Advertisement

ಬಂಡಾಯ ಶಾಸಕರ ಪ್ರಕರಣ ತೀರ್ಪು ಕಾಯ್ದಿರಿಸಿದ ಸ್ಪೀಕರ್‌

12:10 PM Mar 20, 2018 | |

ಬೆಂಗಳೂರು: ಜೆಡಿಎಸ್‌ ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ಕೆ.ಬಿ.ಕೋಳಿವಾಡ ತೀರ್ಪು ಕಾಯ್ದಿರಿಸಿದ್ದಾರೆ. ಸೋಮವಾರ ಪ್ರಕರಣದ ಮರು ವಿಚಾರಣೆ ನಡೆಸಿದ ಅವರು ಪರ-ವಿರೋಧ ವಾದ ಆಲಿಸಿ ತೀರ್ಪು ಕಾಯ್ದಿರಿಸಿದರು. 

Advertisement

 ಇದಕ್ಕೂ ಮುನ್ನ ನಡೆದ ವಿಚಾರಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿರುವ ಏಳು ಶಾಸಕರನ್ನು ಅನರ್ಹ ಮಾಡುವಂತೆ ಜೆಡಿಎಸ್‌ ಶಾಸಕ ಬಿ.ಬಿ.ನಿಂಗಯ್ಯ ಸ್ಪೀಕರ್‌ಗೆ ಮನವಿ ಮಾಡಿದರು. ಬಂಡಾಯ ಶಾಸಕರ ಪರ ವಕೀಲರು, ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ತೀರ್ಪು ಪ್ರಕಾರ ಅಧಿವೇಶನದ ಸಂದರ್ಭದಲ್ಲಿ ವಿಪ್‌ ಜಾರಿಯಾದರೆ ಮಾತ್ರ ಅದು ಶಾಸಕರು ಪಾಲಿಸಬೇಕು.

ಅಧಿವೇಶನ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪಕ್ಷವು ಶಾಸಕರು ತಮ್ಮ ಇಷ್ಟದಂತೆ ನಡೆಸಿಕೊಳ್ಳುವಂತಿಲ್ಲ.  ಹೀಗಾಗಿ, ರಾಜ್ಯಸಭೆ ಚುನಾವಣೆ ವೇಳೆ ಜಾರಿ ಮಾಡಿರುವ ವಿಪ್‌ಗೆ ಮಾನ್ಯತೆ ಇಲ್ಲ ಎಂದು ವಾದ ಮಂಡಿಸಿದರು. ಜತೆಗೆ ಏಳು ಜನರಿಗೆ ಅನ್ವಯವಾಗುವ ತೀರ್ಪು ಶಾಸಕ ಗೋಪಾಲಯ್ಯ ಅವರಿಗೂ ಅನ್ವಯವಾಗಬೇಕು. ಅವರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್‌ ಯಾಕೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದರು.

ನಾವು ದೇವೇಗೌಡರ ವಿರುದ್ಧವೇ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದೆವು. ದೇವೇಗೌಡರು ಎಂದಿಗೂ ನಮ್ಮ ನಾಯಕರೇ. ಅವರು ಪ್ರಶ್ನಾತೀತ ನಾಯಕ. ಏಳು ಶಾಸಕರ ವಿರುದ್ಧ ಅವರು ಹೋರಾಟ ಮಾಡುವುದಾದರೆ ಮಾಡಲಿ. ತೀರ್ಮಾನ ಜನರಿಗೆ ಬಿಟ್ಟದ್ದು. 
-ಜಮೀರ್‌ ಆಹಮದ್‌, ಬಂಡಾಯ ಶಾಸಕ

ನ್ಯಾಯಾಧೀಶರನ್ನು ಯಾವಾಗ ತೀರ್ಪು ಕೊಡುತ್ತೀರಿ ಎಂದು ಕೇಳಲು ಸಾಧ್ಯವೇ? ನಾನು ಇಲ್ಲಿ ಜಡ್ಜ್. ನೀವು ಪ್ರಶ್ನೆ ಮಾಡುವಂತಿಲ್ಲ. ತೀರ್ಪು ಯಾವಾಗ ಎಂದು ಕೇಳಿದ ಪತ್ರಕರ್ತರನ್ನು ಸ್ಪೀಕರ್‌ ಕೆ.ಬಿ.ಕೋಳಿವಾಡ ಪ್ರಶ್ನಿಸಿದ್ದು ಹೀಗೆ. ವಾದ ವಿವಾದ ಆಲಿಸಿದ್ದೇನೆ. ತೀರ್ಪು ಕಾಯ್ದಿರಿಸಿದ್ದೇನೆ. ಹೈಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ. ನಾನು ತೀರ್ಪು ನಾಳೆನೂ ಕೊಡಬಹುದು. ಮತದಾನಕ್ಕೂ ಇದಕ್ಕೂ ಸಂಬಂಧವಿಲ್ಲ.
-ಕೆ.ಬಿ.ಕೋಳಿವಾಡ, ಸ್ಪೀಕರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next