Advertisement
ಇಲ್ಲಿ ಮಾಮೂಲಿ ಕಥೆಗಿಂತ ಕೊಂಚ ಭಿನ್ನವಾಗಿ ಹೇಳುವ ಪ್ರಯತ್ನ ಮಾಡಿರುವುದೇ ಹೆಚ್ಚುಗಾರಿಕೆ. ಶೀರ್ಷಿಕೆ ಹೇಳುವಂತೆ ಇದೊಂದು ರಾತ್ರಿ ವೇಳೆ ನಡೆಯುವ ಕಥೆ. ಕೇವಲ ಆರು ಗಂಟೆಯಲ್ಲಿ ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಅದನ್ನು ಸರಳವಾಗಿ ಹೇಳಬಹುದಿತ್ತಾದರೂ, ನಿರ್ದೇಶಕರು ಕೊಂಚ ರಿಸ್ಕ್ ತಗೊಂಡಿದ್ದಾರೆ.
Related Articles
Advertisement
ಅದೊಂದೇ ಸಮಾಧಾನದ ವಿಷಯ. ಉಳಿದಂತೆ ಸಿನಿಮಾದುದ್ದಕ್ಕೂ ಕಿರಿಕಿರಿ ಅಂದರೆ ಅದು ಹಿನ್ನೆಲೆ ಸಂಗೀತ. ಕೆಲವು ಕಡೆ ಮಾತುಗಳನ್ನೇ ನುಂಗಿ ಹಾಕಿದೆ. ಅಷ್ಟೇ ಅಲ್ಲ, ಫೈಟ್‌ನಲ್ಲೂ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿ, ಚೆಂದದ ಫೈಟ್‌ಗೆ ಎಫೆಕ್ಟೇ ಇಲ್ಲವಂತೆ ಮಾಡಿದೆ. ಅದನ್ನು ಬಿಟ್ಟರೆ, “ನೈಟ್ ಔಟ್’ ಸುಮ್ಮನೆ ನೋಡಿಸಿಕೊಂಡು ಹೋಗುತ್ತಾದರೂ, ಕೊನೆಯ ಟ್ವಿಸ್ಟ್‌ಗಾಗಿ ಅಷ್ಟು ಹೊತ್ತು ಕಾದು ಕುಳಿತುಕೊಳ್ಳಲೇಬೇಕು.
ಆ ಟ್ವಿಸ್ಟ್‌ನ ಕುತೂಹಲವಿದ್ದರೆ, “ನೈಟ್ ಔಟ್’ ಹೋಗಿಬರಬಹುದು. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದರೂ, ನಿರೀಕ್ಷಿಸಿದಷ್ಟು ಥ್ರಿಲ್ ಸಿಗಲ್ಲ. ಆರು ಗಂಟೆ ನಡೆಯುವ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಂದಕ್ಕೊಂದು ಲಿಂಕ್ ಕೊಡುವ ಮೂಲಕ ಗೊಂದಲ ಇಲ್ಲದಂತೆ ನಿರೂಪಿಸಿರುವುದು ನಿರ್ದೇಶಕರ ಜಾಣತನ.
ಚಿತ್ರದಲ್ಲಿ ಆಟೋ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೇ ಒಂದು ತಿರುವು ಕೂಡ ಇದೆ. ಗೆಳೆಯನೊಬ್ಬನ ಕಥೆ ಮತ್ತು ವ್ಯಥೆ ಮೂಲಕ ಚಿತ್ರ ಸಾಗುತ್ತದೆ. ನಾಯಕ ಗೋಪಿ ಒಬ್ಬ ಆಟೋ ಡ್ರೈವರ್. ಅವನ ಗೆಳೆಯ ಅಕ್ಷಯ್ ಕಾಲೇಜು ವಿದ್ಯಾರ್ಥಿ. ಇವರೊಂದಿಗೆ ಮೂರ್‍ನಾಲ್ಕು ಜನ ಗೆಳೆಯರ ಕಾರುಬಾರು.
ಮಧ್ಯಮ ವರ್ಗದ ಹುಡುಗರ ಬದುಕು, ಬವಣೆ ಜೊತೆಗೆ ಪ್ರೀತಿ ಗೀತಿ ಇತ್ಯಾದಿ ವಿಷಯಗಳೂ ಇಲ್ಲಿ ಇಣುಕುತ್ತವೆ. ಒಂದು ಸುಂದರ ಹುಡುಗಿಯ ಪ್ರೀತಿ ಪಡೆಯಲು ಹರಸಾಹಸ ಪಡುವ ಗೋಪಿ, ಆ ಪ್ರೀತಿಯನ್ನು ಪಡೆದ ಬಳಿಕ ಲೈಫಲ್ಲಿ ಏನೆಲ್ಲಾ ಅನುಭವಿಸುತ್ತಾನೆ. ತನ್ನ ಗೆಳೆಯನೊಂದಿಗೆ ಹಂಚಿಕೊಳ್ಳುವ ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಏನು ಎಂಬುದು ಸಸ್ಪೆನ್ಸ್.
ಸಿಂಪಲ್ ಕಥೆಯಲ್ಲೊಂದು ನಿರೀಕ್ಷಿಸದ ಟ್ವಿಸ್ಟ್ ಇದೆ. ಕೊನೆಯ ಟ್ವಿಸ್ಟ್ ತಿಳಿಯಲು ಇಡೀ ಚಿತ್ರವನ್ನು ತಾಳ್ಮೆಗೆಡಿಸಿಕೊಳ್ಳದೆ ನೋಡಬೇಕಷ್ಟೇ. ಭರತ್ ಇಲ್ಲಿ ಒಬ್ಬ ಗೆಳೆಯನಾಗಿ, ಭಗ್ನಪ್ರೇಮಿಯಾಗಿ ಗಮನಸೆಳೆಯುತ್ತಾರೆ. ಚೇಸಿಂಗ್ ದೃಶ್ಯದಲ್ಲಿ ಇನ್ನಷ್ಟು ಫೋರ್ಸ್ ಆಗಿ ಓಡುವುದನ್ನು ಕಲಿಯಬೇಕಿತ್ತು. ಉಳಿದಂತೆ ಫೈಟ್‌ನಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಅಕ್ಷಯ್ ಇಲ್ಲಿ ಸಿಕ್ಕ ಪಾತ್ರವನ್ನು ಸರಿದೂಗಿಸಿಕೊಂಡು ಹೋಗಿದ್ದಾರೆ.
ಶ್ರುತಿ ಗೊರಾಡಿಯ ಪಾತ್ರಕ್ಕೆ ಇನ್ನಷ್ಟು ಜೀವ ತುಂಬಬಹುದಾಗಿತ್ತು. ಉಳಿದಂತೆ ಕಡ್ಡಿಪುಡಿ ಚಂದ್ರು, ಆಶಾರಾಣಿ ಒಂದೆರೆಡು ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಸಣ್ಣ ನಗುವಿಗೆ ಮೋಸವಿಲ್ಲ. ಸಮೀರ್ ಕುಲಕರ್ಣಿ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಹೆಚ್ಚು ಒತ್ತು ಕೊಡಬಹುದಾಗಿತ್ತು. ಅರುಣ್ ಕೆ. ಅಲೆಕ್ಸಾಂಡರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಬೆಂಗಳೂರಿನ ಕಲರ್‌ಫುಲ್ ರಾತ್ರಿ ಕಂಗೊಳಿಸಿದೆ.
ಚಿತ್ರ: ನೈಟ್ ಔಟ್ನಿರ್ಮಾಣ: ಲಕ್ಷ್ಮೀ ನವೀನ್, ನವೀನ್ ಕೃಷ್ಣ
ನಿರ್ದೇಶನ: ರಾಕೇಶ್ ಅಡಿಗ
ತಾರಾಗಣ: ಭರತ್, ಅಕ್ಷಯ್ ಪವಾರ್, ಶ್ರುತಿ ಗೊರಾಡಿಯ, ಕಡ್ಡಿಪುಡಿ ಚಂದ್ರು, ಆಶಾರಾಣಿ, ಉಮಾ, ಚಂದನ್ ವಿಜಯ್, ಸಾರಿಕಾ ಇತರರು. * ವಿಜಯ್ ಭರಮಸಾಗರ