Advertisement
-ಸಂಬಂಜ ಅನ್ನೋದು ದೊಡ್ಡದು ಕಣಾ… ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಕಾದಂಬರಿ ಆಧಾರಿತ “ಮಾರಿಕೊಂಡವರು’ ಚಿತ್ರ ನೋಡಿದ ಮೇಲೆ, ಕೊನೆಯಲ್ಲಿ ಕಾಣಸಿಗುವ ಈ ಭಾವನಾತ್ಮಕ ಪದ ಅಕ್ಷರಶಃ ನಿಜವೆನಿಸದೇ ಇರದು. ಇಲ್ಲಿ ಸಂಬಂಧಗಳ ಮೌಲ್ಯ, ಭಾವನೆಗಳ ಬೆಸುಗೆ, ಒಂದಷ್ಟು ಕಾಮ, ಪ್ರೇಮ, ಬಡತನ, ಹಸಿವು ಎಲ್ಲವೂ ಉಂಟು. ಎಲ್ಲಕ್ಕಿಂತ ಹೆಚ್ಚಾಗಿ ಜಾತಿ ಹಾಗು ಧರ್ಮವನ್ನು ಮೀರಿದ ಒಂದೊಳ್ಳೆ ಸಂದೇಶ ಇಲ್ಲುಂಟು.
Related Articles
Advertisement
ಇಲ್ಲಿ ಮುಖ್ಯವಾಗಿ ಗಮನಸೆಳೆಯೋದು ಸಂಭಾಷಣೆ. ಲಕ್ಷ್ಮೀಪತಿ ಕೋಲಾರ ಹಾಗು ದೇವನೂರು ಬಸವರಾಜು ಅವರು ಕಟ್ಟಿಕೊಟ್ಟಿರುವ ಆ ಭಾಗದ ಹಳ್ಳಿ ಸೊಗಡಿನ ಮಾತುಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಇದಕ್ಕೆ ಪೂರಕ ಎಂಬಂತೆ ಎಸ್.ಪಿ. ವೆಂಕಟೇಶ್ ಅವರ ಸಂಗೀತ ಹಾಗೂ ಇಸಾಕ್ ಥಾಮಸ್ ಅವರ ಹಿನ್ನೆಲೆ ಸಂಗೀತ ಕೂಡ ಹಿತವೆನಿಸುತ್ತದೆ. ಸಾಹಿತ್ಯವನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದು ತುಸು ಕಷ್ಟದ ಕೆಲಸವೇ.
ಆದರೆ, ಸಾಹಿತ್ಯ ಕಥೆ ಆಧರಿಸಿ, ಸಿನಿಮಾ ಮಾಡಿರುವುದಲ್ಲದೆ, ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೆರೆಯ ಮೇಲೆ ಬಿಂಬಿಸಿರುವ ನಿರ್ದೇಶಕರ ಪ್ರಯತ್ನವನ್ನಂತೂ ಮೆಚ್ಚಬೇಕು. ಅವರು ಆಯ್ಕೆ ಮಾಡಿಕೊಂಡ ಕಥೆಗೆ ತಕ್ಕಂತೆಯೇ ಆ ಪರಿಸರ, ಅವರ ಕಲ್ಪನೆಯ ಶಿವ, ಸುಶೀಲ, ಪಟೇಲ, ಕಿಟ್ಟಿ, ಬೀರ, ಲಚ್ಚಿ, ರಾಜ ಇತ್ಯಾದಿ ಪಾತ್ರಗಳು ಕೂಡ ಇಲ್ಲಿ ಸಿನಿಮಾದುದ್ದಕ್ಕೂ ಗಮನಸೆಳೆಯುತ್ತವೆ. ಕೆಲವು ಕಾಡಿದರೆ, ಕೆಲವು ಹಿಡಿ ಶಾಪ ಹಾಕುವಂತೆ ಮಾಡುತ್ತವೆ.
ಇನ್ನೂ ಕೆಲ ಪಾತ್ರಗಳು ಕೀಳುಮಟ್ಟದ ವ್ಯವಸ್ಥೆಗೆ ಹೊಂದಿಕೊಂಡು ದೂರುವಂತೆ ಮಾಡುತ್ತವೆ. ಒಂದು ಚೌಕಟ್ಟಿನಲ್ಲಿ ಮೇಲ್ಜಾತಿ, ಕೆಳಜಾತಿ ನಡುವಿನ ಸಂಘರ್ಷ, ವ್ಯವಸ್ಥೆ ವಿರುದ್ಧ ಹೋರಾಡುವ ಪ್ರಗತಿಪರ ಯುವಕರು, ಕುರುಡು ಕಾಂಚಾಣಕ್ಕೆ ಸೋತು ಸಿಕ್ಕಿಕೊಂಡವರು, ಓಡಿಬಂದವರು, ತನ್ನತನವನ್ನು ಮಾರಿಕೊಂಡವರೆಲ್ಲರೂ ಕಾಣಸಿಗುತ್ತಾರೆ. ಸುನೀಲ್ ಇಡೀ ಚಿತ್ರದ ಆಕರ್ಷಣೆ. ಅವರಿಲ್ಲಿ ದಲಿತ ನಾಯಕನಾಗಿ ವ್ಯವಸ್ಥೆ ವಿರುದ್ಧ ಹೋರಾಡುವ ಯುವಕರಾಗಿ ಗಮನಸೆಳೆಯುತ್ತಾರೆ. ಅಸಹಾಯಕ ಕೂಲಿಕಾರನಾಗಿ ಸರ್ದಾರ್ ಸತ್ಯ ಇಷ್ಟವಾಗುತ್ತಾರೆ.
ಸಂಯುಕ್ತಾ ಹೊರನಾಡು ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೋನು ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು. ಪಟೇಲನ ಕೆಟ್ಟ ಮಗನಾಗಿ ದಿಲೀಪ್‌ರಾಜ್ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸಂಚಾರಿ ವಿಜಯ್ ಮತ್ತಿತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಕೊನೆಮಾತು: ಸಿನ್ಮಾ ನೋಡಿ ಹೊರಬಂದಾಗ, “ಮಾರಿಕೊಂಡವರು’ ಎಂಬ ಶೀರ್ಷಿಕೆಗಿಂತ, “ಸಂಬಂಜ ಅನ್ನೋದು ದೊಡ್ಡದು ಕಣಾ …’ ಎಂಬ ಶೀರ್ಷಿಕೆಯೇ ಇಟ್ಟಿದ್ದರೆ ಸೂಕ್ತವಾಗಿರುತ್ತಿತ್ತೇನೋ ಅನಿಸುವುದು ಮಾತ್ರ ಸುಳ್ಳಲ್ಲ.
ಚಿತ್ರ: ಮಾರಿಕೊಂಡವರುನಿರ್ಮಾಣ: ಎ.ಎಸ್.ವೆಂಕಟೇಶ್, ಎಂ.ಗುರುರಾಜ್ ಶೇಟ್
ನಿರ್ದೇಶನ: ಕೆ.ಶಿವರುದ್ರಯ್ಯ
ತಾರಾಗಣ: ಸುನೀಲ್, ಸರ್ದಾರ್ ಸತ್ಯ, ಸಂಚಾರಿ ವಿಜಯ್, ದಿಲೀಪ್‌ರಾಜ್, ಸೋನು, ಸಂಯುಕ್ತಾ ಹೊರನಾಡು ಇತರರು. * ವಿಜಯ್ ಭರಮಸಾಗರ