Advertisement

ರಾಜ್ಯ ಸರ್ಕಾರ ಟೇಕಾಫ್‌ ಆಗಿಲ್ಲ

11:31 AM Jun 22, 2018 | Team Udayavani |

ಚಿಕ್ಕಮಗಳೂರು: ರಾಜ್ಯ ಸರ್ಕಾರವಿನ್ನೂ ಟೇಕಾಫ್‌ ಆಗಿಲ್ಲ. ಸರ್ಕಾರ ಎಷ್ಟು ತಿಂಗಳು ಮುಂದುವರೆಯುವುದೋ ಎಂಬ ಆತಂಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ ಎಂದು ಸಂಸದೆ, ಬಿಜೆಪಿ ರಾಜ್ಯ ಪ್ರಧಾನ
ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಮಂತ್ರಿ ಮಂಡಲ ರಚನೆ ಸಮರ್ಪಕವಾಗಿಲ್ಲ. ಸಾಲಮನ್ನಾ ಮಾಡಲು ನೆರವು ನೀಡಿ ಎಂದು ಕುಮಾರಸ್ವಾಮಿ ಕೇಂದ್ರದ ಮೊರೆ ಹೋಗಿದ್ದಾರೆ. ಆದರೆ, ಉತ್ತರ ಪ್ರದೇಶ ಸರ್ಕಾರ 1 ಲಕ್ಷ ರೂ.ರೈತರ ಸಾಲ ಮನ್ನಾ ಮಾಡಿದೆ. ಮಹಾರಾಷ್ಟ್ರದಲ್ಲಿಯೂ ಸಾಲ ಮನ್ನಾ
ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷವೇ ಆಡಳಿತ ನಡೆಸುತ್ತಿರುವ ಪಂಜಾಬಿನಲ್ಲಿಯೂ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಕೇಂದ್ರದ ನೆರವು ಕೇಳುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷ ಹಾಗೂ ಜೆಡಿಎಸ್‌ ಎರಡೂ ಸಹ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆಗ ಕೇಂದ್ರ ಸರ್ಕಾರವನ್ನು ಕೇಳಿದ್ದರೆ. ಸಿ.ಎಂ. ಆದ ನಂತರ ಜವಾಬ್ದಾರಿಯಿಂದ ಆಡಳಿತ ನಡೆಸಬೇಕು ಎಂದರು.

ಒಂದು ವರ್ಷ ಅಲ್ಲ, ಒಂದು ತಿಂಗಳು ಅಧಿಕಾರದಲ್ಲಿ ಇರುತ್ತೇನೋ, ಇಲ್ಲವೋ ಎಂಬ ಭಯ ಮುಖ್ಯಮಂತ್ರಿಯನ್ನು
ಕಾಡುತ್ತಿದೆ. ಇದೊಂದು ಅನೈತಿಕ ಸರ್ಕಾರ. 78 ಸ್ಥಾನವಿದ್ದ ಕಾಂಗ್ರೆಸ್‌ 38 ಸ್ಥಾನವಿದ್ದ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟಿದೆ.

ಕಾಂಗ್ರೆಸ್‌ಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇಲ್ಲ. ಅಪ್ಪ, ಮಕ್ಕಳು, ಅಣ್ಣತಮ್ಮಂದಿರು ಸೇರಿ ರಾಜ್ಯಭಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಬರುವಂತಹ ದಿನದಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.

Advertisement

ಬೇಳೂರು ಗೋಪಾಲಕೃಷ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಈಗ ಯಾವ ಪಕ್ಷದಲ್ಲಿದ್ದಾರೋ ಆ ಪಕ್ಷವೇ ಆಡಳಿತದಲ್ಲಿದೆ. ನನ್ನ ಮನೆ ಮೇಲೆ ಐಟಿ ರೈಡ್‌ ಮಾಡಿಸಲಿ. ಬಿಜೆಪಿಯಲ್ಲಿ ಸೀಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಈ ರೀತಿಯ ಆರೋಪವನ್ನು ಮೊದಲಿಂದಲೂ ಅವರು ಮಾಡುತ್ತಲೇ ಇದ್ದಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಕಾಂಗ್ರೆಸ್‌ ಜೆಡಿಎಸ್‌ ಮಾಡಿರುವ ಪಾಪಕ್ಕೆ ಅವರೇ ಕುಸಿದು ಹೋಗಲಿದ್ದಾರೆ. ಕುಸಿಯುವುದನ್ನು ನೋಡಲು ನಾವೂ ಕಾಯುತ್ತಿದ್ದೇವೆ ಎಂದರು. ಕೇಂದ್ರ ಸರ್ಕಾರ ಐಟಿ ಸಂಸ್ಥೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶೋಭಾ, ದೇಶದಲ್ಲಿ 50 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷವೇ ಆಡಳಿತ ನಡೆಸಿದೆ. ಆಗೆಲ್ಲ ಆ ಪಕ್ಷ ಐಟಿಯನ್ನು ದುರ್ಬಳಿಕೆ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದರು. 

ಉಪ್ಪು ತಿಂದವರು, ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಐಟಿಯ ಹೆದರಿಕೆ ಇರುತ್ತದೆ. ನ್ಯಾಯಯುತವಾಗಿ ತೆರಿಗೆ ಕಟ್ಟಿದವರಿಗೆ ಅದರ ಭಯ ಇರುವುದಿಲ್ಲ. ಹಗರಣಗಳನ್ನು ಹೊರಗೆಳೆಯಲು ಹೋದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ. ಐಟಿ ದಾಳಿಯನ್ನು ರಾಜಕೀಯಗೊಳಿಸುವ ಮೂಲಕ ವ್ಯವಸ್ಥೆಗೆ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next