Advertisement

10 ಲಕ್ಷ ಸಸಿಗೆ ನೆಡಲು ಮುಂದಾದ ಪಾಲಿಕೆ

12:42 PM Jun 06, 2017 | Team Udayavani |

ಬೆಂಗಳೂರು: ನಗರದ ಪ್ರತಿಯೊಬ್ಬರೂ ಕನಿಷ್ಠ ಎರಡು ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

Advertisement

ಬಿಬಿಎಂಪಿ ವತಿಯಿಂದ ಸೋಮವಾರ ಸರ್ವಜ್ಞನಗರದ ಕಲ್ಯಾಣನಗರದಲ್ಲಿ “ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ್ದ “ವನ ಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಬೆಂಗಳೂರನ್ನು ಹಸಿರಾಗಿಸಲು ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಸಸಿ ನೆಡಲು ಯೋಜಿಸಲಾಗಿದೆ.

ಇದರಲ್ಲಿ ನಗರದ ನಾಗರಿಕರ ಸಹಕಾರ ಅಗತ್ಯವಿದೆ. ಮಳೆಗಾಲದೊಳಗೆ 10 ಲಕ್ಷ ಸಸಿಗಳನ್ನು ನಾಗರಿಕರಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಸಸಿಗಳನ್ನು ನೆಟ್ಟ ನಂತರ ಅವುಗಳನ್ನು ಪೋಷಣೆ ಮಾಡುವಂತೆಯೂ ತಾಕೀತು ಮಾಡಲಾಗಿದೆ ಎಂದರು. 

ಮೇಯರ್‌ ಜಿ.ಪದ್ಮಾವತಿ ಮಾತನಾಡಿ, “ಪಾಲಿಕೆಯ ವತಿಯಿಂದ ನಗರದ ವಿವಿಧ ನರ್ಸರಿಗಳಲ್ಲಿ ಸುಮಾರು 16 ಜಾತಿಯ 10 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಈಗಾಗಲೇ ಗ್ರೀನ್‌ ಆ್ಯಪ್‌ ಮೂಲಕ ಪಾಲಿಕೆಗೆ ಲಕ್ಷಾಂತರ ಗಿಡಗಳಿಗಾಗಿ ಬೇಡಿಕೆ ಬಂದಿದೆ. ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಸಸಿ ವಿತರಣೆ ಆರಂಭವಾಗಲಿದೆ,’ ಎಂದು ಹೇಳಿದರು. 

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌, “ಸಸಿ ವಿತರಣೆ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ಆನ್‌ಲೈನ್‌ ಮೂಲಕ ಗಿಡ ವಿತರಿಸಲಾಗುತ್ತಿದೆ. ಪಾಲಿಕೆಯಲ್ಲಿ 10 ಲಕ್ಷ ಸಸಿಗಳನ್ನು ಬೆಳೆಸಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಯರ್‌, ಉಪಮೇಯರ್‌ ಹಾಗೂ ಪಾಲಿಕೆಯ ತೋಟಗಾರಿಕೆ ವಿಭಾಗದ ಅಧಿಕಾರಿಗಳು ನರ್ಸರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ವರದಿ ನೀಡಿದ್ದು 10 ಲಕ್ಷ ಸಸಿಗಳಿರುವುದು ಕಂಡುಬಂದಿದೆ,’ ಎಂದು ಮಾಹಿತಿ ನೀಡಿದರು. 

Advertisement

ಬಿಬಿಎಂಪಿಯ ಗ್ರೀನ್‌ ಆ್ಯಪ್‌ಗೆ 1.79 ಲಕ್ಷ ಗಿಡಗಳಿಗಾಗಿ ಮನವಿ ಬಂದಿದೆ. ಜೂನ್‌ 10ರಿಂದ ಸಸಿಗಳ ವಿತರಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಅದರ ಹಿನ್ನೆಲೆಯಲ್ಲಿ ಈಗಾಗಲೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಭಿಯಾನಕ್ಕೆ ನಟ ಯಶ್‌ ಕೈಜೋಡಿಸಿದ್ದಾರೆ ಎಂದು ತಿಳಿಸಿದರು. ಪಾಲಿಕೆಯ ಸದಸ್ಯರಾದ ಕೋದಂಡ ರೆಡ್ಡಿ, ವಿಶೇಷ ಆಯುಕ್ತ (ಹಣಕಾಸು) ಮನೋಜ್‌, ಗ್ರೀನ್‌ ಬೆಲ್‌ ಪ್ರಾಢಶಾಲೆ, ಲಿಟಲ್‌ ಏಂಜಲ್ಸ್‌ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಹೊಂಗೆ ಗಿಡಕ್ಕೆ ಇನ್ನಿಲ್ಲದ ಬೇಡಿಕೆ!: ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ 16 ಜಾತಿಯ 8 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ತೀರ್ಮಾನಿದ್ದು, ಗ್ರೀನ್‌ಆ್ಯಪ್‌ ಮೂಲಕ ಗಿಡಗಳಿಗಾಗಿ ಮನವಿ ಸ್ವೀಕರಿಸುತ್ತಿದೆ. ಸೋಮವಾರದ ವೇಳೆಗೆ 1.79 ಸಾವಿರ ಗಿಡಗಳಿಗಾಗಿ ಸಾರ್ವಜನಿಕರಿಂದ ಬೇಡಿಕೆ ಬಂದಿದ್ದು, ಈ ಪೈಕಿ ಹೊಂಗೆ ಸಸಿಗಳಿಗಾಗಿ ಅತಿ ಹೆಚ್ಚು ಬೇಡಿಕೆ ಬಂದಿದೆ. 20, ಸಾವಿರ ಹೊಂಗೆ ಸಸಿಗಳಿಗಾಗಿ ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಉಳಿದಂತೆ ಬೇವು (17,171), ನೇರಳೆ (15,207), ಸಂಪಿಗೆ (14,852), ಮಹಾಗನಿ (14,532) ಹಾಗೂ ನೆಲ್ಲಿ (13,559) ಬೇಡಿಕೆಗಳು ಬಂದಿವೆ. 

Advertisement

Udayavani is now on Telegram. Click here to join our channel and stay updated with the latest news.

Next