Advertisement
ನೋಡಿ… ಒಂದು ಅಕ್ಷರ (ಸ್ವರ) ಎಷ್ಟೊಂದು ರೂಪದಲ್ಲಿ ಬಳಕೆಯಾಗುವುದಲ್ಲವೆ? ಹಾಗಾದರೆ ಮುಂದೆ ಅಕ್ಷರಗಳು ಸೇರಿ ಪದವಾದಾಗ ಅದಕ್ಕೆಷ್ಟು ರೂಪಗಳಿರಬಹುದು? ನಿಜಕ್ಕೂ ಪ್ರತಿಯೊಂದು ಪದವೂ ಬೇರೆ ಬೇರೆಯವರ ದೃಷ್ಟಿಯಲ್ಲಿ ಬಳಕೆಯಲ್ಲಿ ವಿಭಿನ್ನ ರೂಪ ಪಡೆದುಕೊಳ್ಳುತ್ತದೆ. ಈಗಾಗಲೇ ನಾನು ಬರೆದ “ಕೂ…’ ಎಂಬ ಅಕ್ಷರದ ಮುಂದೆ ಅಕ್ಷರಗಳನ್ನು ಸೇರಿಸಿ ಪದ ಬರೆಯಲು ಹೇಳಿದರೆ ಒಬ್ಬೊಬ್ಬರು ಒಂದೊಂದು ವಿಭಿನ್ನ ಪದಗಳನ್ನು ಬರೆಯಬಹುದು. ಆದರೆ ನಾನೀಗ ಹೇಳಲು ಹೊರಟಿರುವುದು ಕೂದಲಿನ ಬಗ್ಗೆ.
Related Articles
Advertisement
ಇನ್ನು ಕೂದಲನ್ನು ಓರಣಗೊಳಿಸಲು ಅದೆಷ್ಟು ವಿಧದ ಬಾಚಣಿಗೆಗಳು? ಸಿಕ್ಕು ಬಿಡಿಸಲೊಂದು, ಹಗುರಕ್ಕೆ ಬಾಚಲೊಂದು, ಸೊಂಪಾಗಿ ಬಾಚಲೊಂದು, ರಬ್ಬರ್‌ಬ್ಯಾಂಡ್ ಸಿಕ್ಕಿಸಿದ ಮೇಲೂ ಕೊನೆಯಲ್ಲಿ ಉಳಿದ ಕೂದಲನ್ನು ಗುಂಗುರು ಕೂದಲಂತೆ ದಪ್ಪವಾಗಿ ಕಾಣುವಂತೆ ಮಾಡಲೊಂದು ಹೀಗೆ ಹಲವು ಬಾಚಣಿಗೆಗಳು. ಇವೆಲ್ಲವನ್ನು ಹೊರತುಪಡಿಸಿ ಆಪದಾºಂಧವನಂತೆ ಪ್ರತಿಮನೆಯಲ್ಲೂ ಕಾವಲಿರುವ ಬಾಚಣಿಗೆ “ಹೇನು’ ಬಾಚುವ ಬಾಚಣಿಗೆ! ಇಷ್ಟೆಲ್ಲಾ ಬಾಚಣಿಗೆಗಳು ಕೂದಲನ್ನು ಒಪ್ಪಗೊಳಿಸಲು ಸಾಕಾಗುವುದಿಲ್ಲವೆಂದು ಇದೀಗ ನೂರಾರು ಬ್ಯೂಟಿಪಾರ್ಲರುಗಳು, ಹಲವು ವಿಧದ “ಕಟ್’ ಗಳೂ ಮೈದಾಳಿವೆ. “ಯು’ ಕಟ್, “ವಿ’ ಕಟ್, “ಸ್ಟೆಪ್ ಕಟ್’, “ಫೆದರ್ ಕಟ್’ “ಬಾಬ್‌ಕಟ್’- ಹೀಗೆ ಕೂದಲನ್ನು ಕತ್ತರಿಸಲೂ ಅದೆಷ್ಟು ರೀತಿಗಳು? ದಪ್ಪವೋ ತೆಳ್ಳಗೆಯೋ ಯಾವುದರ ಅರಿವೆಯೂ ಇಲ್ಲದೆ ತಲೆ ಅತಿಯಾಗಿ ಬೆವರಿ ಹುಣ್ಣುಗಳೆದ್ದಾಗಲೋ, ಕೂದಲು ತಲೆತುಂಬಿ ಶೀತ ಪದೇ ಪದೇ ಕಾಡುತ್ತಿದೆಯೆಂದಾಗ ತನ್ನ ಆಕ್ಷೇಪದ ಹೊರತಾಗಿಯೂ ಸೊಸೆ ಮೊಮ್ಮಕ್ಕಳ ಕೂದಲನ್ನು ಸಣ್ಣಗೆ ಕತ್ತರಿಸುತ್ತಿದ್ದುದನ್ನು ನೋಡುತ್ತಿದ್ದ ಅಜ್ಜಿ ಈಗ ಬೆಳೆದುನಿಂತ ಮೊಮ್ಮಕ್ಕಳ ಕೂದಲ ರೀತಿ-ರಿವಾಜುಗಳನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟಿದ್ದಾಳೆ! ಈ ರೀತಿಯ ಕೂದಲುಳ್ಳವರಿಗೆ ಬೇರೆ ಎಲ್ಲ ವಿಷಯಗಳಿಗಿಂತಲೂ ಅಧಿಕ ಚಿಂತೆ ತಮ್ಮ ಕೂದಲಿನದೇ! ಅಂತಹವರಿಗಾಗಿಯೇ ಬಂದಿದೆ ವಿದ್ಯುತ್ ಹಾಯಿಸಿ ಕೂದಲನ್ನು ನೇರಗೊಳಿಸುವ ಪ್ರಕ್ರಿಯೆಗಳು!
ಇದೀಗ ಫ್ಯಾಶನ್ ಯುಗ. ಕೂದಲು ಎಂದಾಕ್ಷಣ ಎಲ್ಲರೂ ಏಕೆ ಹೆಂಗಸರತ್ತಲೇ ಮುಖ ಮಾಡಬೇಕು? ಗಂಡಸರಿಗೂ ಕೂದಲಿಲ್ಲವೇ? ಆದ್ದರಿಂದಲೇ ಬಂದಿದೆ ಗಂಡಸರ ಕೂದಲು ಕತ್ತರಿಸುವುದರಲ್ಲೂ ನೂರಾರು ಫ್ಯಾಶನ್‌ಗಳು; ಅವರಿಗಾಗಿಯೇ ಪ್ರತ್ಯೇಕ ಬ್ಯೂಟಿಪಾರ್ಲರುಗಳು.
ಕುದುರೆಲಾಲದಾಕಾರದಲ್ಲೋ, ರೈಲುಪಟ್ಟಿ ತಲೆ ಮೇಲೆಯೇ ಬಂದಂತೆನಿಸುವಂತೆಯೋ, ಕ್ರಿಕೆಟ್, ಫುಟ್‌ಬಾಲ್, ಸಿನೆಮಾ ಹೀರೋಗಳನ್ನು ಅನುಕರಿಸಿಯೋ ಮಾಡುವ ಫ್ಯಾಶನ್ ಅಂತಿರಲಿ, ಹೆಂಗಸಿನ ಉದುರಿದ ಕೂದಲನ್ನು ಕಂಡು ಹೌಹಾರುವ, ಅಸಹ್ಯವನ್ನು ಮುಟ್ಟಿದಂತೆ ಮುಖ ಸಿಂಡರಿಸುವ ಗಂಡಸರೂ ಹೆಂಗಸರಂತೆ ಕೂದಲು ಇಳಿಬಿಟ್ಟು ಜುಟ್ಟು ಕಟ್ಟಲು ಆರಂಭಿಸಿದ್ದಾರೆ. ಆದರೆ ಉದ್ದನೆಯ ಕೇಶರಾಶಿ ಎಂಬುದು ಹೆಂಗಸಿನ ಸಂಗಾತಿಯೆಂಬುದು ಹಿಂದಿನಿಂದಲೂ ಬಂದ ವಾಡಿಕೆ. ಕ್ಷಣಾರ್ಧದಲ್ಲಿ ಎಲ್ಲವೂ ಮುಗಿದುಬಿಡಬೇಕೆಂಬ ಈ ಕಾಲದಲ್ಲಿ ಗಂಟೆಗಟ್ಟಲೆ ಎಣ್ಣೆಹಚ್ಚಿ ಕುಳಿತು, ಬೊಗಸೆ ತುಂಬ ಸೊಪ್ಪು ಕಿವುಚಿ ಬಾಲ್ದಿ ತುಂಬ ಗೊಂಪು ಸುರಿದು, ತಾಸುಗಟ್ಟಲೆ ಮಿಂದು, ಕೂದಲು ಒರೆಸಿ ತಲೆಗೊಂದು ಬಟ್ಟೆ ಬಿಗಿದು ಕಟ್ಟಿ ಬಿಚ್ಚುತ್ತಲೇ ಹದವಾಗಿ ಒಣಗಿದ ತಲೆತುಂಬಾ ಸಿಕ್ಕುಗಳು! ಅವುಗಳನ್ನು ಬಿಡಿಸಿ ದಿನನಿತ್ಯ ತಪಸ್ಸಿನಂತೆ ಜಡೆ ಹೆಣೆಯುವ ವ್ಯವಧಾನ ಯಾರಿಗಿದೆ? ಮೋಟುದ್ದ ಕೂದಲು, ಚೋಟುದ್ದ ಜಡೆ ಬಾಚಿದರೂ ಆಗುತ್ತೆ, ಇಲ್ಲದಿದ್ದರೂ ನಡೆಯುತ್ತೆ.
ಈ ಫ್ಯಾಶನ್ ಜಗತ್ತಿನಲ್ಲಿ ಮುಖದ ಬದಿಯ ಕೂದಲು ಕಣ್ಣನ್ನು ಸೋಕಿಸುತ್ತಾ, ಅದನ್ನು ಕೈಗಳಲ್ಲಿ ಹಿಂದಕ್ಕೆ ತಳ್ಳುತ್ತಾ, ಕುದುರೆ ಬಾಲದಂತೆ ಮೇಲೆತ್ತಿ ಕಟ್ಟಿದ ಮೋಟುದ್ದ ಕೂದಲನ್ನು ಹಾರಿಸುತ್ತಾ ಯುವತಿಯರು ನಡೆಯುತ್ತಿರುವಾಗ ಹಿಂದಿನ ನಾಗವೇಣಿ, ನೀಲವೇಣಿಯರೆಲ್ಲ ಎಲ್ಲಿ ಹೋದರೆಂದು ಯೋಚಿಸುವಾಗ ಸಿಕ್ಕಿತು ಉತ್ತರ… ಬಹುಶಃ ಮುದುಕಿಯರಾಗಿರಬೇಕು! ಹೀಗೆ ಯೋಚಿಸುತ್ತಿರುವಾಗ ಇನ್ನೂ ಹಳ್ಳಿಯಲ್ಲಾದರೂ ಅಲ್ಲೊಬ್ಬರು ಇಲ್ಲೊಬ್ಬರು ನಾಗವೇಣಿಯರಿದ್ದಾರೆಂದರೆ ಅದು ಆಶ್ಚರ್ಯವಲ್ಲದೆ ಸಂತೋಷದ ವಿಚಾರವಲ್ಲವೆ? ಉದ್ದನೆಯ ಕೂದಲು ಹೆಂಗಸಿಗೆ ಹಿರಿಮೆಯೆಂದು ಆ ಯುವತಿಯರು ಭಾವಿಸಿದ್ದಾರೆಂದೇ ನಾನು ಆಲೋಚಿಸುತ್ತೇನೆ!
– ಸ್ವಾತಿ ಕೆ., ಸುರತ್ಕಲ್