ಬೆಂಗಳೂರು: ರಾಜ್ಯದ ಸರಕು-ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಪೆಟ್ರೋಲಿಯಂನ ಸಾವಿರ ಕೋಟಿ ಸೇರಿ ಒಟ್ಟಾರೆ ತಿಂಗಳಿಗೆ ಸುಮಾರು ಏಳು ಸಾವಿರ ಕೋಟಿ ರೂ. ಸಂಗ್ರಹ ಆಗುತ್ತದೆ ಎಂದು ತೆರಿಗೆ ಹಾಗೂ ಸೀಮಾ ಸುಂಕ ಇಲಾಖೆ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ (ಜಿಎಸ್‌ಟಿ) ಎ.ಕೆ. ಜೋತಿಷಿ ತಿಳಿಸಿದರು.
ಸೋಮವಾರ ನಗರದ ತೆರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟಾರೆ ಐದು ಲಕ್ಷ ತೆರಿಗೆ ಪಾವತಿದಾರರಿದ್ದು, ಇದರಲ್ಲಿ ಮೂರು ಲಕ್ಷ ರಾಜ್ಯ ಜಿಎಸ್‌ಟಿ ಹಾಗೂ ಎರಡು ಲಕ್ಷ ಕೇಂದ್ರ ಜಿಎಸ್‌ಟಿಗೆ ತೆರಿಗೆ ಪಾವತಿಸುವವರಾಗಿದ್ದಾರೆ. ಇವರಿಂದ ತಿಂಗಳಿಗೆ ಏಳು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಆಗುತ್ತಿದೆ ಎಂದು ಹೇಳಿದರು.
ಜಿಎಸ್‌ಟಿ ಆದಾಯದಲ್ಲಿ ದೇಶದಲ್ಲೇ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಯಾವ ಸ್ಥಾನದಲ್ಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ಉತ್ತಮ ಸ್ಥಿತಿಯಲ್ಲಿದೆ. ಮಾಹಿತಿ ತಂತ್ರಜ್ಞಾನದಿಂದ ಗರಿಷ್ಠ ಮಟ್ಟದಲ್ಲಿ ತೆರಿಗೆ ಸಂಗ್ರಹ ಇಲ್ಲಿ ಆಗುತ್ತದೆ. ರಾಜ್ಯದ ಒಟ್ಟಾರೆ ವೃದ್ಧಿ ದರ (ಜಿಡಿಪಿ)ದಲ್ಲಿ ಮಾತ್ರ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದರು.
910 ಕೋಟಿ ರೂ. ಮರುಪಾವತಿ: ಜಿಎಸ್‌ಟಿ ಜಾರಿಗೆ ಬಂದ ದಿನದಿಂದ ಈವರೆಗೆ “ವರ್ತಕರು ತಮಗೆ ಬರಬೇಕಾದ ಹಣಕ್ಕೆ ಸಲ್ಲಿಸಿದ ಬೇಡಿಕೆ’ (ಕ್ಲೈಮ್)ಗಳಿಗೆ ಪ್ರತಿಯಾಗಿ 910 ಕೋಟಿ ರೂ. ಮರುಪಾವತಿ ಮಾಡಲಾಗಿದೆ. ಇನ್ನು ಒಟ್ಟಾರೆ ಸಲ್ಲಿಕೆಯಾದ ಕ್ಲೈಮುಗಳು 1,685 ಆಗಿದ್ದು, ಇವುಗಳ ಮೊತ್ತ 670 ಕೋಟಿ ರೂ. ಈ ಪೈಕಿ ಮನವಿಗಳನ್ನು 1,242 ವಿಲೇವಾರಿ ಮಾಡಿ, 650 ಕೋಟಿ ರೂ. ಮರುಪಾವತಿ ಮಾಡಲಾಗಿದೆ.
ಉಳಿದ 250 ಕೋಟಿ ರೂ. ರಾಜ್ಯ ಜಿಎಸ್‌ಟಿಗೆ ಸಂಬಂಧಿಸಿದ್ದು, ಅದೆಲ್ಲವೂ ಈಗಾಗಲೇ ಪಾವತಿಸಲಾಗಿದೆ ಎಂದು ಎ.ಕೆ. ಜೋತಿಷಿ ವಿವರಿಸಿದರು. ಒಟ್ಟಾರೆ ಪಾವತಿಯಾದ ಹಣದಲ್ಲಿ 2018ರ ಮೇ 31ರಿಂದ ಜೂನ್ 14ರವರೆಗೆ ಹಮ್ಮಿಕೊಳ್ಳಲಾದ “ಮರುಪಾವತಿ ವಿತರಣಾ ಪಾಕ್ಷಿಕ’ ಅಭಿಯಾನದಲ್ಲೇ ಶೇ. 90ರಷ್ಟು ಮರುಪಾವತಿ ಮಾಡಲಾಗಿದೆ.
ಅದರಲ್ಲೂ ಕಳೆದ ಏಳು ದಿನಗಳಲ್ಲಿ 197 ಕೋಟಿ ರೂ. ಅರ್ಹ ವರ್ತಕರಿಗೆ ಮರುಪಾವತಿ ಮಾಡಲಾಗಿದೆ. ವಾರ್ಷಿಕ 4,500 ಕೋಟಿ ರೂ. ಹಿಂಪಾವತಿ (ರಿಇಂಬರ್ಸ್‌ಮೆಂಟ್) ಆಗುತ್ತಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಮರುಪಾವತಿಯಲ್ಲಿ ಬೆಂಗಳೂರು ವಲಯವು ಶೇ. 96ರಷ್ಟು ಪ್ರಗತಿ ಸಾಧಿಸಿದ್ದು, ಶೇ. 100ರಷ್ಟು ಪ್ರಗತಿ ಸಾಧಿಸುವ ಗುರಿ ಇದೆ.
ಈ ನಿಟ್ಟಿನಲ್ಲಿ ಮರುಪಾವತಿಗಳ ಮಂಜೂರಾತಿಗೆ ಅನುಕೂಲ ಆಗುವಂತೆ ಏರ್ ಕಾರ್ಗೋ ಕಾಂಪ್ಲೆಕ್ಸ್, ಇನ್‌ಲಾÂಂಡ್ ಕಂಟೈನರ್ ಡಿಪೋ ಮತ್ತು ಮಂಗಳೂರಿನಲ್ಲಿ ವಿಶೇಷ ಕೋಶಗಳನ್ನು ರಚಿಸಲಾಗಿದೆ. ಈ ಕೋಶಗಳು ರಜೆ ದಿನಗಳಲ್ಲೂ ಕಾರ್ಯನಿರ್ವಸಹಲಿವೆ. ಇದರ ಉಪಯೋಗ ಪಡೆಯಬೇಕು ಎಂದು ತೆರಿಗೆದಾರರಿಗೆ ಎ.ಕೆ. ಜೋತಿಷಿ ಮನವಿ ಮಾಡಿದರು.