ಎನ್.ಆರ್.ಪುರ: ಕೇಂದ್ರ ಸರ್ಕಾರ ಬಡಜನರಿಗಾಗಿ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ತಂದಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಜನರಿಗೆ ಸರಿಯಾಗಿ ತಲುಪಿಸುತ್ತಿಲ್ಲ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಭಾರತೀಯ ಜನ ಔಷಧ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕಳೆದ ಮೂರು ವರ್ಷದ ಅವ ಧಿಯಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಲ್ಲಿ ಅಮೂಲಾಗ್ರ ಕ್ರಾಂತಿಯನ್ನೇ ಮಾಡಿದೆ.
ವೈದ್ಯಕೀಯ ಸೀಟುಗಳ ಮಾರಾಟದ ದಂಧೆಯನ್ನು ತಡೆಯಲು ನೀಟ್‌ನ್ನು ಜಾರಿಗೆ ತಂದು ಬಡ ಮಕ್ಕಳಿಗೆ ವೈದ್ಯಕೀಯ ಸೀಟುಗಳು ದೊರಕುವಂತೆ ಮಾಡಿದ್ದಾರೆ. ದೇಶದಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಸಾಮಾನ್ಯ ಖಾಯಿಲೆಗಳಂತೆ ಬೆಳೆದಿದೆ. ಬಡ ಜನರು ಹಣ ಖರ್ಚು ಮಾಡಲಾಗದೆ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ನರೇಂದ್ರ ಮೋದಿಯವರು ಹೃದಯ ಸಂಬಂಧಿ ಖಾಯಿಲೆಗೆ ಅಳವಡಿಸುವ ಮೆಡಿಕೇಟೆಡ್ ಸ್ಟೆಂಟ್‌ಗಳು 7 ಲಕ್ಷ ಇದ್ದದ್ದನ್ನು 40 ಸಾವಿರಕ್ಕೆ ಹಾಗೂ ನಾನ್ ಮೆಡಿಕೇಟೆಡ್ ಸ್ಟೆಂಟ್ ಗಳು 1.50 ಲಕ್ಷ ಇದ್ದದ್ದನ್ನು ಕೇವಲ ಆರೇಳು ಸಾವಿರಗಳಿಗೆ ದೊರಕುವಂತೆ ಮಾಡಿದ್ದಾರೆ ಎಂದರು.
ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಕೆಲ ಕುಟುಂಬದವರ ಮಕ್ಕಳು ಬೇರೆ ದೇಶಕ್ಕೆ ಉದ್ಯೋಗವರಿಸಿ ಹೋಗಿರುತ್ತಾರೆ. ತಮ್ಮ ಪೋಷಕರು ತೀರಿಕೊಂಡಾಗ ಬರುವವರೆಗೂ ಶವವನ್ನು ಕೆಡದಂತೆ ಇಡಲು ಕ್ಷೇತ್ರದ 8 ಹೋಬಳಿಗೆ 8 ಫ್ರಿಜರ್‌ಗಳನ್ನು ನೀಡಲಾಗಿದೆ. ಅದರ ಉದ್ಘಾಟನೆಯೂ ಇಂದು ನಡೆದಿದೆ. ರಕ್ತ ಶೇಖರಣಾ ಕೇಂದ್ರವನ್ನೂ ಸಹ ಉದ್ಘಾಟಿಸಲಾಗಿದೆ. ಇನ್ನು ಈ ಆಸ್ಪತ್ರೆಯ ಶವಾಗಾರಕ್ಕೆ ತೆರಳುವ ರಸ್ತೆಯನ್ನು ಕಾಂಕ್ರೀಟೀಕರಣ ಕಾಮಗಾರಿ ಇನ್ನೆರಡು ಮೂರು ತಿಂಗಳೊಳಗೆ ಪ್ರಾರಂಭಿಸಲಾಗುತ್ತದೆ ಎಂದರು.
ಜಿ.ಪಂ. ಉಪಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ತಾ.ಪಂ. ಸ್ಥಾಯಿ ಸಮಿತಿ ಸದಸ್ಯ ಸುಧಾಕರಾಚಾರಿ, ಸದಸ್ಯರುಗಳಾದ ಪ್ರೇಮಾ, ಎಂ.ಎನ್.ನಾಗೇಶ್, ಪ.ಪಂ. ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರುಗಳಾದ ಸಮೀರಾನಯೀಂ, ಆಶಾ ಶ್ರೀನಾಥ್,ನಾಗರತ್ನ, ಕೊಪ್ಪ ತಾ.ಪಂ. ಸದಸ್ಯ ಕಿರಣ್, ಟಿಎಪಿಸಿಎಂಎಸ್ ಅಧ್ಯಕ್ಷ ಗುಳದಮನೆ ಪ್ರಕಾಶ್, ತಾಲೂಕು ವೈದ್ಯಾಧಿಕಾರಿ ಎಲೊಸ್.ಜಿ.ವರ್ಗೀಸ್ ,ಪಿ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.