Advertisement

ಮೌನಕ್ಕೆ ಶರಣಾದ ರಾಜ್ಯದ ಸಂಸದರು: ಕಾವೇರಿ ನದಿ ಸದ್ದು

06:00 AM Apr 04, 2018 | |

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಈ ವಿವಾದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ.

Advertisement

ಕಾವೇರಿ ನದಿ ನೀರು ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗಾಗಿ ಪಟ್ಟು ಹಿಡಿದಿರುವ ತಮಿಳುನಾಡು ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ತೀವ್ರಗೊಳಿಸಿದೆ. ಸಂಸತ್ತಿನಲ್ಲೂ ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಸತತ ಹೋರಾಟದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತಂತ್ರ ತೀವ್ರಗೊಳಿಸುತ್ತಿದ್ದಾರೆ. ಆದರೆ, ಕರ್ನಾಟಕ ಮಾತ್ರ ಎಲ್ಲವನ್ನೂ ಕೇಂದ್ರದ ಮೇಲೆ ಎತ್ತಿಹಾಕಿ ಮೌನಕ್ಕೆ ಶರಣಾಗಿದೆ. ಸಂಸತ್ತಿನಲ್ಲಿ ತಮಿಳುನಾಡು ಸಂಸದರು ಸುಮಾರು ಅರ್ಧ ಗಂಟೆ ಪ್ರತಿಭಟನೆ ನಡೆಸಿದರೂ ರಾಜ್ಯದ ಸಂಸದರು ಕನಿಷ್ಠ ತುಟಿ ಬಿಚ್ಚಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೂ ಇದಕ್ಕೆ ಹೊರತಾಗಿಲ್ಲ. ಇಷ್ಟೆಲ್ಲಕ್ಕೂ ಕಾರಣ, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಈಗ ಚುನಾವಣೆಯೇ ಹೆಚ್ಚು ಮಹತ್ವದ್ದು. ಹೀಗಾಗಿಯೇ ಕಾವೇರಿ ನೀರು ನಿರ್ವಹಣಾ ಮಂಡಳಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದರೂ  ಮಂಡಳಿ ರಚನೆಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಈ ವಿವಾದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ. ಇದರ ಹಿಂದೆಯೂ ರಾಜಕೀಯ ಇರುವುದು ಸ್ಪಷ್ಟ.

ಪ್ರಸ್ತುತ ಮಂಡಳಿ ರಚನೆ ವಿಚಾರ ಕೇಂದ್ರ ಸರಕಾರದ ಅಂಗಳದಲ್ಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದರೆ ಅದು ರಾಜ್ಯದಲ್ಲಿ ಪಕ್ಷಕ್ಕೆ ಪ್ರತಿಕೂಲ ವಾಗುತ್ತದೆ. ಕೇಂದ್ರ ಸರಕಾರ ತಮಿಳುನಾಡಿಗೆ ಅನುಕೂಲ ಮಾಡಿ ಕೊಟ್ಟಿರುವುದರಿಂದ ರಾಜ್ಯಕ್ಕೆ ಅನ್ಯಾಯವಾ ಗಿದೆ ಎಂದು ಹೇಳಿಕೊಂಡು ರಾಜ ಕೀಯ ಲಾಭ ಪಡೆಯಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಅಲ್ಲದೆ, ಬಹಿರಂಗವಾಗಿ ತಮಿಳು ನಾಡಿನ ಕ್ರಮವನ್ನು ವಿರೋಧಿಸಿದರೆ ತಮಿಳು ಮತಗಳಿಗೆ ಧಕ್ಕೆಯಾಗ ಬಹುದು ಎಂಬ ಆತಂಕವೂ ಕಾಂಗ್ರೆಸ್‌ಗೆ ಇದೆ. ಇನ್ನು ಬಿಜೆಪಿಯದ್ದು ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ. ಮಂಡಳಿ ರಚಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಈ ಕಾರಣಕ್ಕಾಗಿಯೇ ಮಂಡಳಿ ಬದಲು ಸೂಕ್ತ ಯೋಜನೆ (ಸ್ಕೀಮ್‌) ರೂಪಿಸುವ ಪ್ರಸ್ತಾಪ ಮುಂದಿಟ್ಟಿರುವ ಕೇಂದ್ರ ಸರಕಾರ ಕಾಲಹರಣದ ಮೊರೆ ಹೋಗಿದೆ. ಇನ್ನೊಂದೆಡೆ ಈ ಕುರಿತು ಬಹಿರಂಗವಾಗಿ ಮಾತನಾಡಿದರೆ ಚುನಾವಣೆ ಯಲ್ಲಿ ತಮಿಳು ಮತಗಳು ಕೈತಪ್ಪಬಹುದು ಇಲ್ಲವೇ ಕನ್ನಡಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಮೌನದ ಮೊರೆ ಹೋಗಿದ್ದಾರೆ. ಜೆಡಿಎಸ್‌ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಿಲ್ಲ.

ಅಷ್ಟಕ್ಕೂ ಈಗ ಈ ವಿಚಾರದಲ್ಲಿ ಮಾತನಾಡಿ ಮುಖ ಕೆಡಿಸಿ ಕೊಳ್ಳುವುದಕ್ಕಿಂತ ಮೌನವಾಗಿದ್ದು ಮುಂದಿನ ಬೆಳವಣಿಗೆಗಳನ್ನು ಕಾದು ನೋಡುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಮೂರೂ ಪಕ್ಷಗಳು ಬಂದಂತಿವೆ. ಏಕೆಂದರೆ, ಮಂಡಳಿ ರಚಿಸುವ ಕುರಿತು ಸದ್ಯಕ್ಕೆ ಕೇಂದ್ರ ಸರಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇಲ್ಲ. ಮಂಡಳಿ ಬದಲು ಸ್ಕೀಮ್‌ ರೂಪಿಸುವ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ತೀರ್ಮಾನ ಕೈಗೊಂಡಿದ್ದು, ಇದಕ್ಕೆ ಕಾಲಾವಕಾಶ ಬೇಕು. ಹೀಗಾಗಿ ಮಂಡಳಿ ರಚನೆ ಕುರಿತು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಿಂದ ಕೇಂದ್ರಕ್ಕಾಗಲೀ, ರಾಜ್ಯಕ್ಕಾಗಲೀ ಸದ್ಯಕ್ಕೇನೂ ಸಮಸ್ಯೆ ಇಲ್ಲ. ಕೋರ್ಟ್‌ ತೀರ್ಪು ಪಾಲಿಸಲು ಉದ್ದೇಶ ಪೂರ್ವಕ ವಿಳಂಬ ಮಾಡಿದರೆ ಮಾತ್ರ ಅದು ನ್ಯಾಯಾಂಗ ನಿಂದನೆ ಯಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಮಂಡಳಿ ರಚನೆ ಬದಲು ಸ್ಕೀಮ್‌ ರೂಪಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರ ಸುಪ್ರೀಂ ಕೋರ್ಟ್‌ ಗಮನದಲ್ಲೂ ಇದೆ. ಹೀಗೆ ಸದ್ಯ ಆತಂಕದ ಸ್ಥಿತಿ ಇಲ್ಲದ ಕಾರಣ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಇನ್ನು ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕೇಂದ್ರ ಸರಕಾರದ ವಿರುದ್ಧವೇ ಹೊರತು ಕರ್ನಾಟಕದ ವಿರುದ್ಧ ಅಲ್ಲ. ಹೀಗಾಗಿ ಕರ್ನಾಟಕವೂ ತಮಿಳುನಾಡಿನ ಹೋರಾಟವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ. ಒಂದೊಮ್ಮೆ ಏ. 5ರ ಬಂದ್‌ ವೇಳೆ ತಮಿಳುನಾಡಿನಲ್ಲಿ ಕನ್ನಡಿಗರ ಆಸ್ತಿ ಪಾಸ್ತಿಗೆ ಹಾನಿಯಾದರೆ ಮಾತ್ರ ರಾಜ್ಯದಲ್ಲಿ ಸಮಸ್ಯೆ ಉದ್ಭವವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next