“ಅಪ್ಪ ನಾವ್ ಏನ್ ತಪ್ಪು ಮಾಡಿದ್ದೀವಿ ಅಂತ ನಮಗೆ ಈ ಶಿಕ್ಷೆ…’ ಹೀಗೆ ದುಗುಡ ತುಂಬಿದ ಮಾತುಗಳಲ್ಲಿ ಮಗಳು ಕೇಳುತ್ತಾಳೆ. “ಜಗತ್ತಿನಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಮ್ಮಾ ನಾವು ಅಸಹಾಯಕರು…’ ಹೀಗೆ ದುಃಖಭರಿತ ಮಾತುಗಳಲ್ಲಿ ಅಪ್ಪ ಹೇಳುತ್ತಾನೆ. ಮನಕಲಕುವ ಈ ಸಂಭಾಷಣೆ ಮತ್ತು ಆ ದೃಶ್ಯ ಮುಗಿಯೋ ಹೊತ್ತಿಗೆ, ಅಪ್ಪ, ಅಮ್ಮ ಮತ್ತು ಮಗಳ ಬದುಕೂ ಸಹ ಮುಗಿದು ಹೋಗಿರುತ್ತೆ! ತನ್ನದಲ್ಲದ ತಪ್ಪಿಗೆ ಆ ಮೂರು ಜೀವಗಳು ಜೀವ ಬಿಡೋಕೆ ಕಾರಣ ಒಂದು ಹಠವಿರುವ, ಚಟವಿರುವ ಮತ್ತು ಅಹಂಕಾರವಿರುವ ಹೆಣ್ಣು.
ಆ ಅಹಂಕಾರಿ ಹೆಣ್ಣು ಮತ್ತು ಅಮಾಯಕ ಗಂಡನ ನಡುವಿನ ಸೂಕ್ಷ್ಮತೆಯನ್ನು ಅತ್ಯಂತ ಆಪ್ತವಾಗಿ, ಅನುಕಂಪವಾಗಿ ಕಟ್ಟಿಕೊಡುವ ಮೂಲಕ ಅಸಹಾಯಕ ಗಂಡಸರ ಮೇಲಿನ ದೌರ್ಜನ್ಯವನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಪ್ರಯತ್ನ “ಧ್ವನಿ’ಯಲ್ಲಿ ಅಡಗಿದೆ. ಕಮರ್ಷಿಯಲ್ ಎಂಬ ಯೋಚನೆಯನ್ನು ಪಕ್ಕಕ್ಕಿಟ್ಟು, ವಾಸ್ತವತೆಯ ಸಾರವನ್ನು ಅರಿಯುವುದಾದರೆ, “ಧ್ವನಿ’ ಹತ್ತಿರವಾಗುತ್ತೆ. ಮೆಚ್ಚಿ ಮದುವೆ ಮಾಡಿಕೊಂಡ ಹೆಂಡತಿ, ಪರ ಪುರುಷನ ತೋಳಿನ ತೆಕ್ಕೆಗೆ ತನ್ನ ಭವಿಷ್ಯವನ್ನೇ ಕೊಟ್ಟಾಗ, ಗಂಡ ಎನಿಸಿಕೊಂಡನ ಮನಸ್ಥಿತಿ ಹೇಗಾಗಬೇಡ.
ಎಷ್ಟೇ ಮುಗ್ಧ ಗಂಡನಿದ್ದರೂ, ಅವನಿಗೂ ರೋಷ, ಕೋಪ ಸಾಮಾನ್ಯ. ಅಂಥದ್ದೇ ಸಂಗತಿಗಳು “ಧ್ವನಿ’ಯಲ್ಲೂ ಅಡಗಿವೆ. ಅದನ್ನಿಲ್ಲಿ ಚೌಕಟ್ಟಿನೊಳಗೆ ಎಲ್ಲವನ್ನೂ ಹೇಳುವ ಮೂಲಕ ಅಲ್ಲಲ್ಲಿ ಮನಸ್ಸನ್ನು ಭಾರವಾಗಿಸುವ, ಆಗಾಗ ಭಾವುಕತೆ ಹೆಚ್ಚಿಸುವುದರ ಜತೆಗೆ “ಧ್ವನಿ’ ಎತ್ತದಿದ್ದರೆ, ಎಂತೆಂಥ ಅನಾಹುತಕ್ಕೆ ದಾರಿಯಾಗುತ್ತೆ ಎಂಬ ಸೂಕ್ಷ್ಮವಿಚಾರವನ್ನೂ ಇಲ್ಲಿ ಬಿಚ್ಚಿಡಲಾಗಿದೆ. ಆ ಕಾರಣಕ್ಕೆ “ಧ್ವನಿ’ ಒಂದಷ್ಟು ಇಷ್ಟವಾಗುತ್ತಾ ಹೋಗುತ್ತೆ. ಸಾಮಾನ್ಯವಾಗಿ ಇಂತಹ ಕಥೆಯುಳ್ಳ ಚಿತ್ರಗಳನ್ನು ನೋಡಲು “ತಾಳ್ಮೆ’ ಬೇಕು. ಮೊದಲರ್ಧ ನೋಡುಗ ಖಂಡಿತ ಆ ತಾಳ್ಮೆ ಕಳೆದುಕೊಳ್ಳುತ್ತಾನೆ.
ಇನ್ನೇನು ಸೀಟಿಗೆ ಒರಗಿಕೊಳ್ಳಬೇಕೆನ್ನುವಷ್ಟರಲ್ಲೇ ಮಧ್ಯಂತರ ಬಂದು, ರಿಲ್ಯಾಕ್ಸ್ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತೆ. ದ್ವಿತಿಯಾರ್ಧದಲ್ಲಿ ಸಿಗುವ ಮೈಲೇಜೇ ಬೇರೆ. ಇಡೀ ಸಿನಿಮಾವನ್ನು ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ದ್ವಿತಿಯಾರ್ಧದಲ್ಲಿದೆ. ಒಂದು ಹೆಣ್ಣು ಮಾಡುವ ತಪ್ಪನ್ನು ಪ್ರಶ್ನಿಸುವುದೇ ತಪ್ಪು ಎಂಬ ವಿಷಯವನ್ನು ಇಲ್ಲಿ ಇನ್ನಷ್ಟು ಚೆನ್ನಾಗಿ ತೋರಿಸಬಹುದಿತ್ತು. ಹಾಗೆ ವಿಸ್ತಾರವಾಗಿ ಹೇಳಿದ್ದರೆ, “ಧ್ವನಿ’ಯ ತಾತ್ಪರ್ಯ ಪೂರ್ಣವಾಗಿ ಅರ್ಥವಾಗುತ್ತಿತ್ತೇನೋ? ಆದರೆ, ನಿರ್ದೇಶಕರಿಗೆ ಅದು ಅರ್ಥವಾಗಿದ್ದೇ ಅಷ್ಟು ಅನಿಸುತ್ತೆ.
ಆದರೂ, ದನಿ ಎತ್ತದ ಶೋಷಿತ ಗಂಡಸರು “ಧ್ವನಿ’ಯನ್ನೊಮ್ಮೆ ನೋಡಲ್ಲಡ್ಡಿಯಿಲ್ಲ. ಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಯೂ ತೋರಿಸಲು ಸಾಧ್ಯವಿತ್ತು. ಹೆಣ್ಣಿನ ಹಠ, ಚಟ, ಕೋಪ, ತಾಪಗಳಿಂದ ಒಬ್ಬ ಮುಗª ಗಂಡಸು ಹೇಗೆಲ್ಲಾ ಸಂಕಷ್ಟಕ್ಕೆ ಸಿಲುಕುತ್ತಾನೆ. ತನ್ನ ಕುಟುಂಬವನ್ನೂ ಆ ಸಂಕಷ್ಟಕ್ಕೆ ಸಿಲುಕಿಸಿ, ಕಳೆದುಕೊಳ್ಳುತ್ತಾನೆ ಎಂಬುದನ್ನು ತೋರಿಸಲು ನಿರ್ದೇಶಕರ ಪಟ್ಟ “ಹರಸಾಹಸ’ ಎದ್ದು ಕಾಣುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ಹೊರತುಪಡಿಸಿದರೆ, “ಧ್ವನಿ’ ಹೆಂಡತಿಯರ ದೌರ್ಜನ್ಯದಿಂದ ಬರ್ಬರ ಬದುಕನ್ನಾಗಿಸಿಕೊಂಡ ಗಂಡಸರನ್ನು ಪ್ರತಿಧ್ವನಿಯಾಗುವ ಸಣ್ಣ ಲಕ್ಷಣವೂ ಇದೆ.
ಅರ್ಚಕರೊಬ್ಬರ ಪುತ್ರ ವಾಸುದೇವ (ಚಂದನ್ ಶರ್ಮ) ಸಾಫ್ಟ್ವೇರ್ ಎಂಜಿನಿಯರ್. ತನ್ನ ಕಚೇರಿಯಲ್ಲೇ ಕೆಲಸ ಮಾಡುವ ಜಯ (ಇತಿ ಆಚಾರ್ಯ)ಳನ್ನು ಇಷಟಪಟ್ಟು ಮದ್ವೆ ಆಗ್ತಾನೆ. ಆಕೆಯದ್ದು ಪಬ್ಬು, ಕ್ಲಬ್ಬಿನ ಖಯಾಲಿ ಜತೆ ಹಠ, ಚಟ. ಅವನದ್ದು ಮುಗ್ಧತೆ ಲೈಫು. ಹೆಂಡತಿ ಇನ್ನೊಬ್ಬನ ಜತೆ ಸರಸ ಸಲ್ಲಾಪ ಆಡುವುದನ್ನು ಕಂಡು ಕೆಂಡಮಂಡಲವಾಗುತ್ತಾನೆ. ಅದನ್ನು ವಿರೋಧಿಸುವ ಆಕೆ, ವರದಕ್ಷಿಣೆ ಕಿರುಕುಳ ಕೇಸು ಹಾಕಿ, ಗಂಡ ಹಾಗೂ ಅವನ ಅಪ್ಪ, ಅಮ್ಮ, ತಂಗಿಯನ್ನೂ ಜೈಲಿಗೆ ಕಳಿಸುತ್ತಾಳೆ.
ಆಮೇಲೆ ಅವನ ಧ್ವನಿ ಹೊರಬರುತ್ತೋ ಇಲ್ಲವೋ ಅನ್ನೋದೇ ಕಥೆ. ಚಂದನ್ ಶರ್ಮ ಡೈಲಾಗ್ ಡಿಲವರಿಯಲ್ಲಿ ಚಂದ ಕಾಣಿಸ್ತಾರೆ. ನಟನೆಯಲ್ಲಿನ್ನೂ ಸ್ವಲ್ಪ ಚೇತರಿಸಿಕೊಳ್ಳಬೇಕು. ಇತಿ ಆಚಾರ್ಯ ಥೇಟ್ “ಕೆಟ್ಟ’ ಹೆಂಡತಿ ಅನ್ನುವಂತೆ ಕಾಣಿಸಿಕೊಂಡಿದ್ದಾರೆ. ರಮೇಶ್‌ಭಟ್ ಮತ್ತು ವಿನಯಾ ಪ್ರಸಾದ್ ಪಾತ್ರವನ್ನು ಜೀವಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳಾವೂ ಅಷ್ಟೊಂದು ಗಮನ ಸೆಳೆಯುವುದಿಲ್ಲ. ರಾಜ್‌ಭಾಸ್ಕರ್ ಸಂಗೀತ ಧ್ವನಿಸವುದಿಲ್ಲ. ಆರ್.ಗಿರಿ ಅವರ ಕ್ಯಾಮೆರಾ ಪರವಾಗಿಲ್ಲ.
ಚಿತ್ರ: ಧ್ವನಿ
ನಿರ್ದೇಶನ: ಸೆಬಾಸ್ಟಿನ್ ಡೇವಿಡ್
ನಿರ್ಮಾಣ: ಲಯನ್ ಆರ್. ರಮೇಶ್ ಬಾಬು
ತಾರಾಗಣ: ಚಂದನ್ ಶರ್ಮ, ರಮೇಶ್ ಭಟ್, ವಿನಯಾ ಪ್ರಕಾಶ್, ಇತಿ ಆಚಾರ್ಯ, ಸೌಜನ್ಯ, ಚೈತ್ರಾ ಇತರರು
* ವಿಜಯ್ ಭರಮಸಾಗರ