Advertisement

ರಾಜ್ಯದ ಆಡಳಿತ ಯಂತ್ರ ಅಧೋಗತಿಗೆ ತಲುಪಿದೆ

12:21 PM Mar 13, 2018 | |

ಮೈಸೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟು, ಆಡಳಿತ ಯಂತ್ರ ಅಧೋಗತಿಗೆ ತಲುಪಿರುವ ಹಿನ್ನೆಲೆಯಲ್ಲಿ ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಐಪಿಎಸ್‌ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿರುವುದನ್ನು ನೋಡಿದರೆ ಮುಖ್ಯಮಂತ್ರಿ ಮತ್ತು ಗೃಹಸಚಿವರ ಬಗ್ಗೆ ಐಪಿಎಸ್‌ ಅಧಿಕಾರಿಗಳಿಗೆ ನಂಬಿಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಈ ವಿಚಾರವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂದಿನಂತೆ ಲಘುವಾಗಿ ಪರಿಗಣಿಸಿದ್ದಾರೆ ಎಂದು ಟೀಕಿಸಿದರು.

ಇಂಟಲಿಜೆನ್ಸಿ ಮಾಹಿತಿ ನೀಡುತ್ತಿಲ್ಲವೆ: ಐಪಿಎಸ್‌ ಅಧಿಕಾರಿಗಳೇ ಈ ರೀತಿಯ ಆತಂಕ ವ್ಯಕ್ತಪಡಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಈ ಬಗ್ಗೆ ತಮಗೇನು ಗೊತ್ತಿಲ್ಲ ಎನ್ನುವುದಾದರೆ ಇಂಟಲಿಜೆನ್ಸ್‌ ನವರು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದರು. ಹೆಚ್ಚು ಅಪರಾಧ ನಡೆಯುತ್ತಿರುವ ದೇಶದ 2ನೇ ನಗರ ಬೆಂಗಳೂರಾಗಿದೆ.

ರಾಜಧಾನಿ ಬೆಂಗಳೂರಿನ ಪೊಲೀಸ್‌ ಆಯುಕ್ತರು ನಾಲ್ಕೂವರೆ ವರ್ಷದಲ್ಲಿ ಆರು ಮಂದಿ ಬದಲಾಗಿದ್ದಾರೆ ಎಂದರೆ ಏನರ್ಥ? ನನ್ನ ಮಾತು ಕೇಳುವುದಿಲ್ಲ, ಇಂಥ ಜಾತಿಯವನೇ ಬೇಕು, ಆ ಜಾತಿಯವನು ಬೇಡ ಎಂಬ ಧೋರಣೆ ಸರಿಯಲ್ಲ. ನನಗೇನು ಗೊತ್ತಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡವಳಿಕೆಯಲ್ಲಿಯೇ ಅನುಮಾನವಿದೆ.

ಚುನಾವಣೆ ಎರಡು ತಿಂಗಳಿರುವಾಗ ಹಿರಿಯ ಪೊಲೀಸ್‌ ಅಧಿಕಾರಿಗಳ ಈ ಹೇಳಿಕೆ ಗಾಬರಿ ಹುಟ್ಟಿಸಿದೆ. ಇಂಥ ಸಂದರ್ಭದಲ್ಲಿ ನಾವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಸರ್ಕಾರದ ಹಣದಲ್ಲಿ ಕಾಂಗ್ರೆಸ್‌ ಪ್ರಚಾರ: ಹೇಗಾದರೂ ಮಾಡಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಚುನಾವಣೆಯಲ್ಲಿ ಮತ್ತು ಪ್ರಚಾರದಲ್ಲಿ ಕ್ರಿಮಿನಲ್‌ಗ‌ಳು, ಗೂಂಡಾಗಳು, ಮಾಡಲ್‌ಗ‌ಳನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ಹಣದಲ್ಲಿ ಕಾಂಗ್ರೆಸ್‌ ಪ್ರಚಾರ ಆರಂಭಿಸಿದ್ದಾರೆ ಎಂದು ಟೀಕಿಸಿದರು.

ಮಹಾರಾಜರ ನಂತರ ಮೈಸೂರಿಗೆ ನಾನೇ ಹೆಚ್ಚು ಕೆಲಸ ಮಾಡಿರುವುದು ಎಂದು ನಿಮಗೆ ನೀವೇ ಹೇಳಿಕೊಳ್ಳುವುದಲ್ಲ. ಅದನ್ನು ಜನರು ಹೇಳಬೇಕು ಎಂದ ಅವರು, ಸಿದ್ದರಾಮಯ್ಯ ವಿರುದ್ಧ ಮಾತನಾಡಲೂ ಕಾಂಗ್ರೆಸ್‌ನ ಅನೇಕರಲ್ಲಿ ಧಮ್‌ ಇಲ್ಲದಂತಾಗಿದೆ. ಕಾಂಗ್ರೆಸ್‌ಗೆ ಕಡೆ ಮೊಳೆಯನ್ನು ಸಿದ್ದರಾಮಯ್ಯನೆ ಹೊಡೆದಿದ್ದಾರೆ. ಮತ್ತೆ ಅವರು ಅಧಿಕಾರಕ್ಕೆ ಬರುವುದಿಲ್ಲ.

ತಾನೇ ಅಧಿಕಾರಕ್ಕೆ ಬರುತ್ತೇನೆ ಎಂಬ ವಿಶ್ವಾಸ ಇದ್ದಿದ್ದರೆ ಮೈಸೂರಿನಲ್ಲಿ ಇನ್ನೂ ಪೂರ್ಣಗೊಳ್ಳದ ಜಯದೇವ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ನೆಪ್ರೋ ಯುರಾಲಜಿ ಘಟಕಗಳನ್ನೇಕೆ ತರಾತುರಿಯಲ್ಲಿ ಸಿದ್ದರಾಮಯ್ಯ ಉದ್ಘಾಟಿಸುತ್ತಿದ್ದರು, ಹೇಗಿದ್ದರೂ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಕಾಮಗಾರಿ ಪೂರ್ಣಗೊಂಡ ಮೇಲೆ ಉದ್ಘಾಟಿಸೋಣ ಎಂದು ಇರಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿನ ವಿದ್ಯಮಾನಗಳು, ಸರ್ಕಾರದ ವೆಚ್ಚದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯ ಬಗ್ಗೆ ಚುನಾವಣಾ ಆಯೋಗ ನಿಗಾವಹಿಸಬೇಕು. ಆ ಎಲ್ಲಾ ಕಾರ್ಯಕ್ರಮಗಳ ಖರ್ಚನ್ನು ಪಕ್ಷದ ಖಾತೆಗೆ ಹಾಕಬೇಕು ಎಂದು ಒತ್ತಾಯಿಸಿದರು.

ಅವಮಾನ: ಹುಣಸೂರು ನಗರಸಭಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷರನ್ನೇ ಕಡೆಗಣಿಸಲಾಗಿದೆ. ಅಧ್ಯಕ್ಷರನ್ನು ಹಿಂದಿನ ಸಾಲಿನಲ್ಲಿ ಕೂರಿಸಿ ಇವರು ಕಾಂಗ್ರೆಸ್‌ ಪ್ರಚಾರ ನಡೆಸಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಹುಣಸೂರು ನಗರಸಭೆ ಅಧ್ಯಕ್ಷ ಶಿವಕುಮಾರ್‌, ಮುಖಂಡರಾದ ರೇವಣ್ಣ, ಸೋಮಸುಂದರ್‌, ಪ್ರಕಾಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next