Advertisement

ಆನ್‌ಲೈನ್‌ನಲ್ಲೇ ಎಸ್ಸೆಸ್ಸೆಲ್ಸಿ ವಲಸೆ ಪ್ರಮಾಣಪತ್ರ ಲಭ್ಯ

11:08 PM Aug 03, 2019 | Lakshmi GovindaRaj |

ಬೆಂಗಳೂರು: ಇತ್ತೀಚೆಗಷ್ಟೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ ಪಿಯು ಸೇರಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ವಲಸೆ ಪ್ರಮಾಣಪತ್ರ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ವಲಸೆ ಪ್ರಮಾಣಪತ್ರವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಒದಗಿಸಿ ಕೊಡುವ ಉದ್ದೇಶದಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. 2019ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ವಲಸೆ ಪ್ರಮಾಣಪತ್ರ ನೀಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ರಾಜ್ಯದ ಗಡಿ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ರಾಜ್ಯದ ಒಳಗೆ ಪಿಯು ಸೇರುವ ವಿದ್ಯಾರ್ಥಿಗಳಿಗೆ ವಲಸೆ ಪ್ರಮಾಣಪತ್ರದ ಅಗತ್ಯ ಇರುವುದಿಲ್ಲ. ಆದರೆ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಹೊರ ರಾಜ್ಯದಲ್ಲಿ ಪಿಯು ಸೇರುವ ವಿದ್ಯಾರ್ಥಿಗಳಿಗೆ ವಲಸೆ ಪ್ರಮಾಣಪತ್ರ ಕಡ್ಡಾಯ. ವಲಸೆ ಪ್ರಮಾಣಪತ್ರ ಇಲ್ಲದೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೇಲಿನ ನಿರ್ಧಾರಕ್ಕೆ ಮಂಡಳಿ ಬಂದಿದೆ.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ //www.kseeb.kar.nic.in ನ ಮೂಲಕ ವಲಸೆ ಪ್ರಮಾಣಪತ್ರಕ್ಕೆ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮಂಡಳಿ ನಿಗದಿಪಡಿಸಿರುವ ನಿರ್ದಿಷ್ಟ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು ಅಥವಾ ಶುಲ್ಕದ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಆಫ್ಲೈನ್‌ ಮೂಲಕವೂ ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಿದ ತಕ್ಷಣವೇ ಆನ್‌ಲೈನ್‌ನಲ್ಲಿ ವಲಸೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌, ರಾಯಚೂರು, ಬಳ್ಳಾರಿ, ದಕ್ಷಿಣ ಕನ್ನಡ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಬೆಂಗಳೂರು ನಗರ, ಉತ್ತರ ಕನ್ನಡ ಸೇರಿ ಗಡಿನಾಡು ಮತ್ತು ಹೊರ ರಾಜ್ಯಗಳಿಗೆ ಹೊಂದಿಕೊಂಡಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಲಸೆ ಪ್ರಮಾಣಪತ್ರ ಅತಿ ಮುಖ್ಯವಾಗಿರುತ್ತದೆ. ಪ್ರತಿ ವರ್ಷ ಒಂದೊಂದು ಜಿಲ್ಲೆಯಿಂದಲೂ ಸಾವಿರಾರು ಅರ್ಜಿಗಳು ಬರುತ್ತವೆ. ವಿದ್ಯಾರ್ಥಿಗಳು ಶಾಲೆಯಿಂದ, ಶಾಲೆಗೆ ಅಲೆಯಬೇಕು. ಹೀಗಾಗಿ, ಇದನ್ನೆಲ್ಲ ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಮೂಲಕ ವಲಸೆ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಿದ್ದೇವೆಂದು ಅಧಿಕಾರಿಯೊಬ್ಬರು ವಿವರಿಸಿದರು.

ಹಳೇ ಪದ್ಧತಿ ಹೇಗಿದೆ?: ವಲಸೆ ಪ್ರಮಾಣಪತ್ರ ಬಯಸುವ ಅಭ್ಯರ್ಥಿಗಳು ಮಂಡಳಿಯ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಹಿ ಹಾಕಿ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ವಿಭಾಗೀಯ ಕಚೇರಿ ಅಥವಾ ಮಂಡಳಿಯ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಮಂಡಳಿಯಿಂದ ಪ್ರಸ್ತಾವನೆಯನ್ನು ಪರಿಶೀಲಿಸಿ, ಕೈಬರಹದಲ್ಲಿ ಸಿದ್ಧಪಡಿಸಿ, ಅಂಚೆ ಮೂಲಕ ಸಂಬಂಧಿಸಿದ ಶಾಲೆಗೆ ಕಳುಹಿಸಿ ಕೊಡಲಾಗುತ್ತಿತ್ತು. ಈ ಕ್ರಮಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತಿತ್ತು.

Advertisement

ನೈಜತೆ ಪರಿಶೀಲನೆ ಸಾಧ್ಯ: ಆನ್‌ಲೈನ್‌ ಮೂಲಕ ಪಡೆದಿರುವ ವಲಸೆ ಪ್ರಮಾಣಪತ್ರ ನಕಲಿಯೋ ಅಥವಾ ನೈಜವೋ ಎಂಬುದನ್ನು ಪರಿಶೀಲಿಸಬಹುದು. ಪತ್ರದ ನೈಜತೆಯನ್ನು ಆನ್‌ಲೈನ್‌ ಮೂಲಕವೇ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಪತ್ರದಲ್ಲಿರುವ ಕ್ಯೂಆರ್‌ ಕೋಡ್‌ ಬಳಸಿ ನೈಜತೆ ಪರಿಶೀಲಿಸಿದಾಗ “ಈ ಪತ್ರವನ್ನು ಮಂಡಳಿಯಿಂದಲೇ ನೀಡಲಾಗಿದೆ’ ಎಂಬ ಸಂದೇಶ ಬರುತ್ತದೆ. ಈ ರೀತಿಯ ಸಂದೇಶ ಬಾರದಿದ್ದರೆ ನಕಲಿಯಾಗಿರುತ್ತದೆ ಎಂದು ಅಧಿಕಾರಿ ವಿವರಿಸಿದರು.

ಗಡಿನಾಡು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಲಸೆ ಪ್ರಮಾಣಪತ್ರವನ್ನು ಆನ್‌ಲೈನ್‌ ಮೂಲಕವೇ ವಿತರಿಸಲು ನಿರ್ಧರಿಸಿದ್ದೇವೆ. 2018ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಳೇ ವಿಧಾನದಲ್ಲೇ ಈ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದೇವೆ.
-ವಿ.ಸುಮಂಗಳಾ, ನಿರ್ದೇಶಕಿ, ಎಸ್ಸೆಸ್ಸೆಲ್ಸಿ ಬೋರ್ಡ್‌

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next