ಪಣಜಿ: ದೇಶಕ್ಕಾಗಿ ಏನನ್ನಾದರೂ ಒಳಿತು ಮಾಡುವ ಸಮಯ ಬಂದಾಗ ಗೋವಾದ ಜನತೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಐತಿಹಾಸಿಕ ಲೋಹಿಯಾ ಮೈದಾನ ಸಾಕ್ಷಿಯಾಗಿದೆ. ವಿಸ್ತೀರ್ಣ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಗೋವಾ ಚಿಕ್ಕದಾದರೂ ಸಾಮಾಜಿಕ ವೈವಿಧ್ಯತೆಯ ದೃಷ್ಟಿಯಿಂದ ದೊಡ್ಡದಾಗಿದೆ. ಶುದ್ಧತ್ವವನ್ನು ತಲುಪಿದಾಗ ತಾರತಮ್ಯವು ನಿಲ್ಲುತ್ತದೆ. ಶುದ್ಧತ್ವವು ಸಂಭವಿಸಿದಾಗ, ಸಂಪೂರ್ಣ ಪ್ರಯೋಜನವು ಪ್ರತಿ ಫಲಾನುಭವಿಗೆ ತಲುಪುತ್ತದೆ. ಪಾರದರ್ಶಕತೆಯಿದ್ದಾಗ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಲಂಚ ನೀಡಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಗೋವಾದ ಮಡಗಾಂವ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ 13,000 ಕೋಟಿ ರೂಗಳ ವಿವಿಧ ಯೋಜನೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಬೃಹತ್ ಯೋಜನೆಗಳ ಜೊತೆಗೆ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ. ಗೋವಾದಲ್ಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಅದನ್ನು ಲಾಜಿಸ್ಟಿಕ್ ಹಬ್ ಮಾಡಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಗೋವಾದಲ್ಲಿ ಕೋಮು ಸೌಹಾರ್ದತೆ ಶ್ಲಾಘನೀಯ. “ಏಕ್ ಭಾರತ್ ಶ್ರೇಷ್ಠ ಭಾರತ್” ಇತರ ಸಮುದಾಯಗಳೊಂದಿಗೆ ಕ್ರಿಶ್ಚಿಯನ್ ಸಮುದಾಯದ ಸಂಬಂಧಕ್ಕೆ ಬಲವಾದ ಉದಾಹರಣೆಯಾಗಿದೆ. ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರು ಶಾಂತಿ ಮತ್ತು ಕೃತಜ್ಞತೆಯ ಸಂದೇಶವನ್ನು ಸಾರುತ್ತಿದ್ದಾರೆ. ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು ಗೋಂಯಚಾ ಸಾಹೇಬ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ನಾವು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸಿದ್ದೇವೆ ಎಂದು ಮೋದಿ ಪ್ರಸ್ತಾಪಿಸಿದರು. ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ 13000 ಕೋಟಿ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು, ಇದು ಗೋವಾದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದರು.
ಸದಾ ಶಕ್ತಿ ತುಂಬಿರುವ ಗೋವಾದಲ್ಲಿ ಭಾರತ ಇಂಧನ ಸಪ್ತಾಹ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಗೋವಾ ಯಾವಾಗಲೂ ಸ್ವಾಗತಿಸುವ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತದ ಪ್ರವಾಸಿಗರು ರಾಜ್ಯದ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದಾರೆ ಎಂದು ಪ್ರಧಾನಿ ಮೋದಿ ನುಡಿದರು.
ಪ್ರಧಾನಮಂತ್ರಿಯವರು ದೋನಾ ಪೌಲಾದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‍ಐಟಿ), ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋಟ್ರ್ಸ್ ಮತ್ತು ಕುರ್ಚೋರೆಮ್‍ನ ತ್ಯಾಜ್ಯ ನಿರ್ವಹಣಾ ಘಟಕ,ಪಣಜಿ ಮತ್ತು ರೇಯಿಶ ಮಾಗೋಸ್ ಕೋಟೆಯ ನಡುವಿನ ರೋಪ್‍ವೇ ಮತ್ತು ಕ್ಸೆಲ್ಪೆಮ್‍ನಲ್ಲಿ 100 ಎಂಎಲ್‍ಡಿ ನೀರು ಸಂಸ್ಕರಣಾ ಘಟಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು. ವಿವಿಧ ಯೋಜನೆಯ ಫಲಾನುಭವಿಗಳಿಗೆ ಪ್ರಧಾನಿಗಳು ಈ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಿದರು.
ಗೋವಾದ ಮಡಗಾಂವ ಬಸ್ ನಿಲ್ದಾಣದ ಎದುರಿನ ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಗೋವಾ ರಾಜ್ಯದ ಮೂಲೆ ಮೂಲೆಯಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.