Advertisement

ಮಾತೃಭಾಷೆಯಲ್ಲಿ ಅಡಗಿದೆ ಶಿಕ್ಷಣದ ಆತ್ಮ

01:46 AM Apr 28, 2022 | Team Udayavani |

ಭಾಷೆಗಳು ನಮ್ಮ ಸಂಸ್ಕೃತಿಯನ್ನು ಜೀವಂತವಿಡುವ ಪ್ರಮುಖ ಸಾಧನವಾಗಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ನೇರ ಭಾಷಾಂತರವು ಮೂಲ ಭಾಷೆಯಲ್ಲಿ ಅಡಗಿರುವ ಸಾರಾಂಶಗಳನ್ನು ತಿಳಿಸಲು ವಿಫ‌ಲವಾಗುತ್ತದೆ. ಆದುದರಿಂದ ಒಂದು ಸಂಸ್ಕೃತಿಯನ್ನು ಆಮೂಲಾಗ್ರವಾಗಿ ತಿಳಿಯಲು ಅಲ್ಲಿಯ ಭಾಷೆಯನ್ನು ಅಭ್ಯಸಿಸಬೇಕು. ಮಾತೃಭಾಷೆಯು ನಮ್ಮ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಬೇರುಗಳನ್ನು ಜೋಡಿಸಲು ಸಹಕಾರಿಯಾಗುತ್ತದೆ.

Advertisement

ಹುಟ್ಟಿದಂದಿನಿಂದ ಮಗುವೊಂದು ಯಾವ ಭಾಷೆ ಯನ್ನು ಆಡುತ್ತದೆಯೋ ಅದು ಅದರ ಹುಟ್ಟುಭಾಷೆ. ಮಾತೃಭಾಷೆಯು ಒಬ್ಬ ವ್ಯಕ್ತಿಯು ಬಾಲ್ಯದಿಂದಲೂ ಮಾತನಾಡುತ್ತಾ ಬೆಳೆದ ಭಾಷೆಯಾಗಿದೆ. ಇದು ವ್ಯಕ್ತಿಗಳ ಸ್ಥಳೀಯ ಭಾಷೆ. ಅದೊಂದು ವ್ಯಕ್ತಿ ಯೋರ್ವನನ್ನು ಹೆಚ್ಚು ಪರಿಚಿತನನ್ನಾಗಿಸುವ ಸಂಪರ್ಕ ಮಾಧ್ಯಮ. ಶಿಕ್ಷಣದಲ್ಲಿ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಾಧ್ಯ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಪ್ರಮುಖ ವಾಣಿಜ್ಯ ಭಾಷೆಯೋ ಅಥವಾ ವಸಾಹತಿ ಭಾಷೆಯೋ ಶಿಕ್ಷಣದ ಮಾಧ್ಯಮ ವಾಗಿರುವುದನ್ನು ಶಾಲೆಗಳಲ್ಲಿ ಬಹುತೇಕ ಕಂಡಿದ್ದೇವೆ. ಭಾರತವೂ ಇದಕ್ಕೆ ಹೊರತಲ್ಲ. ದೇಶದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಪರಿಣಾಮವಾಗಿ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ.

ಭಾರತ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕಳೆದ ವರ್ಷ ಜಾರಿಗೊಳಿಸಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ 1986ರ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಇದು ಅತೀ ದೊಡ್ಡ ಸುಧಾರಣೆ ಎಂದು ಪರಿಗಣಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣದ ಹಲವು ಮಜಲುಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಬೋಧನಾ ಮಾಧ್ಯಮವೂ ಒಂದು. ಈ ನೀತಿಯನ್ವಯ ಶಾಲೆಗಳಲ್ಲಿ 5 ನೆ ತರಗತಿಯವರೆಗೆ ಬೋಧನಾ ಮಾಧ್ಯಮವು ಮಾತೃಭಾಷೆಯಲ್ಲಿರುತ್ತದೆ.

ಮಾತೃಭಾಷಾ ಶಿಕ್ಷಣದಿಂದ ಲಾಭಗಳು
ಮಗುವೊಂದು ತನ್ನ ಮಾತೃಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸಹಜ. ಆದ್ದರಿಂದ ಅದೇ ಭಾಷೆಯಲ್ಲಿ ಮಗುವಿಗೆ ಬೋಧಿಸಲ್ಪಟ್ಟರೆ ಶಾಲಾ ಶಿಕ್ಷಣಕ್ಕೆ ಅದು ಸುಲಭವಾಗಿ, ಸುಗಮವಾಗಿ ಹೊಂದಿಕೊಳ್ಳುತ್ತದೆ, ಪರಿವರ್ತನಗೊಳ್ಳುತ್ತದೆ. ವಿದೇಶೀ ಭಾಷೆಯಲ್ಲಿ ವಿದ್ಯಾರ್ಥಿಯೊಬ್ಬನು ಕಲಿತರೆ, ಅವನು ಆ ಭಾಷೆಯನ್ನು ಓದಲು ಬರೆಯಲು ಕಲಿಯುವುದರ ಒತ್ತಡಕ್ಕೆ ಗುರಿಯಾಗುತ್ತಾನೆ ಮತ್ತು ಅವನ ಕಲಿಕೆ ನಿಧಾನವಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ, ತರಗತಿಗಳು ಆಯಾ ಸಮುದಾಯದ ಭಾಷೆಯಲ್ಲಿಯೇ ನಡೆ‌ಯಬೇಕು, ಇದರಿಂದಾಗಿ ಮಕ್ಕಳು ಇತರ ವಿಷಯಗಳನ್ನು ಬೇಗ ಕಲಿಯಲು ಸಹಾಯಕವಾಗುತ್ತದೆ ಎಂದು ಯುನೆಸ್ಕೋ ಶಿಫಾರಸು ಮಾಡಿದೆ. ಪ್ರಾಥಮಿಕ ಶಿಕ್ಷಣದ ಮಾಧ್ಯಮ ಮಾತೃಭಾಷೆಯಲ್ಲಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಫ‌ಲಿತಾಂಶ ಉತ್ತಮವಾಗಿರುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಜನರ ಯೋಚನೆ ಮತ್ತು ಭಾವನೆಗಳನ್ನು ತಿಳಿಯಲು ಮಾತೃಭಾಷೆಯು ಪ್ರಮುಖವಾಗುತ್ತದೆ. ತನ್ನ ಭಾಷೆಯಲ್ಲಿ ಕಲಿತರೆ ವಿದ್ಯಾರ್ಥಿಯೊಬ್ಬನ ಅಭಿವ್ಯಕ್ತಿ ಉತ್ತಮಗೊಳ್ಳುತ್ತದೆ. ಇದರಿಂದಾಗಿ ಶಾಲಾ ಶಿಕ್ಷಣ ದ್ವಿಪಥದಲ್ಲಿ ಸಾಗುತ್ತದೆ. ಶಿಕ್ಷಕ-ವಿದ್ಯಾರ್ಥಿ ನಡುವೆ ಸಂವಹನವಿರುತ್ತದೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ
ವಿಷಯ ಗ್ರಹಣವು ವಿದ್ಯಾರ್ಥಿಯೊಬ್ಬನ ವಿಶ್ವಾಸವನ್ನು ವೃದ್ಧಿಗೊಳಿಸುವುದರ ಜತೆಗೆ ಶಿಕ್ಷಣದ ಮುಂದುವರಿಕೆ ಸುಗಮವಾಗಿ ನಡೆಯುತ್ತದೆ ಮತ್ತು ಡ್ರಾಪ್‌ಔಟ್‌ ಪ್ರಮಾಣ ಕಡಿಮೆಯಾಗುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣ, ಮನೆ-ಶಾಲಾ ಪಾಲುಗಾರಿಕೆಯನ್ನು ಗಟ್ಟಿಗೊಳಿಸುತ್ತದೆ. ಮಾತೃಭಾಷೆಯು ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಅನುಕೂಲವಾಗಿರುತ್ತದೆ. ಇಂಗ್ಲಿಷಿನಲ್ಲೋ ಅಥವಾ ಬೇರೆ ಭಾಷೆಯಲ್ಲಿ ಬೋಧನೆ ತುಸು ಕಷ್ಟವಾದೀತು ಮೇಲಾಗಿ ತನ್ನ ಬೋಧನಾ ಸಾಮರ್ಥ್ಯಕ್ಕನುಗುಣವಾಗಿ ಬೋಧಿಸಲು ಶಿಕ್ಷಕನಾದವರಿಗೆ ಅಸಾಧ್ಯವಾಗಬಹುದು. ಆಗ ಜ್ಞಾನದಾನದ ಕೊರತೆಯುಂಟಾಗಬಹುದು. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವಿದ್ದರೆ, ಪಠ್ಯಪುಸ್ತಕ ತಯಾರಿಯ ವಿಕೇಂದ್ರೀಕರಣವಾಗುತ್ತದೆ ಎಂದು ಡಾ| ಯಶ್‌ಪಾಲ್‌ ಶರ್ಮ ಎಂದೋ ಶಿಫಾರಸು ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪಠ್ಯದ ಅಂಶಗಳು ಮಕ್ಕಳಿಗೆ ಸಮೀಪವಾಗುತ್ತವೆ, ಅರ್ಥವಾಗುತ್ತವೆ. ವಿದೇಶೀ ಭಾಷೆಯಲ್ಲಿ ಕಲಿಕೆ ಮಕ್ಕಳಲ್ಲಿ ತಮ್ಮ ಸಂಸ್ಕೃತಿ ಮತ್ತು ಪರಂಪರೆಯಿಂದ ಪ್ರತ್ಯೇಕವಾಗುವ ಪ್ರಜ್ಞೆ ಕಾಡುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣ ಮಕ್ಕಳಲ್ಲಿ ಸಾಂಸ್ಕೃತಿಕ ಹಿನ್ನೆಲೆಯ ಪ್ರಜ್ಞೆ ದೊರಕುವಲ್ಲಿ ಸಹಾಯವಾಗುತ್ತದೆ. ಸಾಂಸ್ಕೃತಿಕ ಬೇರು ಗಟ್ಟಿಯಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕೆಂದು ರಾಷ್ಟ್ರೀಯ ನೂತನ ಶಿಕ್ಷಣ ನೀತಿ-2020 ಕಡ್ಡಾಯಗೊಳಿಸಿದೆ.

Advertisement

ಮಾತೃಭಾಷೆಯಲ್ಲಿ, ಮಕ್ಕಳ ಅರಿವಿನ ಶಕ್ತಿ ಮತ್ತು ಬೌದ್ಧಿಕ ಬೆಳವಣಿಗೆಯು ವೇಗ ಮತ್ತು ನಿರರ್ಗಳವಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸು ಇತರ ಭಾಷೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಹೆಚ್ಚಿರುತ್ತದೆ. ಭಾಷೆಗಳು ನಮ್ಮ ಸಂಸ್ಕೃತಿಯನ್ನು ಜೀವಂತವಿಡುವ ಪ್ರಮುಖ ಸಾಧನವಾಗಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ನೇರ ಭಾಷಾಂತರವು ಮೂಲ ಭಾಷೆಯಲ್ಲಿ ಅಡಗಿರುವ ಸಾರಾಂಶಗಳನ್ನು ತಿಳಿಸಲು ವಿಫ‌ಲವಾಗುತ್ತದೆ. ಆದುದರಿಂದ ಒಂದು ಸಂಸ್ಕೃತಿಯನ್ನು ಆಮೂಲಾಗ್ರವಾಗಿ ತಿಳಿಯಲು ಅಲ್ಲಿಯ ಭಾಷೆಯನ್ನು ಅಭ್ಯಸಿಸಬೇಕು. ಮಾತೃಭಾಷೆಯು ನಮ್ಮ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಬೇರುಗಳನ್ನು ಜೋಡಿಸಲು ಸಹಕಾರಿಯಾಗುತ್ತದೆ. ವ್ಯಕ್ತಿಯೊಬ್ಬನಿಗೆ ತನ್ನ ಮಾತೃಭಾಷೆ ತಿಳಿದಿದ್ದರೆ, ಹೊಸ ಹೊಸ ಭಾಷೆಗಳನ್ನು ಕಲಿಯಲು ಅವನಿಗೆ ಸುಲಭವಾಗುತ್ತದೆ. ಮಗುವೊಂದು ತನ್ನ ಮಾತೃಭಾಷೆಯನ್ನು ಓದಬಲ್ಲುದಾದರೆ ಅದು ಇತರ ಭಾಷೆಗಳನ್ನು ಓದುವ ಕೌಶಲವನ್ನು ಬೆಳೆಸಿಕೊಳ್ಳುತ್ತದೆ. ವ್ಯಾಪಾರ ವಹಿವಾಟುಗಳು ಈಗ ಗ್ರಾಮಾಂತರ ಭಾಗಗಳಲ್ಲೂ ವಿಸ್ತರಿಸುವುದಕ್ಕೆ ಮಾತೃಭಾಷೆ ಸಹಕಾರಿಯಾಗಬಲ್ಲುದು. ಸ್ಥಳೀಯ ಗಿರಾಕಿಗಳ ಜತೆ ಸಂವಹನಕ್ಕೆ ಮಾತೃಭಾಷೆಯಿದ್ದರೆ ನಿಮ್ಮ ಉದ್ಯಮವನ್ನು ಬೆಳೆಸಬಹುದು. ಮಾತೃಭಾಷೆಯನ್ನು ತಿಳಿಯುವುದು ಎಂದರೆ ನಿಮ್ಮ ಸ್ವಗೌರವವನ್ನು ಕಾಪಾಡಿದಂತೆ. ನಿಮ್ಮ ವಿಶ್ವಾಸವನ್ನು ವೃದ್ಧಿಗೊಳಿಸುವುದರ ಮೂಲಕ ಸಾಂಸ್ಕೃತಿಕ ಗುರುತನ್ನು ಜೋಡಿಸುತ್ತದೆ.

ಮಾತೃಭಾಷೆಯ ಮಹತ್ವಗಳೇನು?
ಮಾತೃಭಾಷೆಯಲ್ಲಿ ಕಲಿಕೆಯಿಂದ ಬೌದ್ಧಿಕ ಬೆಳವಣಿಗೆಯಾಗುತ್ತದೆ. ವೈಯಕ್ತಿಕ ಮತ್ತು ಸಾಂಸ್ಕೃತಿಕ ಗುರುತಿಸುವಿಕೆಯನ್ನು ವೃದ್ಧಿಗೊಳಿಸುತ್ತದೆ. ಸಂಸ್ಕೃತಿಯೊಂದಿಗೆ ಉತ್ತಮ ಸಂಪರ್ಕವಾಗುತ್ತದೆ. ಹೆಚ್ಚುವರಿ ಭಾಷೆಗಳನ್ನು ಕಲಿಯುವ ಉತ್ಸಾಹವಿರುತ್ತದೆ. ವಾಣಿಜ್ಯ ಲಾಭಗಳಿವೆ. ಸಂವಹನ ಕೌಶಲವನ್ನು ಕಲಿಯಬಹುದು ಮತ್ತು ಉತ್ತಮಗೊಳಿಸಬಹುದು. ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ. ಕೌಟುಂಬಿಕ ಬಂಧನಗಳನ್ನು ಗಟ್ಟಿಗೊಳಿಸುತ್ತದೆ. ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಜಾಗೃತಿಯನ್ನುಂಟುಮಾಡುತ್ತದೆ. ಮಾತೃಭಾಷೆ ಹೆಮ್ಮೆಯ ವಿಚಾರ. ಮಾತೃಭಾಷೆ ರಹಿತ ಶಿಕ್ಷಣದ ಪಾರಮ್ಯ, ಮಾತೃಭಾಷೆ ಕಲಿಕೆಯ ಕೊರತೆಗಳಿಂದಾಗಿ ಅಸಮಾನತೆ ಇತ್ಯಾದಿ ಸವಾಲುಗಳೂ ಇಲ್ಲದಿಲ್ಲ.

ಮಾತೃಭಾಷಾ ಶಿಕ್ಷಣವನ್ನು ಅಭಿವೃದ್ಧಿಪಡಿಸುವುದು ಹೇಗೆ?
ಶಿಕ್ಷಣದ ಆತ್ಮವಿರುವುದೇ ಮಾತೃಭಾಷೆಯಲ್ಲಿ ಎಂಬುದನ್ನು ನಾವೆಲ್ಲರೂ ಮೊದಲು ಅರ್ಥೈಸಿಕೊಳ್ಳಬೇಕು. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಆರಂಭಿಸುವುದು, ಮಾತೃಭಾಷೆಯಲ್ಲಿರುವ ಲಿಪಿ ಸಾಮಗ್ರಿಗಳನ್ನು ಒದಗಿಸುವುದು, ಮಗುವಿಗೆ ಶಿಕ್ಷಣ ಮಾತೃಭಾಷೆಯಲ್ಲಿ ಲಭಿಸುವಂತೆ ಮಾಡುವುದು, ಪರಿಣಾಮಕಾರಿ ಬೋಧನಾವಿಧಾನಗಳನ್ನು ಪ್ರೋತ್ಸಾಹಿಸುವುದು, ಮಾತೃಭಾಷೆಯಲ್ಲಿ ಬೋಧಕರನ್ನು ನೇಮಿಸುವುದು ಮತ್ತು ತರಬೇತಿಗೊಳಿಸುವುದರಿಂದ ಮಾತೃಭಾಷಾ ಶಿಕ್ಷಣದ ಅಭಿವೃದ್ಧಿ ಸಾಧ್ಯ.

-ಜಲಂಚಾರು ರಘುಪತಿ ತಂತ್ರಿ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next