ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಮಾಡಿದ ಪ್ರಯತ್ನಕ್ಕೆ ಜಯ ದೊರೆತಿದೆ. ಈ ಬಗ್ಗೆ “ಉದಯವಾಣಿ’ ವಿಸ್ತೃತ ವರದಿ ಮಾಡಿತ್ತು.
Advertisement
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ “ಇಂಡಿಯನ್ ಟೂರಿಸ್‌ಂ ಡೆವಲಪ್‌ಮೆಂಟ್ ಕಾರ್ಪೊರೇಶನ್’ ಲಲಿತ್ ಮಹಲ್ ಹೋಟೆಲನ್ನು ರಾಜ್ಯ ಸರ್ಕಾರದಿಂದ ಗುತ್ತಿಗೆ ಪಡೆದು ನಿರ್ವಹಣೆ ಮಾಡುತ್ತಿತ್ತು. ಇದಲ್ಲದೇ, ಕೇಂದ್ರ ಸರ್ಕಾರ ಇತರ ರಾಜ್ಯಗಳ ಪ್ರತಿಷ್ಠಿತ ಹೋಟೆಲ್‌ಗಳಾದ ಭೋಪಾಲ್‌ನ ಲೇಕ್‌ವೀವ್ ಅಶೋಕ, ಗೌಹಾತಿಯ ಹೋಟೆಲ್ ಬ್ರಹ್ಮಪುತ್ರ, ಹೋಟೆಲ್ ಭರತಪುರ ಹಾಗೂ ಮೈಸೂರಿನ ಲಲಿತ್ ಮಹಲ್ ಹೋಟೆಲ್ ಅನ್ನು ಸಂಬಂಧಪಟ್ಟ ರಾಜ್ಯಗಳಿಗೆ ವಾಪಸ್ ನೀಡಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ಎಲ್ಲ ಪ್ರತಿಷ್ಠಿತ ಹೋಟೆಲ್‌ಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು. ಆ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು “ಲಲಿತ್ ಮಹಲ್ ಹೋಟೆಲ್’ ರಾಜ್ಯದ ಪರಂಪರೆಯ ಪ್ರತೀಕವಾಗಿದ್ದು, ಅದರೊಂದಿಗೆ ರಾಜ್ಯದ ಜನತೆಯ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಖಾಸಗಿಯವರಿಗೆ ನೀಡದೇ ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ “ಲಲಿತ್ ಮಹಲ್ ಹೋಟೆಲ್’ ಅನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಒಪ್ಪಂದದ ಪ್ರಕಾರ 2019ರ ವರೆಗೂ ಲಲಿತ್ ಮಹಲ್ ಹೋಟೆಲ್ ಗುತ್ತಿಗೆ ಅವಧಿ ಇದೆ. ಮುಂಚಿತವಾಗಿಯೇ ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುತ್ತಿರುವುದರಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನಷ್ಟ ಪರಿಹಾರವಾಗಿ 7.5 ಕೋಟಿ ರೂ. ನೀಡಬೇಕಿದೆ. ಈ ಹಣ ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಆದ್ದರಿಂದ ರಾಜ್ಯ ಸರ್ಕಾರದ ಪತ್ರಕ್ಕೆ ಕೇಂದ್ರ ಸರ್ಕಾರ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕವಾದ ಲಲಿತ್ ಮಹಲ್ ಹೋಟೆಲ್ ನಮಗೆ ವಾಪಸ್ ಸಿಕ್ಕಿರುವುದು ಖುಷಿಯಾಗಿದೆ. ಅದರ ಇತಿಹಾಸ, ಸಾಂಸ್ಕೃತಿಕ ಪರಂಪರೆ ಮತ್ತು ವೈಭವವನ್ನು ಕಾಪಾಡಿಕೊಂಡು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಲಲಿತ್ ಮಹಲ್ ಪಾರಂಪರಿಕ ಹೋಟೆಲ್ ನಲ್ಲಿ ತಂಗಲು ಪ್ರವಾಸಿಗರೂ ಹೆಮ್ಮೆಪಡುವಂತೆ ಅಭಿವೃದ್ಧಿ ಮಾಡಲಾಗುವುದು.
ಪ್ರಿಯಾಂಕ ಖರ್ಗೆ, ಪ್ರವಾಸೋದ್ಯಮ ಸಚಿವ