ಹುಮನಾಬಾದ: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಮಾಡುವಲ್ಲಿ ಹರಸಾಹಸ ಪಟ್ಟ ಅಧಿಕಾರಿಗಳಿಗೆ ಇದೀಗ ಮುಕ್ತಿ ದೊರೆತಂತಾಗಿದೆ. ಕಾರಣ ಆಸ್ಪತ್ರೆ ಆವರಣದಲ್ಲಿಯೇ ಆಕ್ಸಿಜನ್ ಪೂರೈಕೆ ಘಟಕ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಳೆದ ಆರು ತಿಂಗಳ ಹಿಂದೆ ಒಂದು ಕೋಟಿಗೂ ಅಧಿಕ ಮೊತ್ತದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗುತ್ತು. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು.
ಮೂರನೇ ಹಂತದ ಕೊರೊನಾ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿ.4ರಂದು “ಉದಯವಾಣಿ’ ಪತ್ರಿಕೆಯಲ್ಲಿ ವಿಶೇಷ ಸುದ್ದಿ ಪ್ರಕಟಗೊಂಡಿತ್ತು. ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೂಡಲೇ ಘಟಕ ಪ್ರಾರಂಭಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ನಾಗಯ್ನಾ ಹಿರೇಮಠ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ನಾಗನಾಥ ಹುಲಸೂರೆ ಡಿ.5ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ವರದಲ್ಲಿ ಸಲ್ಲಿಸಿದ್ದರು. ಅಲ್ಲದೆ, ಗುತ್ತಿಗೆ ಪಡೆದವರನ್ನು ಸಂಪರ್ಕ ಮಾಡಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.
ಡಿ.20ರಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಎಲ್ಲ ಪರೀಕ್ಷೆ ನಡೆಸಿ ಕಾಮಗಾರಿ ಹಸ್ತಾಂತರ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಧನವಂತ್ರಿ ಅಸೋಸಿಯೆಟ್ಸ್ ಕಂಪನಿಯ ಯು. ಕೃಷ್ಣಾ ಪ್ರಸಾದ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ನಡೆಯುವ ಸರಕಾರಿ ಸೌಮ್ಯದ ಬಲ್ಮೇರ್ ಲಾರಿ ಸಂಸ್ಥೆಯ ಮುಖ್ಯಸ್ಥ ಅಕ್ ರತ್ನಶೇಖರ ಮಂಗಳವಾರ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ನಿರ್ಮಾಣಗೊಂಡಿರುವ ಘಟಕವನ್ನು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ನಾಗನಾಥ ಹುಲಸೂರೆ ಅವರಿಗೆ ಹಸ್ತಾಂತರ ಮಾಡಿದರು. ಎರಡನೇ ಅಲೆಯಲ್ಲಿ ಆಕ್ಸಿಜನ್ ಪೂರೈಕೆಗೆ ಅನೇಕ ಸಮಸ್ಯೆಗಳು ಎದುರಿಸಿದ್ದು, ಇದೀಗ ಪಟ್ಟಣದಲ್ಲಿಯೇ ಘಟಕ ಆರಂಭಗೊಳ್ಳಲಿದ್ದು, ಈ ಭಾಗದ ರೋಗಗಳಿಗೆ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ನಾಗಯ್ನಾ ತಿಳಿಸಿದರು.
ಆಕ್ಸಿಜನ್ ಘಟಕದಿಂದ ಪೂರೈಕೆ ಮಾಡಲಾಗುವ ಆಕ್ಸಿಜನ್ ಐಸಿಯು ಘಟಕಕ್ಕೂ ಬಳಕೆ ಮಾಡಬಹುದಾಗಿದೆ. ಆದರೆ, ನೂರಿತ ಸಿಬ್ಬಂದಿಗಳ ಕೊರತೆ ಆಸ್ಪತ್ರೆಯಲ್ಲಿದೆ ಎಂದು ಡಾ| ನಾಗನಾಥ ಹುಲಸೂರೆ ತಿಳಿಸಿದರು.