Advertisement

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

07:26 PM Jul 04, 2024 | ಕೀರ್ತನ್ ಶೆಟ್ಟಿ ಬೋಳ |

ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವು ಇಂದು ಭಾರತಕ್ಕೆ ಮರಳಿದೆ. ಹಲವು ವರ್ಷಗಳ ಬಳಿಕ ಭಾರತ ತಂಡವು ಐಸಿಸಿ ಟ್ರೋಫಿಯಲ್ಲಿ ತನ್ನ ಹೆಸರು ಬರೆದುಕೊಂಡ ಕ್ಷಣವನ್ನು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯು ವಿಶೇಷ ಭಾವುಕತೆಯನ್ನು ಅನುಭವಿಸಿದರು. ಭಾರತ ಮತ್ತೆ ವಿಶ್ವಚಾಂಪಿಯನ್ ಆಗುತ್ತಿದ್ದಂತೆ ದೇಶವೇ ಹುಚ್ಚೆದ್ದು ಕುಣಿದಿದೆ. ಬಿಸಿಸಿಐ ಕೂಡಾ ಗೆದ್ದ ತಂಡಕ್ಕೆ 125 ಕೋಟಿ ರೂ ಗಳ ಬೃಹತ್ ಮೊತ್ತದ ಬಹುಮಾನ ಘೋಷಿಸಿದೆ. ಇಂದು ಮುಂಬೈನಲ್ಲಿ ತಂಡದ ವಿಶೇಷ ಮೆರವಣಿಗೆಯೂ ಇದೆ. ಆದರೆ ಭಾರತವು ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಅಂದರೆ 1983ರಲ್ಲಿ ಚಾಂಪಿಯನ್ ಆಟಗಾರರಿಗೆ ಹಣ ನೀಡಲೂ ಬಿಸಿಸಿಐ ಬಳಿ ಶಕ್ತಿ ಇರಲಿಲ್ಲ. ಅದು ಬೇರೆಯೇ ಕಥೆ! ಒಮ್ಮೆ ಕಣ್ಣಾಡಿಸೋಣ ಬನ್ನಿ.

Advertisement

1983ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕಪಿಲ್ ಡೆವಿಲ್ಸ್ ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಗೆಲುವು ಸಾಧಿಸಿದ್ದರು. ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ನೀಡಿದ್ದ ಕಪಿಲ್ ದೇವ್ ಬಳಗವು ಲಾರ್ಡ್ಸ್ ಮೈದಾನದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ದ ಗೆಲುವು ಸಾಧಿಸಿ ಮೊದಲ ಬಾರಿಗೆ ಕ್ರಿಕೆಟ್ ಭೂಪಟದಲ್ಲಿ ಭಾರತದ ಧ್ವಜವನ್ನು ಅಧಿಕಾರಯುತವಾಗಿ ನೆಟ್ಟಿತ್ತು. ಭಾರತದ ಕ್ರಿಕೆಟ್ ಬೆಳವಣಿಗೆಯ ಬೀಜ ಮೊಳಕೆಯೊಡೆದಿದ್ದು ಇಲ್ಲಿ.

ಕಪಿಲ್ ದೇವ್ ಅವರು ಲಾರ್ಡ್ಸ್ ಬಾಲ್ಕನಿಯಲ್ಲಿ ಟ್ರೋಫಿ ಎತ್ತುತ್ತಿದ್ದಂತೆ ಇಡೀ ಭಾರತ ಕುಣಿದಾಡಿತ್ತು, ಆದರೆ ಆಗಿನ ಬಿಸಿಸಿಐ ಅಧ್ಯಕ್ಷ, ಇಂದಿರಾ ಗಾಂಧಿ ಕ್ಯಾಬಿನೆಟ್ ನ ಪವರ್ ಫುಲ್ ಮಿನಿಸ್ಟರ್ ಎನ್.ಕೆ.ಪಿ ಸಾಳ್ವೆ ಅವರಿಗೆ ಚಿಂತೆ ಕಾಡುತ್ತಿತ್ತು. ಆಗ ಭಾರತದಲ್ಲಿನ್ನೂ ಆರ್ಥಿಕ ಉದಾರೀಕರಣ ಆಗಿರಲಿಲ್ಲ. ಕ್ರಿಕೆಟ್ ಉದ್ಯಮವೂ ಆಗಿರಲಿಲ್ಲ. ಭಾರತ ತಂಡದ ಮಹಾನ್ ಸಾಧನೆಯನ್ನು ಸಂಭ್ರಮಾಚರಣೆ ಮಾಡಬೇಕಾದ ಬಿಸಿಸಿಐ ಬಳಿ ಹಣವೇ ಇರಲಿಲ್ಲ!

ಈಗ ದೂರದರ್ಶನ ಒಪ್ಪಂದದಿಂದಲೇ 5 ಬಿಲಿಯನ್ ಡಾಲರ್ ಹಣ ಪಡೆಯುತ್ತಿರುವ ಬಿಸಿಸಿಐ ಬಳಿ ಆಗ ತನ್ನ ಕ್ರಿಕೆಟಿಗರಿಗೆ ದೈನಂದಿನ ಭತ್ಯೆಯ ಕೇವಲ 20 ಪೌಂಡ್‌ ಪಾವತಿಸಲೂ ಆಗುತ್ತಿರಲಿಲ್ಲ! ಈಗ ಯೋಚನೆ ಮಾಡಿ ಭಾರತದ ಕ್ರಿಕೆಟ್ ಆಗ ಯಾವ ಮಟ್ಟದಲ್ಲಿತ್ತು ಎಂದು!

Advertisement

ಆಗ ಸಾಳ್ವೆ ಅವರಿಗೆ ನೆನಪಾಗಿದ್ದು ಭಾರತೀಯ ಕ್ರಿಕೆಟ್ ನ ‘one stop Encyclopedia’ ಎಂದೇ ಕರೆಯುತ್ತಿದ್ದ ರಾಜ್ ಸಿಂಗ್ ದುಂಗಾರ್ಪುರ್ ಅವರು. ಕ್ರಿಕೆಟ್ ವಲಯದಲ್ಲಿ ‘ರಾಜ್ ಭಾಯ್’ ಎಂದೇ ಕರೆಯಲ್ಪಡುತ್ತಿದ್ದ ದುಂಗಾರ್ಪುರ್ ಅವರು ಸಾಳ್ವೆ ಅವರನ್ನು ಸಮಾಧಾನ ಪಡಿಸಿ ಆ ಒಂದು ಹೆಸರು ಹೇಳಿದ್ದರು. ಅವರೇ ಭಾರತದ ಗಾನಕೋಗಿಲೆ ಎಂದೇ ಹೆಸರಾದ ಸೂಪರ್ ಸ್ಟಾರ್ ಸಿಂಗರ್ ಲತಾ ಮಂಗೇಶ್ಕರ್.

ಹೌದು, ಅಂದು ಬಿಸಿಸಿಐ ತನ್ನ ಮಾನ ಉಳಿಸಿಕೊಳ್ಳಲು ಲತಾ ಮಂಗೇಶ್ಕರ್ ಅವರ ಸಹಾಯ ಕೋರಿತ್ತು. ಲತಾ ಮಂಗೇಶ್ಕರ್ ಅವರಿಂದ ಗಾಯನ ಕಾರ್ಯಕ್ರಮ ನಡೆಸಿ ಅದರಿಂದ ಬರುವ ಹಣವನ್ನು ಆಟಗಾರರಿಗೆ ನೀಡುವ ಯೋಜನೆ ಸಾಳ್ವೆ ಮತ್ತು ರಾಜ್ ಭಾಯ್ ಅವರದ್ದು. ಸ್ವತಃ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದ ಲತಾ ಅವರು ಈ ವಿಷಯವನ್ನು ತಿಳಿದ ಕೂಡಲೇ ಕಾರ್ಯಕ್ರಮ ನೀಡಲು ಒಪ್ಪಿಗೆ ನೀಡಿದ್ದರು.

ಅದರಂತೆ ಹೊಸದಿಲ್ಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಸ್ಟೇಡಿಯಂನಲ್ಲಿ ತುಂಬಿ ತುಳುಕಿದ್ದ ಪ್ರೇಕ್ಷಕರ ಎದುರು ಲತಾ ಅವರು ಎರಡು ಗಂಟೆಗಳ ಕಾರ್ಯಕ್ರಮ ನೀಡಿದ್ದರು. ಅಲ್ಲಿ ಅಂದು ಭಾರತೀಯ ಕ್ರಿಕೆಟಿಗರು ಸೇರಿದ್ದರು. ಲತಾ ಅವರ ಸಹೋದರ ಪಂಡಿತ್ ಹೃದ್ಯಾಂತ್ ಮಂಗೇಶ್ಕರ್ ಅವರು ಸಂಯೋಜನೆ ಮಾಡಿದ “ಭಾರತ ವಿಶ್ವ ವಿಜೇತ” ಎಂಬ ವಿಶೇಷ ಹಾಡನ್ನು ಅಂದು ಲತಾ ಮಂಗೇಶ್ಕರ್ ಹಾಡಿದ್ದರು.

ಅಂದಿನ ಕಾರ್ಯಕ್ರಮದಲ್ಲಿ ಸುಮಾರು 20 ಲಕ್ಷ ರೂ ಗಳು ಒಟ್ಟಾಗಿತ್ತು. ಟೀಂ ಇಂಡಿಯಾದ ಆಟಗಾರರಿಗೆ ತಲಾ ಒಂದು ಲಕ್ಷ ರೂ ನೀಡಲಾಗಿತ್ತು. ವಿಶೇಷ ಏನೆಂದರೆ ಭಾರತೀಯ ಕ್ರಿಕೆಟ್ ಮಂಡಳಿಗೆ ಇಷ್ಟೆಲ್ಲಾ ಮಾಡಿದ ಲತಾ ಮಂಗೇಶ್ಕರ್ ಅವರು ಸಂಭಾವನೆಯಾಗಿ ಒಂದೇ ಒಂದು ರೂಪಾಯಿ ಕೂಡಾ ಪಡೆಯಲಿಲ್ಲ. ಬಹುಶಃ ಇಂತಹ ಪ್ರಸಂಗಗಳಿಂದಲೇ ಕೆಲವರು ದೊಡ್ಡವರಾಗುತ್ತಾರೆ!

ಅವಮಾನದಿಂದ ತನ್ನನ್ನು ಪಾರು ಮಾಡಿದ ಲತಾ ಅವರ ಉಪಕಾರವನ್ನು ಬಿಸಿಸಿಐ ಮರೆಯಲಿಲ್ಲ. ಅಂದಿನಿಂದ ಲತಾ ಮಂಗೇಶ್ಕರ್ ಅವರು ನಿಧನರಾಗುವವರೆಗೂ ಭಾರತದ ಎಲ್ಲಾ ಸ್ಟೇಡಿಯಂಗಳಲ್ಲಿ ಎರಡು ವಿಐಪಿ ಸೀಟ್ ಗಳನ್ನು ಅವರಿಗೆ ಮೀಸಲಿಡಲಾಗುತ್ತಿತ್ತು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next