Advertisement

ರಾಜ್ಯಕ್ಕೆ ಟಾಪರ್‌ ಸೃಜನಾಗೆ ಕಂಪ್ಯೂಟರ್‌ ಎಂಜಿನಿಯರ್‌ ಆಗುವಾಸೆ

04:26 PM May 12, 2017 | |

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೃಜನಾ ಎನ್‌. ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಮೂಡಿಬಂದಿದ್ದಾರೆ.

Advertisement

ಸೃಜನಾ 600 ಅಂಕಗಳಲ್ಲಿ 596 ಅಂಕ ಗಳಿಸಿದ್ದಾರೆ. ಭೌತಶಾಸ್ತ್ರ, ರಸಾಯನ ಧಿಶಾಸ್ತ್ರ, ಗಣಿತ, ಗಣಕ ವಿಜ್ಞಾನದಲ್ಲಿ ಶೇ. 100 ಅಂಕ ಗಳಿಸಿದ್ದಾರೆ. ಹಿಂದಿಯಲ್ಲಿ 99 ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ 97 ಅಂಕ ಲಭಿಸಿದೆ. ತುಮಕೂರು ಮೂಲದ ಉದ್ಯಮಿ ನಿರಂಜನ್‌ ಕುಮಾರ್‌ ಹಾಗೂ ಬೆಂಗಳೂರಿನ ಯಲಹಂಕದ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ನ ಪ್ರೊಫೆಸರ್‌ ಡಾ| ನಳಿನಿ ಅವರ ಪುತ್ರಿಯಾಗಿರುವ ಸೃಜನಾ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಉತ್ತಮ ಸಾಧನೆಯ ನಿರೀಕ್ಷೆ ಇತ್ತು
ಸಾಧನೆಯ ಸಂತಸವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿರುವ ಸೃಜನಾ ಅವರು “ಪರೀಕ್ಷೆಯಲ್ಲಿ ಚೆನ್ನಾಗಿ ನಿರ್ವಹಿಸಿದ ವಿಶ್ವಾಸ ನನ್ನಲ್ಲಿತ್ತು. ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿದ್ದೆ. ಇದೀಗ ರಾಜ್ಯಕ್ಕೆ ಟಾಪರ್‌ ಆಗಿರುವುದು ತುಂಬಾ ಖುಷಿ ತಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

“ಅಂದಿನ ಪಾಠಗಳನ್ನು ಅಂದೇ ನೀಟಾಗಿ ಓದುತ್ತಿದ್ದೆ. ಕೊನೆಯ ಕ್ಷಣಕ್ಕೆ ಯಾವುದನ್ನು ಇಡುತ್ತಿರಲಿಲ್ಲ. ಎಕ್ಸ್‌ಪರ್ಟ್‌ ಕಾಲೇಜಿನಲ್ಲಿ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ತರಗತಿಗಳು ಇರುತ್ತಿದ್ದವು. ಅಲ್ಲಿನ ತರಗತಿ ಪಾಠಗಳೇ ವಿಷಯ ಮನನಕ್ಕೆ ಸಾಕಾಗುತ್ತಿತ್ತು. ವಸತಿ ನಿಲಯಕ್ಕೆ ಬಂದು ಗೆಳತಿಯರ ಜತೆ ಸೇರಿ ಅಂದಿನ ಪಾಠಗಳನ್ನು ಪುನರ್‌ಮನನ ಮಾಡುತ್ತಿದ್ದೆ. ಯಾವ ಕಾರಣಕ್ಕೂ ಒತ್ತಡ ತೆಗೆದುಕೊಳ್ಳುತ್ತಿರಲಿಲ್ಲ’ ಎಂದರು. 

ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯಲ್ಲಿನ ಉತ್ತಮ ಶಿಕ್ಷಣ, ಶಿಕ್ಷಕ ವರ್ಗದ ಪೋತ್ಸಾಹ, ಉತ್ತಮ ಶೈಕ್ಷಣಿಕ ವಾತಾವರಣ, ತಂದೆ ಮತ್ತು ತಾಯಿಯ ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ನನ್ನ ಪರಿಶ್ರಮ ಈ ಸಾಧನೆಯ ಹಿಂದಿದೆ ಎಂದಿದ್ದಾರೆ. ಸೃಜನಾ ಅವರು ಮುಂದೆ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next