಲು ಕರುಣಾಮಯಿ. ಬಹಳ ಹೊತ್ತು ಹುಡುಗಿಯ ಕಷ್ಟ ನೋಡಲು ಅದರಿಂದಾಗದು. ಜಾಗೃತೆ, ಬಹು ಜಾಗೃತೆಯಿಂದ ಪುಸ್ತಕ ನೆನೆಯದಂತೆ ನಿಧಾನಕ್ಕೆ ಪುಸ್ತಕದೊಳಗೆ ಬರುತ್ತದೆ. ಪುಸ್ತಕದೊಳಗೆ ಕಡಲು ತುಂಬುತ್ತ ಹೋಗುತ್ತದೆ, ಸಮೀಪ ಹೋದವರಿಷ್ಟೇ ಒಳಗೊಳಗೇ ಭೋರ್ಗರೆಯುವ ಕಡಲಿನ ಶಬ್ಧ ಕೇಳ್ಳೋದು!

– ಪ್ರಿಯಾ ಕೆರ್ವಾಶೆ

Advertisement

Udayavani is now on Telegram. Click here to join our channel and stay updated with the latest news.

Next