ಮಂಗಳೂರು: ಆಯುಷ್‌ನ ಎಲ್ಲ ವಿಭಾಗಗಳನ್ನು ಒಳಗೊಂಡ ದೇಶದ ಮೊದಲ ಕ್ರೀಡಾ ಔಷಧ ಕೇಂದ್ರ (ಆಯುಷ್ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್)ವನ್ನು ಮಂಗಳೂರಿನಲ್ಲಿ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಜಾಗ ಅಂತಿಮಗೊಳಿಸಿ ಆಯುಷ್ ಇಲಾಖೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ.
ಕೇಂದ್ರ ಆಯುಷ್ ಮಿಷನ್ 2021-22ನೇ ಸಾಲಿನಲ್ಲಿ ಮಂಗಳೂರಿಗೆ ಕ್ರೀಡಾ ಔಷಧ ಕೇಂದ್ರ ಮಂಜೂರು ಮಾಡಿತ್ತು. ಇಲಾಖೆಯಿಂದ ಈಗಾಗಲೇ ಕೇರಳದ ತ್ರಿಶ್ಶೂರ್‌ನಲ್ಲಿ ಆಯುರ್ವೇದ ಕ್ರೀಡಾ ಔಷಧ ಕೇಂದ್ರ ಆರಂಭವಾಗಿದೆ. ಆದರೆ ಮಂಗಳೂರಿನ ಕೇಂದ್ರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ವಿಭಾಗಗಳನ್ನು ಒಳಗೊಂಡಂತೆ ಕಾರ್ಯಾಚರಿಸಲಿದೆ. ಮುಂದಿನ ಹಂತದ ಪ್ರಕ್ರಿಯೆ ಶೀಘ್ರಗತಿಯಲ್ಲಿ ನಡೆದರೆ 2023ರಲ್ಲಿ ಕೇಂದ್ರ ನಿರ್ಮಾಣಕ್ಕೆ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಕೇಂದ್ರಕ್ಕೆ ಪೂರಕವಾಗಿ ಕ್ರೀಡಾಂಗಣ, ಟ್ರ್ಯಾಕ್, ಈಜುಕೊಳ ಇತ್ಯಾದಿ ಬೇಕಾಗಿರುವುದರಿಂದ ಮಂಗಳಾ ಕ್ರೀಡಾಂಗಣದ ಬಳಿಯಲ್ಲೇ ಕೇಂದ್ರ ಸ್ಥಾಪನೆ ಅಗತ್ಯವಿತ್ತು. ಅದರಂತೆ ಕರಾವಳಿ ಉತ್ಸವ ಮೈದಾನ ಬಳಿ ಸರಕಾರ ಸುಮಾರು 30 ಸೆಂಟ್ಸ್ ಜಾಗ ಮಂಜೂರು ಮಾಡಿದೆ. ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸುಮಾರು 8 ಕೋಟಿ ರೂ. ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಆಯುಷ್ ಮಿಷನ್‌ನಿಂದ ಶೇ. 60 ಮತ್ತು ರಾಜ್ಯದಿಂದ ಶೇ. 40ರಷ್ಟು ಅನುದಾನ ಬಿಡುಗಡೆಯಾಗಲಿದೆ.
ಅಂತಾರಾಷ್ಟ್ರೀಯ ದರ್ಜೆಯ ಕಟ್ಟಡ:
Related Articles
ಆಯುಷ್ ಕ್ರೀಡಾ ಔಷಧ ಕೇಂದ್ರಕ್ಕೆ ಸ್ಥಳೀಯವಾಗಿ ಮಾತ್ರವಲ್ಲದೆ ದೇಶದ ವಿವಿಧೆಡೆಯಿಂದ ಬರುವ ಕ್ರೀಡಾಪಟುಗಳು ಚಿಕಿತ್ಸೆಗಾಗಿ ಬರುವುದರಿಂದ ಫಿಟ್ನೆಸ್‌ಗೆ ಸಂಬಂಧಿಸಿದ ಕ್ರೀಡಾ ಪ್ರಯೋಗಾಲಯ, ಥೆರಪಿ ಸೆಂಟರ್, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ದರ್ಜೆಯ ಮೂಲ ಸೌಕರ್ಯ ಇರುವ ಕಟ್ಟಡ ನಿರ್ಮಾಣವಾಗಲಿದೆ.
ವೆನ್ಲಾಕ್‌ನಲ್ಲಿ ಒಪಿಡಿ:
ಮೊದಲ ಹಂತದಲ್ಲಿ ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಐದಾರು ಬೆಡ್‌ಗಳನ್ನು ಒಳಗೊಂಡ ಕೇಂದ್ರದ ಒಪಿಡಿ ವಿಭಾಗವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಸಿಬಂದಿ ಹಾಗೂ ಇತರ ಮೂಲಸೌಲಭ್ಯಗಳನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಹುದ್ದೆ ಮಂಜೂರಾಗಿದ್ದು, ನೇಮಕಾತಿ ಇನ್ನಷ್ಟೇ ಆಗಬೇಕಿದೆ. ವೇತನ ಸೇರಿದಂತೆ ಇತರ ಪ್ರಕ್ರಿಯೆಗಳೂ ನಡೆಯಬೇಕು.
ಫಿಟ್ನೆಸ್ ಪಾಲುದಾರಿಕೆ ಉದ್ದೇಶ:
ಆಯುಷ್ ಕ್ರೀಡಾ ಔಷಧ ಕೇಂದ್ರದ ಮೂಲಕ ಕ್ರೀಡಾಕೂಟಗಳಲ್ಲಿ ಫಿಟೆ°ಸ್ ಪಾಲುದಾರರಾಗಿ ಕೇಂದ್ರವನ್ನು ಪ್ರಚುರಪಡಿಸಲು ಉದ್ದೇಶಿಸಲಾಗಿದೆ. ಆದರಂತೆ ಮೊದಲಿಗೆ ಜಿಲ್ಲೆಯ ಒಂದು ತಂಡ (ವಿಶ್ವವಿದ್ಯಾನಿಲಯ ಅಥವಾ ಯಾವುದಾದರೂ ಕಾಲೇಜು)ಕ್ಕೆ ಫಿಟ್ನೆಸ್ ಪಾರ್ಟ್‌ನರ್ ಆಗಿ ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿಸಲಾಗುತ್ತದೆ. ಈ ಸಂಬಂಧ ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳು, ಕಾಲೇಜುಗಳು, ವಿ.ವಿ.ಗಳೊಂದಿಗೆ ಇಲಾಖಾ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. 2 ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಪಾಲುದಾರಿಕೆ, ಐದು ವರ್ಷದ ಬಳಿಕ ರಾಷ್ಟ್ರಮಟ್ಟದಲ್ಲಿ ಪಾಲುದಾರರಾಗಲು ಉದ್ದೇಶಿಸಲಾಗಿದೆ.
ಕೇಂದ್ರ ಹೇಗಿರುತ್ತದೆ?:
ಆಯುಷ್ ಕ್ರೀಡಾ ಔಷಧ ಕೇಂದ್ರದಲ್ಲಿ ಫಿಟೆ°ಸ್ ಮ್ಯಾನೇಜ್‌ಮೆಂಟ್ ಮತ್ತು ಇಂಜುರಿ ಮ್ಯಾನೇಜ್‌ಮೆಂಟ್ ಎನ್ನುವ ಎರಡು ವಿಭಾಗಗಳಿವೆ. ಆಟಗಾರನಿಗೆ ಅಗತ್ಯವಾಗಿರುವ ಫಿಟೆ°ಸ್ ಮಟ್ಟವನ್ನು ಅಂದಾಜಿಸಲು ಫಿಟೆ°ಸ್ ಲ್ಯಾಬ್ ಇರುತ್ತದೆ. ಅದರಲ್ಲಿ ಫಿಟ್ನೆಸ್ ಅಳೆಯುವ ಮಾಪನ, ಡಯಟ್, ಲೈಫ್‌ಸ್ಟೈಲ್ ಮ್ಯಾನೇಜ್‌ಮೆಂಟ್, ಆಹಾರ, ಔಷಧ, ಕೌನ್ಸೆಲಿಂಗ್, ಆತ್ಮವಿಶ್ವಾಸ ಹೆಚ್ಚಿಸುವುದು, ಆಯುಷ್ ಸಪ್ಲಿಮೆಂಟ್ ಮೊದಲಾದವು ಪ್ರಮುಖವಾಗಿವೆ.
ಆಯುಷ್ ಕ್ರೀಡಾ ಔಷಧ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಇಲಾಖೆಗೆ ಕಳುಹಿಸಿದ್ದು, ಅನುಮೋದನೆಗಾಗಿ ನಿರೀಕ್ಷಿಸಲಾಗುತ್ತಿದೆ. ಅನುಮೋದನೆ ಸಿಕ್ಕ ಬಳಿಕ ಅನುದಾನ ಬಿಡುಗಡೆಯಾಗಲಿದೆ. ಅನಂತರ ಟೆಂಡರ್ ಪ್ರಕ್ರಿಯೆ ನಡೆದು, ಮುಂದಿನ ವರ್ಷದ ಅಂತ್ಯದೊಳಗೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯುವ ಸಾಧ್ಯತೆಯಿದೆ.– ಡಾ| ಮೊಹಮ್ಮದ್ ಇಕ್ಬಾಲ್,ಆಯುಷ್ ವೈದ್ಯಾಧಿಕಾರಿ, ದ.ಕ.
-ಭರತ್ ಶೆಟ್ಟಿಗಾರ್