ಶೃಂಗೇರಿ: ರಾಜ್ಯದಲ್ಲಿ ಇರುವ ಪ್ರಮುಖ ಸಮಸ್ಯೆಗೆ ಪರಿಹಾರ ನೀಡುವ ಏಕೈಕ ಸಮರ್ಥ ಪಕ್ಷ ಜಾತ್ಯತೀತ ಜನತಾದಳವಾಗಿದೆ ಎಂದು ಜೆ.ಡಿ.ಎಸ್.ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಲಕ್ಷ್ಮೀನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದಲ್ಲದೇ ಸಹಾಯಧನದಲ್ಲಿ ಬಿತ್ತನೆಬೀಜ, ಯಂತ್ರೋಪಕರಣವನ್ನು ನೀಡುವ ಉದ್ದೇಶ ಹೊಂದಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸಿ, ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲಾಗುತ್ತದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೇವಲ ಅಧಿಕಾರ ಪಡೆಯಲು ಸುಳ್ಳು ಭರವಸೆ ನೀಡುತ್ತಾ ಮತದಾರರನ್ನು ವಂಚಿಸುತ್ತಿವೆ ಎಂದು ಆಕ್ಷೇಪಿಸಿದರು.
ಕ್ಷೇತ್ರ ಜೆ.ಡಿ.ಎಸ್.ಅಧ್ಯಕ್ಷ ದಿವಾಕರ ಭಟ್ ಮಾತನಾಡಿ, ಕ್ಷೇತ್ರದ ಮತದಾರರು ರಾಷ್ಟ್ರೀಯ ಪಕ್ಷವನ್ನು ತಿರಸ್ಕರಿಸಿ, ಸ್ಥಳೀಯ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಮಾಜಿ ಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದ ಎಚ್.ಜಿ.ಗೋವಿಂದೇಗೌಡರ ಪುತ್ರ ಎಚ್.ಜಿ.ವೆಂಕಟೇಶ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷಕ್ಕೆ ಈಗಾಗಲೇ ಬಿ.ಎಸ್ಪಿ. ಬೆಂಬಲ ನೀಡುತ್ತಿದೆ. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜೆ.ಡಿ.ಎಸ್.ಕ್ಷೇತ್ರ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ರೈತರು, ಸ್ತ್ರೀಶಕ್ತಿ ಸಂಘದ ಸದಸ್ಯರು,ನೇಕಾರರು, ಮೀನುಗಾರರು ಸಾಲದಿಂದ ಸಂಪೂರ್ಣ ಋಣಮುಕ್ತರಾಗಬೇಕು ಎಂಬುದು ಕುಮಾರಸ್ವಾಮಿ ಆಶಯವಾಗಿದೆ. ಗರ್ಭಿಣಿಯರಿಗೆ ಮಾಸಾಶನ, ಹಿರಿಯ ನಾಗರೀಕರಿಗೆ 5 ಸಾವಿರ ಮಾಸಾಶನ ಸೇರಿದಂತೆ ಅನೇಕ ಉತ್ತಮ ಕಾರ್ಯಕ್ರಮವನ್ನು ಕುಮಾರಸ್ವಾಮಿ ಈಗಾಗಲೇ ಪ್ರಕಟಿಸಿದ್ದಾರೆ. ಮನೆ ಮನೆಗೆ ಕುಮಾರಣ್ಣ ಮೂಲಕ ಪಕ್ಷದ ಕಾರ್ಯಕರ್ತರು ಮತದಾರರನ್ನು ತಲುಪಿದ್ದಾರೆ. ಜನಪರ ಕಾರ್ಯಕ್ರಮ ಹೊಂದಿರುವ ಜೆ.ಡಿ.ಎಸ್.ಪಕ್ಷವನ್ನು ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು.
ತಾಲೂಕು ಜೆ.ಡಿ.ಎಸ್.ಅಧ್ಯಕ್ಷ ಜಿ.ಜಿ.ಮಂಜುನಾಥ್ ಮಾತನಾಡಿ, ಏ.2 ರಂದು ಕಸಬಾ ಹೋಬಳಿ ಸಮಾವೇಶ ಮೆಣಸೆಯಲ್ಲಿ ನಡೆಯಲಿದೆ ಎಂದರು. ಜೆ.ಡಿ.ಎಸ್. ಮುಖಂಡರಾದ ನಿಸಾರ್ ಅಹಮದ್,ಅಯೂಬ್‌ಖಾನ್, ರಾಜಲಕ್ಷ್ಮೀ, ಮೊಯಿದ್ದಿನ್, ವಿವೇಕಾನಂದ, ಕೆ.ಎಸ್.ರಮೇಶ್, ದೇವೇಂದ್ರ, ಜಮಾಲ್‌ಸಾಬ್, ಸುಬ್ಬಣ್ಣ, ಹೆಗ್ಗದ್ದೆ ಶಿವಾನಂದರಾವ್, ಸತೀಶ್ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡರು.