ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಚುನಾವಣಾ ಗೀತೆ ರೂಪಿಸಲಾಗಿದ್ದು, ಗೀತೆಯು ನೈತಿಕ ಮತದಾನದ ಜತೆಗೆ ಹೆಚ್ಚು ಮಂದಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವ ವಿಶ್ವಾಸವಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ಕರ್ನಾಟಕ ಚುನಾವಣಾ ಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಚುನಾವಣಾ ಗೀತೆ ರೂಪಿಸಿದ್ದು, ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗೀತೆಯನ್ನು ರಚಿಸಿ ನಿರ್ದೇಶಿಸಿರುವ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ರಾಜ್ಯದ ನೈಜ ಸ್ಪೂರ್ತಿಯೊಂದಿಗೆ ಗೀತೆ ರೂಪುಗೊಂಡಿದೆ. ಪ್ರತಿಯೊಬ್ಬರೂ ಮತದಾನ ಏಕೆ ಮಾಡಬೇಕು ಎಂಬ ಸಂದೇಶವನ್ನು ಗೀತೆ ಸಾರುತ್ತದೆ.
ಗೀತೆಯು ಮತದಾನ ಪ್ರಮಾಣ ಹೆಚ್ಚಲು ಉತ್ತೇಜಿಸಲಿದೆ. ಈ ಕಾರ್ಯಕ್ಕೆ ಉತ್ತೇಜಿಸಿದ ಮುಖ್ಯ ಚುನಾವಣಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಕಲಚೇತನರು, ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಯುವ ಮತದಾರರನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದ ಗಾಯನದೊಂದಿಗೆ ಗೀತೆ ರೂಪುಗೊಂಡಿದೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಧಾನಸೌಧ ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣವಾಗಿದ್ದು, ರಾಜ್ಯದ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ.
150 ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಗೀತೆಯು ನೈತಿಕ ಮತದಾನ ಉತ್ತೇಜಿಸಲು ಸಹಕಾರಿಯಾಗುವ ನಿರೀಕ್ಷೆಯಲ್ಲಿರುವ ಆಯೋಗವು ರೇಡಿಯೋ, ಟಿ.ವಿ, ಚಲನಚಿತ್ರ ಹಾಗೂ ಇತರೆ ಮಾಧ್ಯಮಗಳಲ್ಲಿ ಗೀತೆಯನ್ನು ಪ್ರಸಾರ ಮಾಡಲಿದೆ.