ಬೆಂಗಳೂರು : ಎಸಿಬಿ ರದ್ದುಪಡಿಸುವಂತೆ ಹೈಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಈಗ ಅಡ್ಡ ಮಾರ್ಗದಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
ಎಸಿಬಿ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈ ಮನವಿ ಸ್ವೀಕೃತವಾಗಿದೆ ಎಂದು ರಾಜ್ಯ ಸರಕಾರದ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪರೋಕ್ಷ ಮಾರ್ಗದಲ್ಲಿ ರಾಜ್ಯ ಸರಕಾರ ಅನುಸರಿಸಿದ ಈ ನಡೆ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ವೀರ ಸಾವರ್ಕರ್ ರನ್ನು ವಿರೋಧಿಸುವವರು ಬಸವಣ್ಣನ ವಚನಗಳನ್ನು ಓದಲಿಕೊಳ್ಳಲಿ: ಬಿಎಸ್ ವೈ
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಎಸಿಬಿ ರದ್ದು ಮಾಡಿರಲಿಲ್ಲ. ಆದರೆ ಹೈ ಕೋರ್ಟ್ ಈ ವಿಚಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಹೈಕೋರ್ಟ್ ನಲ್ಲಿ ರಾಜ್ಯ ಸರಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಅಸ್ಥಿತ್ವದಲ್ಲಿರಬೇಕೆಂದು ಪ್ರತಿಪಾದಿಸಿದ್ದರು.
ಈ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿದ್ದು, ಪಕ್ಷದ ನಿಲುವನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಜತೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾದುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಈ ನಡುವೆಯೇ ಎಸಿಬಿ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಸರಕಾರದ ಉದ್ದೇಶ ಶುದ್ದಿಯನ್ನು ಪ್ರಶ್ನೆ ಮೂಡುವಂತಾಗಿದೆ.