ಬೆಂಗಳೂರು: ರಸ್ತೆ ಅಪಘಾತ ವಿಚಾರವಾಗಿ ಸ್ವಿಗ್ಗಿ ಸಂಸ್ಥೆಯ ಆಹಾರ ಡೆಲಿವರಿ ಮಾಡುವ ಯುವಕರ ಗುಂಪು ಅರಕೆರೆ ಬಳಿಯಿರುವ ಎಂಪೈರ್ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಎಂಪೈರ್ ಹೋಟೆಲ್‌ನ ಏಳು ಸಿಬ್ಬಂದಿ ಹಾಗೂ 21 ಮಂದಿ ಸ್ವಿಗ್ಗಿ ಫುಡ್ ಡಿಲೆವರಿ ಯುವಕರನ್ನು ಮೈಕೋ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಯುವಕ ನದೀಂ ಎಂಬುವವನು ಬೈಕ್‌ನಲ್ಲಿ ಹೋಗುತ್ತಿದ್ದ. ಇದೇ ವೇಳೆ ಹಿಂದಿನಿಂದ ಬಂದ ಎಂಪೈರ್ ಹೋಟೆಲ್ ಸಿಬ್ಬಂದಿ ಫಾರುಖ್ ಎಂಬಾತ, ನದೀಂ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ನದೀಂ ಬೈಕ್‌ಗೆ ಹಾನಿಯಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಮೈಕೋಲೇಔಟ್ ಸಂಚಾರ ಠಾಣೆ ಪೊಲೀಸರು ಇಬ್ಬರಿಗೂ ಸಮಾಧಾನ ಮಾಡಿ ಸ್ಥಳದಿಂದ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.
ಆದರೆ, ಘಟನೆಯಿಂದ ಆಕ್ರೋಶಗೊಂಡಿದ್ದ ನದೀಂ ಸ್ವಿಗ್ಗಿ ಸಂಸ್ಥೆಯ ಇತರೆ ಸಿಬ್ಬಂದಿ ಹಾಗೂ ಕೆಲ ಸ್ನೇಹಿತರನ್ನು ಬನ್ನೇರುಘಟ್ಟದ ಅರಕೆರೆಯಲ್ಲಿರುವ ಎಂಪೈರ್ ಹೋಟೆಲ್‌ಗೆ ಕರೆದೊಯ್ದು ಒಳ ನುಗ್ಗಿ ಫಾರುಕ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಹೋಟೆಲ್ ಸಿಬ್ಬಂದಿ ಹಾಗೂ ನದೀಂ ತಂಡದ ನಡುವೆ ಜಗಳವಾಗಿದ್ದು, ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದಾರೆ.
ಬಳಿಕ ನದೀಂ ಮೈಕೋ ಲೇಔಟ್ ಠಾಣೆಯಲ್ಲಿ ಹಲ್ಲೆ ಆರೋಪದಡಿ ದೂರು ನೀಡಿದ್ದ. ಈ ಸಂಬಂಧ ಫಾರುಖ್ ಹಾಗೂ ಇತರೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಎಂಪೈರ್ ಹೋಟೆಲ್ ಮತ್ತು ಸ್ವಿಗ್ಗಿ ಫುಡ್ ಸಂಸ್ಥೆ ಮುಖ್ಯಸ್ಥರು ಠಾಣೆಗೆ ಬಂದು ಪರಸ್ಪರ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿ ಕರೆದೊಯ್ದಿದ್ದರು ಎಂದು ಪೊಲೀಸರು ಹೇಳಿದರು.
ವಾಟ್ಸ್‌ಆ್ಯಪ್ ಮೂಲಕ ಕರೆಸಿಕೊಂಡ: ಈ ನಡುವೆ ತಡರಾತ್ರಿ 12.30ರ ಸುಮಾರಿಗೆ ತನ್ನ ವಾಟ್ಸ್‌ಆ್ಯಪ್ ಮೂಲಕ ಸಂದೇಶ ರವಾನಿಸಿದ ನದೀಂ, ಸುಮಾರು 40 ಮಂದಿ ಸ್ವಿಗ್ಗಿ ಡೆಲಿವರಿ ಯುವಕರು ಹಾಗೂ ಇತರೆ ಸ್ನೇಹಿತರನ್ನು ಮತ್ತೆ ಎಂಪೈರ್ ಹೋಟೆಲ್ ಬಳಿ ಕರೆದೊಯ್ದು ಕಲ್ಲು ತೂರಾಟ ನಡೆಸಿದ್ದಾನೆ.
ಪರಿಣಾಮ ಎಂಪೈರ್ ಹೋಟೆಲ್‌ನ ಮುಂಭಾಗದ ಗಾಜು ಸಂಪೂರ್ಣ ಹಾನಿಯಾಗಿದ್ದು, ಅದೃಷ್ಟವಶಾತ್ ಎಂಪೈರ್ ಹೋಟೆಲ್‌ನಲ್ಲಿದ್ದ ಗ್ರಾಹಕರು, ಸಿಬ್ಬಂದಿಗೆ ಯಾವುದೇ ಗಾಯಗಳಾಗಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ 21 ಮಂದಿ ಸ್ವಿಗ್ಗಿ ಡೆಲಿವರಿ ಯುವಕರು ಮತ್ತು ಎಂಪೈರ್ ಹೋಟೆಲ್‌ನ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.