ಹುಬ್ಬಳ್ಳಿ: ಹು-ಧಾ ಬಿಆರ್‌ಟಿಎಸ್ ಬಸ್ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆಯಿಲ್ಲದ ಪರಿಣಾಮ ಸ್ವಚ್ಛತೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಚಿಗರಿ ಬಸ್‌ನಲ್ಲೇ ನೀರು ಹಾಗೂ ಕಸ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹು-ಧಾ ನಗರದ ಮಧ್ಯೆ ಇರುವ 33 ಬಸ್ ನಿಲ್ದಾಣಗಳ ಪೈಕಿ ಸುಮಾರು 30 ಬಸ್ ನಿಲ್ದಾಣಗಳ ಸ್ವಚ್ಛತೆಗೆ ನೀರಿನ ಕೊರತೆಯಿದೆ. ಏಜೆನ್ಸಿಯ ಸ್ವಚ್ಛತಾ ಸಿಬ್ಬಂದಿಯೇ ಅಲ್ಲಲ್ಲಿ ಕಾಡಿ ಬೇಡಿ ನೀರು ತಂದು ನಿಲ್ದಾಣ ಸ್ವಚ್ಛ ಮಾಡುತ್ತಿದ್ದಾರೆ. ಬೇರೆಡೆಯಿಂದ ನೀರು ಹೊತ್ತು ಬರುವ ಪರಿಸ್ಥಿತಿ ಇರುವುದರಿಂದ ನಿತ್ಯ ಒಂದೇ ಕೊಡ ನೀರಿನಲ್ಲಿ ಇಡೀ ಬಸ್ ನಿಲ್ದಾಣ ಸ್ವಚ್ಛಗೊಳಿಸುವಂತಾಗಿದೆ. ಸ್ವಚ್ಛತೆಗೆ ಬೇಕಾದ ನೀರನ್ನು ಕೂಡ ಚಿಗರಿ ಬಸ್ಸಿನಲ್ಲೇ ತಂದೆ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
ಕಸ ಮುಟ್ಟದ ಪಾಲಿಕೆ, ಬಸ್ಸಿನಲ್ಲಿ ಸಾಗಾಟ: ಬಸ್ ನಿಲ್ದಾಣದ ಕಸವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಮುಟ್ಟುತ್ತಿಲ್ಲ. ಬೆಳಗಿನ ಜಾವ ಕಸದ ಚೀಲವನ್ನು ನಿಲ್ದಾಣದ ಮುಂದಿಟ್ಟರೆ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ಕಸ ಗೂಡಿಸುವ ಸಿಬ್ಬಂದಿ ಕಸವನ್ನು ಬಸ್‌ನಲ್ಲಿ ಹಾಕಿಕೊಂಡು ದೂರ ಖಾಲಿ ನಿವೇಶನಗಳಲ್ಲಿ ಕಸ ಬೀಸಾಡುತ್ತಿದ್ದಾರೆ. ಕಸ ತೆಗೆದುಕೊಂಡು ಹೋಗುವ ಕುರಿತು ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ವಚ್ಛತಾ ಸಿಬ್ಬಂದಿ ಅಳಲಾಗಿದೆ.
ಕ್ಷೀಣಿಸಿದ ಸಿಬ್ಬಂದಿ ಸಂಖ್ಯೆ: ಸ್ವಚ್ಛತಾ ಕಾರ್ಯವನ್ನು 2 ಏಜೆನ್ಸಿಗಳಿಗೆ ನೀಡಲಾಗಿದ್ದು, ಪ್ರಾಯೋಗಿಕವಾಗಿ ಆರಂಭವಾದ ಸಂದರ್ಭದಲ್ಲಿ ನಿಲ್ದಾಣಕ್ಕೆ ಒಬ್ಬರಂತೆ ನಿಯೋಜಿಸಲಾಗಿತ್ತು. ಆದರೆ ಇದೀಗ ಎರಡು ನಿಲ್ದಾಣಗಳಿಗೆ ಓರ್ವ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎರಡೂ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ತೆರಳಿದ ನಂತರ ನಿಲ್ದಾಣದ ಸ್ವಚ್ಛತೆ ಕೇಳ್ಳೋರಿಲ್ಲದಂತಾಗುತ್ತಿದೆ. ಮಳೆಗಾಲದಲ್ಲಿ ಸಾಕಷ್ಟು ರಾಡಿಯಾಗುವುದರಿಂದ ಇಂದಿನ ಕಸ ಮಾರನೇ ದಿನ ಸ್ವಚ್ಛಗೊಳಿಸಲಾಗುತ್ತದೆ. ಹೀಗಾಗಿ ಕೆಲ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಓಡಾಡುವ ನಿಲ್ದಾಣಗಳು ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತವೆ. ಇನ್ನೂ ಪ್ಲಾಟ್ಫಾರ್ಮ್ಗಳ ಸ್ವಚ್ಛತೆ ಯಾರದೋ ಎನ್ನುವ ಗೊಂದಲದಿಂದ ತಿಪ್ಪೆಯಾಗಿ ಪರಿಣಮಿಸಿದೆ.
Advertisement
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಮುಖವಾಗಿ ಕೆಲ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿರುವುದು ಪ್ರಾಯೋಗಿಕ ಹಂತದಲ್ಲಿ ಬೆಳಕಿಗೆ ಬಂದಿದ್ದವು. ಇದರಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಆದರೆ ಇದೀಗ ಬಸ್ ನಿಲ್ದಾಣ ಸ್ವಚ್ಛತೆಗೂ ನೀರಿನ ತೊಂದರೆ ಎದುರಾಗಿದ್ದು, ಅಕ್ಕಪಕ್ಕದ ಹೊಟೇಲ್, ಪಾರ್ಕ್, ಸಾರ್ವಜನಿಕ ನಲ್ಲಿಗಳಿಂದ ನೀರು ತಂದು ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವಂತಾಗಿದೆ. ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುವ ಬಸ್ ನಿಲ್ದಾಣ ದಿನಕ್ಕೊಮ್ಮೆ ಮಾತ್ರ ಸ್ವಚ್ಛವಾಗುತ್ತಿದೆ.
Related Articles
Advertisement
ಆಗುತ್ತಿಲ್ಲ ಕಸ ವಿಲೇವಾರಿ: ನಿಲ್ದಾಣದಲ್ಲಿರುವ ಡಬ್ಬಿಗಳ ಕಸ ಮೂರ್‍ನಾಲ್ಕು ದಿನಗಳಿಗೊಮ್ಮೆ ವಿಲೇವಾರಿಯಾಗುತ್ತಿದೆ. ಈ ಕಸದ ಡಬ್ಬಿಗಳಿಗೆ ಹೊದಿಸುವ ಪ್ಲಾಸ್ಟಿಕ್ ಬ್ಯಾಗ್‌ವೊಂದನ್ನು ಮೂರ್‍ನಾಲ್ಕು ದಿನ ಬಳಕೆ ಮಾಡುವಂತೆ ಗುತ್ತಿಗೆದಾರರು ಸಿಬ್ಬಂದಿಗೆ ಸೂಚಿಸಿದ ಪರಿಣಾಮ ಡಬ್ಬಿ ಕಸ ನಿತ್ಯ ವಿಲೇವಾರಿಯಾಗುತ್ತಿಲ್ಲ. ಎಲೆ ಅಡಕೆ, ಗುಟ್ಕಾ ಉಗುಳಿರುವುದು ಸೇರಿದಂತೆ ಕಸ ಮೂರ್‍ನಾಲ್ಕು ದಿನಗಳಿಗೊಮ್ಮೆ ವಿಲೇವಾರಿಯಾಗುತ್ತಿದೆ.
ಭರವಸೆಯಾಗಿಯೇ ಉಳಿದ ಶೌಚಾಲಯ:
ಬಿಆರ್‌ಟಿಎಸ್ ಟಿಕೆಟ್ ಕೌಂಟರ್‌ಗಳಿಗೆ ಮಹಿಳಾ ಸಿಬ್ಬಂದಿ ಇರುವುದರಿಂದ ಶೌಚಾಲಯದ ವ್ಯವಸ್ಥೆ ಬೇಡಿಕೆಯಿತ್ತು. ಸಿಬ್ಬಂದಿ ಈ ಸಮಸ್ಯೆ ಕುರಿತು ಉದಯವಾಣಿ ಬೆಳಕು ಚೆಲ್ಲುವ ಕಾರ್ಯ ಮಾಡಿತ್ತು. ನಂತರ ಬಿಆರ್‌ಟಿಎಸ್ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಅಗತ್ಯವಿರುವೆಡೆ ಇ-ಶೌಚಾಲಯ ನಿರ್ಮಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಿದ್ದರು. ಆದರೆ ಪ್ರಾಯೋಗಿಕವಾಗಿ ಆರಂಭವಾಗಿ ಎಂಟು ತಿಂಗಳು ಗತಿಸುತ್ತಿದ್ದರೂ ಒಂದೂ ಶೌಚಾಲಯ ನಿರ್ಮಾಣವಾಗಿಲ್ಲ. ಹೀಗಾಗಿ ಮಹಿಳಾ ಸಿಬ್ಬಂದಿ ಹೊಟೇಲ್, ಇತರೆ ಕಚೇರಿಗಳನ್ನು ಅರಸಿಕೊಂಡು ಓಡಾಡುವಂತಾಗಿದೆ. ಇಲ್ಲವೇ ಎಂಟು ಗಂಟೆಗಳ ಕಾಲ ನೈಸರ್ಗಿಕ ಕರೆಯನ್ನು ಸಹಿಸಿಕೊಂಡು ಕೆಲಸ ಮಾಡುವಂತಾಗಿದ್ದು, ಈಗಲಾದರೂ ನಮ್ಮ ಗೋಳು ಅಧಿಕಾರಿಗಳಿಗೆ ಅರ್ಥವಾಗಲಿ ಎಂಬುದು ಸಿಬ್ಬಂದಿಯ ಅಳಲಾಗಿದೆ.
•ಹೇಮರಡ್ಡಿ ಸೈದಾಪುರ