ಬೆಂಗಳೂರು: ಕೊರೊನಾ ಹಾಗೂ ರೂಪಾಂತರಿ ಒಮಿಕ್ರಾನ್ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿಯಿಂದ ಮತ್ತೆ ರಾಜ್ಯಾದ್ಯಂತ ಜಾರಿಯಾಗಿದೆ.
ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿದ ನಂತರ ಸತತ ಎರಡನೇ ವಾರದ ವಾರಾಂತ್ಯ ಕರ್ಫ್ಯೂ ಇದಾಗಿದ್ದು ಜನವರಿ ತಿಂಗಳ ಅಂತ್ಯದವರೆಗೂ ಇದು ಮುಂದುವರಿಯಲಿದೆ.
ಆಹಾರಧಾನ್ಯ, ತರಕಾರಿ, ಹಣ್ಣು, ಹಾಲು, ಔಷಧ, ಮೀನು-ಮಾಂಸ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರೆ ಸೇವೆಗಳು ಇರುವುದಿಲ್ಲ. ಅನಗತ್ಯವಾಗಿ ಓಡಾಟ ನಡೆಸುವ ವಾಹನಗಳನ್ನು ಜಫ್ತಿ ಮಾಡಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಇದನ್ನೂ ಓದಿ:ಗವಿಗಂಗಾಧರೇಶ್ವರ ಸನ್ನಿಧಿ: ಶಿವ ಲಿಂಗವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ
ಉಳಿದಂತೆ ಸರ್ಕಾರಿ ಹಾಗೂ ವಿನಾಯಿತಿ ನೀಡಿರುವ ಕೈಗಾರಿಕೆ ಮತ್ತು ಉದ್ಯಮಿ, ಐಟಿ-ಬಿಟಿ ವಲಯದ ನೌಕರರು ಗುರುತಿನ ಚೀಟಿ ತೋರಿಸಿ ಕಚೇರಿಗಳಿಗೆ ಹಾಜರಾಗಬಹುದು.ಎರಡೂ ದಿನ ಶಾಲಾ-ಕಾಲೇಜುಗಳು ಇರುವುದಿಲ್ಲ.
ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ಎಲ್ಲ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.