ಬೆಂಗಳೂರು:ನಿರೀಕ್ಷೆಯಂತೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಯಿಂದ ಸಹಜವಾಗಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಉತ್ಸಾಹ ಬಂದಂತಾಗಿದ್ದು, ವಿಶೇಷವಾಗಿ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಂತಾಗಿದೆ.
ರಾಹುಲ್ ಗಾಂಧಿ ಡಿಸೆಂಬರ್ 16 ರಂದು ಅಧಿಕೃತವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ರಾಜ್ಯದಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ರಾಹುಲ್ ಗಾಂಧಿ ಪದಗ್ರಹಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಆಲೋಚನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಹುಲ್ ಗಾಂಧಿಯ ಸಮಯವನ್ನೂ ಕೇಳಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಡಿಸೆಂಬರ್ 23 ಅಥವಾ 24 ರಂದು ರಾಜ್ಯದಲ್ಲಿ ರಾಹುಲ್ ಪಟ್ಟಾಭಿಷೇಕ ಕಾರ್ಯಕ್ರಮ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ರಾಹುಲ್ ಗಾಂಧಿ ಅಷ್ಟು ಬೇಗ ಆಗಮಿಸುವುದು ಅನುಮಾನ ಎನ್ನಲಾಗಿದ್ದು, ಜನವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.
ಡಿಸೆಂಬರ್ 16 ರಂದು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಮಂಗಳವಾರವೇ ದೆಹಲಿಗೆ ತೆರಳಿ ರಾಹುಲ್‌ಗಾಂಧಿಗೆ ಶುಭಾಶಯ ಕೋರಲಿದ್ದು, ಜನವರಿಯಲ್ಲಿ ರಾಜ್ಯದಲ್ಲಿ ಅದ್ಧೂರಿ ಪದಗ್ರಹಣ ಕಾರ್ಯಕ್ರಮ ನಡೆಸಲು ಸಮಯ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 19 ರಂದು ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯನ್ನು ಕರೆಸುವ ಆಲೋಚನೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೊಂದಿದ್ದರು. ಆದರೆ, ಪಕ್ಷದ ಸಾರಥ್ಯ ವಹಿಸಿಕೊಳ್ಳುವ ದಿನಾಂಕ ನಿಗದಿಯಾಗಿದ್ದರಿಂದ ಇಂದಿರಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಲದೇ ಕುಮಟಾದಲ್ಲಿ ನಡೆಯಬೇಕಿದ್ದ ಮೀನುಗಾರರ ಸಮಾವೇಶವನ್ನು ಮುಂದೂಡಲಾಯಿತು.
ಈಗ ರಾಹುಲ್ ಗಾಂಧಿ ಅಧಿಕೃತವಾಗಿ ಎಐಸಿಸಿ ಅಧ್ಯಕ್ಷರಾಗಿರುವುದರಿಂದ 2018 ರ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ರಾಹುಲ್ ಅಧಿಕಾರ ಸ್ವೀಕಾರ ಸಮಾರಂಭವನ್ನೇ ಚುನಾವಣಾ ಪ್ರಚಾರಕ್ಕೂ ರಣಕಹಳೆ ಮೊಳಗಿಸುವ ಲೆಕ್ಕಾಚಾರ ರಾಜ್ಯ ಕಾಂಗ್ರೆಸ್ ನಾಯಕರಲ್ಲಿದೆ. ಈಗಾಗಲೇ ನಡೆಯುತ್ತಿರುವ ಗುಜರಾತ್ ಚುನಾವಣೆಯ ಜವಾಬ್ದಾರಿಯನ್ನೂ ರಾಹುಲ್ ಗಾಂಧಿಯೇ ವಹಿಸಿಕೊಂಡು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಎದುರು ತಮ್ಮ ಸಾಮರ್ಥ್ಯ ತೋರಿಸಿರುವ ರಾಹುಲ್ ಗಾಂಧಿ, ಅಧ್ಯಕ್ಷರಾದ ಮೇಲೆ ಅಧಿಕೃತವಾಗಿ ಚುನಾವಣೆ ನಡೆಯುವ ಕರ್ನಾಟಕವೂ ರಾಹುಲ್ ಗಾಂಧಿಗೆ ಮಹತ್ವದ್ದಾಗಿದ್ದು, ಕರ್ನಾಟಕದಲ್ಲೂ ಮೋದಿ ಅಮಿತ್ ಷಾ ವೇಗವನ್ನು ತಡೆಯಲು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಚುನಾವಣೆ ದೃಷ್ಠಿಯಿಂದಲೇ ಈಗಾಗಲೇ ಪ್ರತ್ಯೇಕ ಯಾತ್ರೆಗಳನ್ನು ನಡೆಸಲು ತೀರ್ಮಾನಿದ್ದರೂ, ರಾಹುಲ್ ಗಾಂಧಿ ಆಗಮನದ ಮೂಲಕ ರಾಜ್ಯಕ್ಕೆ ಹೊಸ ಚೈತನ್ಯ ದೊರೆಯುವ ವಿಶ್ವಾಸ ಹೊಂದಿದ್ದಾರೆ. ಈಗಾಗಲೇ ಭೂತ್ ಸಮಿತಿ ರಚನೆ ಮಾಡಿದ್ದು, ಸುಮಾರು 54 ಸಾವಿರ ಭೂತ್‌ಗಳಲ್ಲಿ ಲಕ್ಷಾಂತರ ಭೂತ್ ಮಟ್ಟದ ಯುವಕರ ಪಡೆ ರಚನೆಯಾಗಿದ್ದು, ರಾಹುಲ್ ಗಾಂಧಿ ಆಗಮನದ ಸಂದರ್ಭದಲ್ಲಿಯೇ ಭೂತ್ ಮಟ್ಟದ ಕಾರ್ಯಕರ್ತರಿಗೂ ಆಹ್ವಾನ ನೀಡಿ, ಪಕ್ಷದ ಕಾರ್ಯಕರ್ತರಿಗೂ ಉತ್ಸಾಹ ತುಂಬುವ ಆಲೋಚನೆಯಲ್ಲಿ ರಾಜ್ಯ ನಾಯಕರಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಗೊಂಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಅಧಿಕಾರವಧಿಯಲ್ಲಿ ಕಾಂಗ್ರೆಸ್ ತನ್ನ ವೈಭವವನ್ನ ಮತ್ತೆ ಪಡೆಯಲಿದೆ. ನಾವು ನಿಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇವೆ