ಎಚ್.ಡಿ.ಕೋಟೆ: ತಾಲೂಕಿನಲ್ಲಿ ಬರದಿಂದ ಛಾಯೆಯಿಂದ ತತ್ತರಿಸಿದ್ದ ರೈತರಿಗೆ ಉತ್ತಮ ಮಳೆ ಆಗುತ್ತಿರುವುದರಿಂದ ಕ್ಷೇತ್ರಾದ್ಯಂತ ಶೇ. 80ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ರೈತರಲ್ಲಿ ಸಂತಸ ಮೂಡಿದೆ. ಮುಂದಿನ ಒಂದು ವಾರದಲ್ಲಿ ತಾಲೂ ಕಾದ್ಯಂತ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.
ಕಳೆದ ಮೂರು ವರ್ಷಗಳಿಂದ ತಲೆದೂರಿದ್ದ ತೀವ್ರ ಬರದಿಂದ ತತ್ತರಿಸಿದ್ದ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಕುಟುಂಬ ಸಮೇತರಾಗಿ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮಾರ್ಚ್ ತಿಂಗಳ ಪ್ರಾರಂಭದಲ್ಲೇ ಪೂರ್ವ ಮುಂಗಾರು ಮಳೆ ಬರದ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದರು, ತಡವಾದರೂ ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಮಳೆ ಪ್ರಾರಂಭವಾಗಿ ತಾಲೂಕಿನಾದ್ಯಂತ ಬಿದ್ದಿದೆ.
ಈ ಬಾರಿ ತಿಂಗಳ ಮೊದಲೇ ವರುಣದೇವನ ಕೃಪೆಯಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೂಡ ಹರ್ಷ ಚಿತ್ತರಾಗಿ ಸಂಭ್ರಮದಿಂದ ಜಮೀನುಗಳ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ಪ್ರತಿ ದಿನ ಪಟ್ಟಣ ಸೇರಿದಂತೆ ತಾಲೂಕಿನ ಹಂಪಾಪುರ ಹೋಬಳಿ ಹೊರತುಪಡಿಸಿ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕುಟುಂಬದ ಪುರುಷರಷ್ಟೇ ಅಲ್ಲದೇ ಮಹಿಳೆಯರು ಮಕ್ಕಳೆನ್ನದೇ ಇಡೀ ಕುಟುಂಬವೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಒಟ್ಟಾರೆ ಈಗಾಗಲೇ ಉತ್ತಮ ಮಳೆ ಯಾಗಿರುವುದರಿಂದ ಮುಂದೆಯೂ ಉತ್ತಮ ಮಳೆಯಾಗುವ ಮುನ್ಸೂಚನೆ ಕಂಡು ಬಂದಿರುವ ಹಿನ್ನೆಲೆ ಈ ಬಾರಿ ತಾಲೂಕಿನ ರೈತರು ಭರ್ಜರಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಇಲ್ಲಿಯವರೆಗೆ ಏನೇನು ಎಷ್ಟು ಬಿತ್ತನೆ?: ತಾಲೂಕಿನಲ್ಲಿ ಇಲ್ಲಿಯವರೆಗೆ 72ಮಿಮೀ ಮಳೆಯಾಗ ಬೇಕಿತ್ತು, ಅದರೆ ಮೇ 2 ಮಂಗಳವಾರ ದವರೆಗೆ 129 ಮಿಮೀ ಮಳೆಯಾಗಿದ್ದು, 57 ಮಿಮೀ ಹೆಚ್ಚುವರಿ ಮಳೆಯಾಗಿದ್ದು, ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಹತ್ತಿ ಬಿತ್ತನೆ 20 ಸಾವಿರ ಸಾವಿರ ಹೆಕ್ಟೇರ್, ತಂಬಾಕು 15 ಸಾವಿರ ಹೆಕ್ಟೇರ್, ಮುಸುಕಿನ ಜೋಳ 3 ಸಾವಿರ ಹೆಕ್ಟೇರ್, ವಿವಿಧ ದ್ವಿ-ದಳ ಧಾನ್ಯಗಳಾದ ಅಲಸಂದೆ 3 ಸಾವಿರ ಹೆಕ್ಟೇರ್, ಇತರೆ ದ್ವಿ-ದಳ ಧಾನ್ಯ ಬೆಳೆಗಳಾದ ಹಸಿರು, ಉದ್ದು, ತೋಗರಿ 500 ಹೆಕ್ಟೇರ್, ನೆಲಗಡಲೆ 50 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದೆ ಎಂದು ಇಲ್ಲಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.
69,500 ಸಾವಿರ ಹೆಕ್ಟೇರ್ ಗುರಿ: ಈ ವರ್ಷದ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಕೃಷಿ ಅಧಿಕಾರಿಗಳು 69,500 ಎಕ್ಟರ್ ಪ್ರದೇಶದಲ್ಲಿ ಹತ್ತಿ ಸೇರಿದಂತೆ ವಿವಿಧ ದ್ವಿ-ದಳ ಧಾನ್ಯಗಳ ಬಿತ್ತನೆ ಗುರಿ ಹೊಂದಿದ್ದು, ಹತ್ತಿ ಬಿತ್ತನೆ 30 ಸಾವಿರ ಹೆಕ್ಟೇರ್, ಮುಸೂಕಿನ ಚಜೋಳ 12 ಸಾವಿರ ಹೆಕ್ಟೇರ್, ರಾಗಿ 10 ಸಾವಿರ ಹೆಕ್ಟೇರ್, ವಿವಿಧ ದ್ವಿ-ದಳ ಧಾನ್ಯಗಳಾದ ಉದ್ದು, ಅಲಸಂದೆ ಹಸಿರು ಸೇರಿ 6 ಸಾವಿರ ಹೆಕ್ಟೇರ್, ತಂಬಾಕು 3.5 ಸಾವಿರ ಹೆಕ್ಟೇರ್, ಕಬ್ಬು 2 ಸಾವಿರ ಹೆಕ್ಟೇರ್, ಎಣ್ಣೆ ಕಾಳು ಗಳಾದ ಹುಚ್ಚೆಳ್ಳು, ನೆಲಗಡಲೆ, ಹರಳು ಸೇರಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಇದ್ದಕ್ಕೆ ಬೇಕಾದ ರಸಗೊಬ್ಬರ ಅಗತ್ಯಕ್ಕಿಂತಲೂ ಹೆಚ್ಚಿನ ದಾಸ್ತಾನು ಇದ್ದು, ಹಂತ ಹಂತಕ್ಕೆ ಬೇಕಾದ ಕ್ರಿಮಿನಾಶಕ ಕೂಡ ಆಗ್ರೋ ಮಳಿಗೆಗಳಲ್ಲಿ ದಾಸ್ತಾದೆ. ತಾಲೂಕಿನ ಭಾಗಶಃ ರೈತರು ಕೂಡ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮುಗಿಸಿದ್ದು, ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದು, ಮುಂದಿನ ವಾರದಿಂದ ಬಿತ್ತನೆ ರಾಗಿ ವಿತರಣೆ ಮಾಡಲಾಗುವುದು ಎಂದು ಇಲ್ಲಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಗುರುಪ್ರಸಾದ್ ಉದಯವಾಣಿಗೆ ತಿಳಿಸಿದ್ದಾರೆ.
* ಬಿ.ನಿಂಗಣ್ಣ ಕೋಟೆ