ದಾನಿಯಿಂದ ಸಂಗ್ರಹಿಸಿದ ಅನಂತರ ರಕ್ತದ ಘಟಕವು ರೋಗಿಗೆ ವರ್ಗಾವಣೆಯಾಗುವುದಕ್ಕಿಂತ ಮೊದಲು ಅನೇಕ ಪರೀಕ್ಷೆ ಮತ್ತು ಸಂಸ್ಕರಣೆಗೆ ಒಳಗೊಳ್ಳಲ್ಪಡುತ್ತದೆ. ಇವೆಲ್ಲಾ ರೋಗಿಯ ಸುರಕ್ಷತೆ ಮತ್ತು ಅಮೂಲ್ಯವಾದ ರಕ್ತದ ಗರಿಷ್ಟ ಬಳಕೆಯನ್ನು ಮನದಲ್ಲಿ ಇಟ್ಟುಕೊಂಡು ಮಾಡಲಾಗುತ್ತದೆ.
ರಕ್ತದ ಘಟಕ ವಿಭಜನೆ
ರಕ್ತವು ಜೀವಕೋಶಗಳ ಮಿಶ್ರಣವಾಗಿದೆ. ಇದನ್ನು ವಿಭಿನ್ನ ರಕ್ತಭಾಗಗಳಾಗಿ ಬೇರ್ಪಡಿಸಬಹುದು. ಸಂಪೂರ್ಣ ರಕ್ತ ಘಟಕವು ವಿಭಜನೆಯನ್ನು ಒಳಗೊಳ್ಳುತ್ತದೆ. (component separation). ರಕ್ತಸಂಗ್ರಹದ ನಂತರ ಘಟಕಗಳನ್ನು 5-8 ಗಂಟೆಗಳ ಒಳಗೆ ಬೇರ್ಪಡಿಸಬೇಕು. ಘಟಕ ವಿಭಜನೆಯನ್ನು ಸುಲಭಗೊಳಿಸಲು. ನಾವು ಸಂಪೂರ್ಣ ರಕ್ತವನ್ನು ಡಬಲ್/ಟ್ರಿಪಲ್ ಅಥವಾ ಕ್ವಾಡ್ರುಪಲ್ ಚೀಲಗಳಲ್ಲಿ ಸಂಗ್ರಹಿಸುತ್ತೇವೆ. ವಿವಿಧ ಸಲಕರಣೆಗಳನ್ನು ಬಳಸಿಕೊಂಡು ಘಟಕ ವಿಭಜನೆಯನ್ನು ಮಾಡಲಾಗುತ್ತದೆ. ನಾವು ಒಂದು ರಕ್ತದ ಘಟಕದಿಂದ 2ರಿಂದ 3 ವಿಭಿನ್ನ ರಕ್ತ ಆಯಾಮಗಳನ್ನು ಪ್ರತ್ಯೇಕಿಸುತ್ತೇವೆ.
ರಕ್ತದ ಪ್ರತಿಘಟಕವು ವಿಭಿನ್ನ ತಾಪಮಾನ ಮತ್ತು ಶೇಖರಣಾ ಘಟಕಗಳಲ್ಲಿ ಸಂಗ್ರಹಿಸಲ್ಪಡುತ್ತದೆ. ಪ್ರತಿಯೊಂದು ರಕ್ತದ ಅಂಶವನ್ನು ನಿರ್ಧಿಷ್ಟ ಕಾಲ ಮಾತ್ರವೇ ನಾವು ಶೇಖರಣೆ ಮಾಡಿ ಇಡಬಹುದು.
ರಕ್ತಗುಂಪು ಪರೀಕ್ಷೆ
– ಪ್ರತಿರಕ್ತಚೀಲದಿಂದ ಸಂಗ್ರಹಿಸಲಾದ ಮಾದರಿಯಲ್ಲಿ ರಕ್ತ ಗುಂಪು ಪರೀಕ್ಷೆ ಮಾಡಲಾಗುತ್ತದೆ.
– ರಕ್ತ ಗುಂಪು ಪರೀಕ್ಷೆಯನ್ನು ಅಂಟಿಸೆರಾ ದ್ರವ ಮತ್ತು ಎ ಬಿ ಓ ರಕ್ತದ ಗುಂಪಿನ ಕೆಂಪು ರಕ್ತ ಕಣ ಬಳಸಿ ಮಾಡಲಾಗುತ್ತದೆ.
– ರಕ್ತಗುಂಪನ್ನು ಎರಡು ತಂತ್ರಜ್ಞರು ಪರಿಶೀಲಿಸುತ್ತಾರೆ ಮತ್ತು ಒಬ್ಬ ವೈದ್ಯಕೀಯ ಅಧಿಕಾರಿ ಪ್ರಮಾಣೀಕರಿಸುತ್ತಾರೆ.
Related Articles
ಪೂರ್ವ ವರ್ಗಾವಣೆ ಪರೀಕ್ಷೆ
(Pre-transfusion testing)
ಇದು ದಾನಿ ಮತ್ತು ರೋಗಿ ರಕ್ತದ ನಡುವಿನ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಪರೀಕ್ಷೆ. ರಕ್ತಹಾಯಿಸುವಿಕೆ ಅಗತ್ಯವಿದ್ದಲ್ಲಿ, ಮೊದಲನೆಯದಾಗಿ ರೋಗಿಯ ಒಪ್ಪಿಗೆ ತೆಗೆದುಕೊಳ್ಳಲಾಗುವುದು. ಅನಂತರ ರೋಗಿಗಳ ರಕ್ತ ಗುಂಪು ಟೆಸ್ಟ್ ಮತ್ತು ಹೊಂದಾಣಿಕೆ (cross-match) ಪರೀಕ್ಷೆ ಮಾಡಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ನಡೆಸಲು ಸುಮಾರು 2 ಗಂಟೆಗಳು ತೆಗೆದುಕೊಳ್ಳುತ್ತದೆ. ಇದರಿಂದ ಸುರಕ್ಷಿತವಾದ ರಕ್ತವನ್ನು ರೋಗಿಗೆ ನೀಡಲು ಸಾಧ್ಯವಾಗುತ್ತದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ , ರಕ್ತವನ್ನು ರೋಗಿಗೆ ಕೂಡಲೇ ನೀಡಬೇಕಾದಲ್ಲಿ ಕೇವಲ ರಕ್ತದ ಗುಪಿನ ಹೊಂದಾಣಿಕೆ ಪರೀಕ್ಷೆ ಮಾಡಲಾಗುವುದು.
ರಕ್ತದ ಮೂಲಕ ಹರಡುವ ಸೋಂಕುಗಳ ಪರೀಕ್ಷೆ
ಸಂಗ್ರಹಿಸಿದ ರಕ್ತ ಘಟಕಗಳನ್ನು ಸೋಂಕುಗಳಿಗೆ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆ ರಕ್ತ ಘಟಕ ಸಾಧ್ಯವಾದಷ್ಟು ಸುರಕ್ಷಿತ ಎಂದು ಖಾತ್ರಿ ಪಡಿಸುವ ಕ್ರಿಯೆ. ಎಚ್‌ಐವಿ (HIV). ಹೆಪಟೈಟಿಸ್ ಬಿ ((Hepatitis B) ಹೆವಪಟೈಟಿಸ್ ಸಿ (Heptitis C) ಮಲೇರಿಯಾ ಮತ್ತು ಸಿಫಿಲಿಸ್ ಮುಂತಾದ ಸೋಂಕು ತಪಾಸಣೆ ಪ್ರತಿ ರಕ್ತ ಘಟಕದಲ್ಲಿ ಕಡ್ಡಾಯವಾಗಿ ಮಾಡಲಾಗುವುದು. ಈ ಸೋಂಕುಗಳು ರಕ್ತದ ಘಟಕದಲ್ಲಿ ಕಂಡು ಬಂದರೆ ಅಂತಹ ಘಟಕವನ್ನು ತಿರಸ್ಕರಿಸಲಾಗುತ್ತದೆ. ಆ ಸಂದರ್ಭದಲ್ಲಿ ದಾನಿಗಳಿಗೆ ಸೋಂಕು ಅದರ ನಿರ್ವಹಣೆ ಬಗ್ಗೆ ಗೌಪ್ಯವಾಗಿ ತಿಳಿಸಲಾಗುವುದು ಮತ್ತು ಸಮಾಲೋಚನೆಗಾಗಿ ಕರೆಯಲಾಗುವುದು.
ಪ್ರತಿಕಾಯಗಳಿಗೆ ಪರೀಕ್ಷೆ (antibody screening)
ಆಂಟಿಬಾಡಿ ಸ್ಕ್ರೀನಿಂಗ್/ಪ್ರತಿಕಾರ್ಯಗಳಿಗೆ ಪರೀಕ್ಷೆಯನ್ನು ದಾನಿ ಮತ್ತು ರೋಗಿಗಳ ರಕ್ತದಲ್ಲಿ ನಡೆಸಲಾಗುತ್ತದೆ. ರಕ್ತ ವರ್ಗಾವಣೆಯ ನಂತರ ಆಗಬಹುದಾದ ಕೆಲವೊಂದು ರಿಯಾಕ್ಷನ್ ಅನ್ನು ತಡೆಯಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ.
ರಕ್ತ ಹಾಯಿಸುವಿಕೆ
ಅಗತ್ಯವಿರುವ ರಕ್ತದ ಅಂಶವನ್ನು ಮೇಲೆ ಹೇಳಿದ ಎಲ್ಲ ಪರೀಕ್ಷೆಗಳ ಅನಂತರ ರೋಗಿಗೆ ಹಾಯಿಸಲಾಗುವುದು. ರಕ್ತಹಾಯಿಸುವಾಗ ರೋಗಿಯನ್ನು ನಿಕಟವಾಗಿ ಗಮನಿಸಲಾಗುತ್ತದೆ. ಯಾವುದೇ ರೀತಿಯ ತೊಂದರೆ ಕಾಣಿಸಿದಲ್ಲಿ ತತ್‌ಕ್ಷಣ ರಕ್ತ ಹಾಯಿಸುವಿಕೆ ನಿಲ್ಲಿಸಲಾಗುವುದು.
ಒಂದು ಘಟಕದಿಂದ ಮೂರು ವಿಭಿನ್ನ ಘಟಕಗಳನ್ನು ತಯಾರಿಸಲಾಗುತ್ತದೆ ಮತ್ತು ಮೂರು ರೋಗಿಗಳ ಜೀವಗಳನ್ನು ಉಳಿಸಲು ಬಳಸಬಹುದು.
ಹಲವಾರು ಹಂತಗಳ ಸಂಸ್ಕರಣೆ ಮತ್ತು ಪರೀಕ್ಷೆಗಳ ಮೂಲಕ ರಕ್ತನಿಧಿಯು ಸುರಕ್ಷಿತವಾದ ರಕ್ತವನ್ನು ರೋಗಿಗೆ ನೀಡುತ್ತದೆ.
– ಡಾ|ಶಮೀಶಾಸ್ತ್ರಿ
ಪ್ರೊಫೆಸರ್,
ವಿಭಾಗದ ಮುಖ್ಯಸ್ಥೆ ರಕ್ತನಿಧಿ,ಕಸ್ತೂರ್ಬಾ ಆಸ್ಪತ್ರೆ,
ಮಣಿಪಾಲ.