Advertisement
ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಡಿರುವ ಭಾಷಣದಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ವಾರಂಟಿ ನೀಡಲಾಗಿದೆ. ಅನ್ನಭಾಗ್ಯ ಯೋಜನೆ ಬಗ್ಗೆ ವಿಶೇಷವಾಗಿ ಪ್ರಸ್ತಾವಿಸಲಾಗಿದ್ದು, ಕೇಂದ್ರದ ನಡೆಯ ಬಗ್ಗೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯಾವುದೇ ತ್ಯಾಗ ಮಾಡಿಯಾದರೂ ನನ್ನ ಸರಕಾರ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತದೆ. ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಸರಕಾರ ರಾಜ್ಯವನ್ನು ಹಸಿವುಮುಕ್ತಗೊಳಿಸುತ್ತದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ರಾಜ್ಯದ ಜತೆಗೆ ದೇಶದ ಅಭಿವೃದ್ಧಿಗೂ ಸಿಂಹಪಾಲು ನೀಡುತ್ತಿರುವ ಬೆಂಗಳೂರನ್ನು ಮತ್ತೂಮ್ಮೆ ವಿಶ್ವದ ಗಮನ ಸೆಳೆಯುವಂತೆ ಮಾಡುತ್ತೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖೀಸಲಾಗಿದೆಯಾದರೂ ಬೆಂಗಳೂರು ಅಭಿವೃದ್ಧಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆರಂಭಿಸಿರುವ “ಬ್ರ್ಯಾಂಡ್ ಬೆಂಗಳೂರು’ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಸಾರ್ವಜನಿಕ ಆರೋಗ್ಯವೂ ಸೇರಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ನನ್ನ ಸರಕಾರ ಅಚ್ಚುಕಟ್ಟಾಗಿ ರೂಪಿಸಲಿದ್ದು, ಸಂಚಾರ ದಟ್ಟಣೆ ಪರಿಹರಿಸುವ ಮೂಲಕ ಸಹನೀಯವಾದ ಅಭಿವೃದ್ಧಿ ಹೊಂದಿದ ನಗರವನ್ನಾಗಿ ಬೆಂಗಳೂರನ್ನು ರೂಪಿಸಲು ಸರಕಾರ ಬದ್ಧವಾಗಿದೆ ಎಂದಷ್ಟೇ ಹೇಳಲಾಗಿದೆ. ಕೃತಕ ಬುದ್ಧಿಮತ್ತೆಯ ನಿಯಂತ್ರಣ
ಕೃತಕ ಬುದ್ಧಿಮತೆಯ ಸಕಾರಾತ್ಮಕ ಜನಾಧಾರಿತ ಬಳಕೆಯನ್ನು ಮಾತ್ರ ಖಚಿತಪಡಿಸಿಕೊಳ್ಳಲು ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖೀಸಲಾಗಿದೆ. ಆ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ನಿಯಂತ್ರಣದ ಬಗ್ಗೆ ಪ್ರಸ್ತಾವಿಸಲಾಗಿದೆ. ಯಾವುದೇ ತಂತ್ರಜ್ಞಾನವನ್ನು ಮಾನವ ಕುಲದ ಪ್ರಯೋಜನಕ್ಕಾಗಿಬಳಸಬಹುದು. ಅದೇ ಕಾಲಕ್ಕೆ ದುರುಪಯೋಗಕ್ಕೂ ತೊಡಗಿಸಬಹುದು. ಹೀಗಾಗಿ ಅನೇಕ ದೇಶಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಉಲ್ಲೇಖೀಸಲಾಗಿದೆ.
Related Articles
– ವಿ. ಸುನಿಲ್ ಕುಮಾರ್, ಮಾಜಿ ಸಚಿವ
Advertisement
ಕವಲು ದಾರಿಯಲ್ಲಿ ಸರಕಾರಬೆಂಗಳೂರು: ರಾಜ್ಯಪಾಲರ ಭಾಷಣ ಸಪ್ಪೆಯಾಗಿದ್ದು, ಅದರಲ್ಲಿ ಯಾವುದೇ ಜೀವಸತ್ವ ಇಲ್ಲ. ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಸರಕಾರ ಕವಲು ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜ್ಯಪಾಲರ ಭಾಷಣದಲ್ಲಿ ಭರವಸೆ ಮೂಡುವಂಥ ಯಾವುದೇ ವಿಷಯ ಇಲ್ಲ. ಸುಳ್ಳಿನ ಕಂತೆ ಅಂತ ಸಾಬೀತಾಗಿದೆ. 10 ಕೆಜಿ ಅಕ್ಕಿ ಕೊಡು ತ್ತೇವೆ ಎಂದಿದ್ದರು. ಈಗ ಕೇಂದ್ರ ಸರಕಾರ ಕೊಡುತ್ತಿದೆ ಎಂದು ಹೇಳದೆ ಆಹಾರ ಭದ್ರತೆಯಲ್ಲಿ ಕೊಡುತ್ತೇವೆ ಎಂದಿದ್ದಾರೆ. ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ ಎನ್ನಲು ಅವರಿಗೆ ನಾಚಿಕೆಯಾಗುತ್ತಿದೆ ಎಂದರು. ಅಗಲಿದ ಗಣ್ಯರಿಗೆ ಸಂತಾಪ
ಬೆಂಗಳೂರು: ಇತ್ತೀಚೆಗೆ ಅಗಲಿರುವ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರು ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಮಾಜಿ ಸಂಸದ ಆರ್. ಧ್ರುವ ನಾರಾಯಣ, ಮಾಜಿ ಉಪಸಭಾಧ್ಯಕ್ಷ ಅಂಜನಾಮೂರ್ತಿ, ಮಾಜಿ ಸಚಿವ ಡಿ.ಬಿ.ಇನಾಂದಾರ್, ಮಾಜಿ ಶಾಸಕರಾದ ಯು.ಆರ್.ಸಭಾಪತಿ, ವೆಂಕಟಸ್ವಾಮಿ, ಉಮಾಕಾಂತ್ ಬೋರ್ಕರ್, ಬಿ.ಧರ್ಮಪ್ಪ, ನೇತ್ರ ತಜ್ಞ ಡಾ| ಭುಜಂಗ ಶೆಟ್ಟಿ, ರತ್ನಾ ವಿ. ಕುಶನೂರು, ಸಾಹಿತಿ ಪ್ರೊ| ಮಲೆಯೂರು ಗುರುಸ್ವಾಮಿ, ನಾಡೋಜ ಬೆಳಗಲ್ಲು ವೀರಣ್ಣ, ಸಾಹಿತಿ ಶ್ರೀನಿವಾಸ ವೈದ್ಯ, ವಿಮರ್ಶಕ ಪ್ರೊ| ಜಿ.ಎಚ್. ನಾಯಕ್, ಚಿತ್ರ ಸಾಹಿತಿ ಸಿ.ವಿ. ಶಿವಶಂಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬೊಮ್ಮಾಯಿ, ಸಚಿವರಾದ ಈಶ್ವರ್ ಖಂಡ್ರೆ, ಕೆ. ವೆಂಕಟೇಶ್, ಲಕ್ಷ್ಮೀ ಹೆಬ್ಟಾಳ್ಕರ್, ಚೆಲುವರಾಯ ಸ್ವಾಮಿ, ಎನ್.ಎಸ್. ಬೋಸರಾಜ್, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ಆರ್. ಪಾಟೀಲ್, ಗಣೇಶ್ ಪ್ರಸಾದ್, ಕೆ.ಬಿ. ಕೃಷ್ಣಮೂರ್ತಿ, ಶರತ್ ಬಚ್ಚೇಗೌಡ, ಗುರ್ಮೆ ಸುರೇಶ್ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಧ್ರುವನಾರಾಯಣ ನೆನೆದು
ಡಿಸಿಎಂ ಶಿವಕುಮಾರ್ ಕಣ್ಣೀರು
ಬೆಂಗಳೂರು: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ| ಆರ್. ಧ್ರುವನಾರಾಯಣ ಅವರನ್ನು ನೆನೆದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿದರು. ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುತ್ತಿದ್ದು, ನನ್ನ ಬಳಿಕ ಈ ಸ್ಥಾನದಲ್ಲಿ ಧ್ರುವನಾರಾಯಣ ಅವರನ್ನು ಕೂರಿಸಬೇಕು ಎಂಬ ಆಲೋಚನೆಯಿತ್ತು. ನನ್ನ ಜತೆ ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಸಚಿವರಾಗಿದ್ದಾರೆ. ಸಲೀಂ ಅಹ್ಮದ್ ಸಚಿವ ಸಂಪುಟದ ಸ್ಥಾನಮಾನದಲ್ಲಿದ್ದಾರೆ. ಧ್ರುವನಾರಾಯಣ ಬದುಕಿದ್ದರೆ, ಅವರು ಕೂಡ ಈ ಸದನದಲ್ಲಿ ಸಚಿವರಾಗಿ ಇರುತ್ತಿದ್ದರು ಎಂದು ಹೇಳಿದರು.