ಬುದ್ಧಿಮಾಂದ್ಯ ಮಗನನ್ನು 43 ವರುಷದಿಂದ ಪುಟ್ಟ ಮಗುವಂತೆ ಸಲಹುತ್ತಿರುವ ಮಹಾತಾಯಿಯ ಕತೆ ಇದು. ಕಡೇಪಕ್ಷ, ಆಕೆಯ ಕಷ್ಟಕ್ಕೆ ದೇವರೂ ಕಿವಿಗೊಟ್ಟಿಲ್ಲ ಎನ್ನುವುದು ಬೇಸರದ ಸಂಗತಿ…
ಮಂಚದ ಮೇಲೆ ಮಲಗಿದ ಪುಟ್ಟ ಮಗು ಅಳುತ್ತದೆ. ಕಾರಣವಿಲ್ಲದೆ ಅದು ಜೋರಾಗಿ ಕಿರುಚಿಕೊಂಡಾಗ, ಅಮ್ಮನ ಕಣ್ಣಲ್ಲಿ ನೀರು ಜಿನುಗುತ್ತದೆ. ಹಿತ್ತಲಿನಲ್ಲಿ ಏನೋ ಕೆಲಸ ಮಾಡುತ್ತಿದ್ದ ಅಮ್ಮ, ಆ ಮಗುವಿಗೆ ಏನಾಯಿತೋ ಎಂದು ಆತಂಕಿತಳಾಗಿ ಓಡಿ ಬರುತ್ತಾಳೆ. “ಏನಾಯಿತು, ಕಂದ?’ ಅಂತ ಕೇಳಿದರೆ, ಅದು ಗೋಣು ಅಲುಗಾಡಿಸಿಯೂ ಉತ್ತರಿಸುವುದಿಲ್ಲ. ಅಷ್ಟಕ್ಕೂ ಆ ಮಗುವಿಗೆ, ಅಮ್ಮ ಏನು ಹೇಳುತ್ತಿದ್ದಾಳೆಂದೇ ಗೊತ್ತಾಗುವುದಿಲ್ಲ. ಬಹುಶಃ ಹಸಿವಾಗಿರಬೇಕೇನೋ ಅಂತಂದುಕೊಂಡು, ಊಟದ ತಟ್ಟೆ ಮುಂದಿಟ್ಟರೆ, ಅದು ಉಣ್ಣುವುದಿಲ್ಲ. ಎಲ್ಲರಂತೆ ಉಣ್ಣಲೂ ಅದಕ್ಕೆ ಬರುವುದಿಲ್ಲ. ಅಮ್ಮನೇ ಊಟ ಮಾಡಿಸಬೇಕು. ಆಗ ಅದರ ಮೊಗದಲ್ಲಿ ಕಂಡೂ ಕಾಣದಂಥ ನಗು ಮೂಡುತ್ತದೆ.
ಇಲ್ಲಿ “ಮಗು’ವಿನ ವಯಸ್ಸು 43! ಮಗ ದೊಡ್ಡವನಾಗಿ ಬೆಳೆದರೂ, ಆತ ಮಗುವಿನಂತೆಯೇ ವರ್ಸಿಸುತ್ತಿದ್ದಾನೆ. ಆ ಮಗನ ಹೆಸರು ಶ್ರೀನಿವಾಸ. ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು, ಆತನ ಎಲ್ಲ ಕೀಟಲೆಗಳನ್ನು ಸಹಿಸಿಕೊಂಡೂ, ನೋವುಗಳಿಗೆ ಕಿವಿಗೊಟ್ಟು, ವಾತ್ಸಲ್ಯದಿಂದ ಸಲಹುತ್ತಿರುವ ಆ ಮಹಾಮಾತೆಯೇ ಲಕ್ಷ್ಮಿದೇವಮ್ಮ.
ಈ ತಾಯಿ- ಮಗ ವಾಸವಿರುವುದು, ಬೆಂಗಳೂರಿನ ಮಾಗಡಿ ಸಮೀಪದ ಕುದೂರು- ಎಚ್.ಎಂ. ರೇವಣ್ಣ ನವಗ್ರಾಮದಲ್ಲಿ. ಶ್ರೀನಿವಾಸ ಎಲ್ಲರಂತೆ ತಾಯಿಯ ಗರ್ಭದಿಂದ ಜನಿಸಿದಾಗ ಆರೋಗ್ಯವಂತನಾಗಿದ್ದ. ಬೇರೆಲ್ಲ ಕಂದಮ್ಮಗಳಂತೆ ಮುದ್ದು ಮುದ್ದಾಗಿದ್ದ. ಎರಡು ವರ್ಷದವನಾಗಿದ್ದಾಗ, ತಾಯಿಯ ತಮ್ಮ ಈ ಮಗುವಿನ ಎರಡೂ ಕೈಗಳನ್ನು ಹಿಡಿದು, ಗಿರಗಿಟ್ಲೆ ಆಡಿಸುವಾಗ, ಕೈಜಾರಿತು. ದುರಾದೃಷ್ಟ… ಮೋರಿಯ ಕಲ್ಲಿನ ಮೇಲೆ ಮಗು ಬಿದ್ದು, ಅದರ ತಲೆಗೆ ತೀವ್ರ ಪೆಟ್ಟಾಯಿತು. ಕೂಡಲೇ ತುರ್ತು ಚಿಕಿತ್ಸೆಗೆಂದು ನಿಮ್ಹಾನ್ಸ್‌ಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ವೈದ್ಯರು ಹೇಳಿದರು, “ಮೆದುಳಿಗೆ ಹೆಚ್ಚು ಹಾನಿಯಾಗಿದೆ. ಹಾಗಾಗಿ, ಭವಿಷ್ಯದಲ್ಲಿ ಮಗುವಿನ ದೇಹವೇನೋ ಬೆಳೆಯುತ್ತದೆ. ಆದರೆ, ಬುದ್ಧಿ ಮಾತ್ರ ಮಗುವಿನ ರೀತಿಯಲ್ಲಿಯೇ ಇರುತ್ತದೆ’!
“ಸದ್ಯ, ಮಗು ಉಳಿಯಿತಲ್ಲ’ ಎಂದು ಸಮಾಧಾನಪಟ್ಟ ಲಕ್ಷಿ¾ದೇವಮ್ಮ, ಇಂದಿಗೂ ಶ್ರೀನಿವಾಸನನ್ನು ಪುಟ್ಟ ಮಗನಂತೆ ಸಾಕುತ್ತಲೇ ಬಂದಿದ್ದಾರೆ. ಶ್ರೀನಿವಾಸನಿಗೆ ಅಳುವುದು, ನಗುವುದು ಬಿಟ್ಟರೆ ಬೇರೇನೂ ತಿಳಿಯುವುದೂ ಇಲ್ಲ. ಮಾತು ಕೂಡ ಬರುವುದಿಲ್ಲ. ಹೀಗೆ ಪ್ರಪಂಚದ ಅರಿವೇ ಇಲ್ಲದ ಮಗನಿಗೆ ಊಟ ಮಾಡಿಸುವುದು, ಶೌಚಕ್ಕೆ ಕರೆದೊಯ್ಯುವುದು, ಸ್ನಾನ ಮಾಡಿಸುವುದು, ಬಟ್ಟೆ ಬದಲಿಸುವ ಕ್ರಿಯೆಗಳನ್ನು ಲಕ್ಷ್ಮೀದೇವಮ್ಮ ಯಾವತ್ತೂ ತಪ್ಪಿಸಿಲ್ಲ. ಲಕ್ಷ್ಮೀದೇವಮ್ಮ, ತಾಯಿಯ ತಮ್ಮನನ್ನೇ ಮದುವೆಯಾದವರು. ಈಕೆ ವಿಕಲಚೇತನ ಮಗನ ಸೇವೆಯಲ್ಲಿ ನಿರಂತರ ತೊಡಗಿರುವುದನ್ನು ಕಂಡ ಪತಿರಾಯ, ಪತ್ನಿಯನ್ನು ತೊರೆದು ಬೇರೆ ಮದುವೆಮಾಡಿಕೊಂಡು ಹೊರಟುಹೋದ. ಬಡತನ ರೇಖೆಗಿಂತಲೂ ಕಡಿಮೆ ಆದಾಯದ ಹಿನ್ನೆಲೆಯಲ್ಲಿ ಇವರೀಗ ಜಂಗ್‌ಶೀಟಿನ ಮನೆಯೊಂದರಲ್ಲಿ ವಾಸವಿದ್ದಾರೆ.
“ಮಗನನ್ನು ಮನೆಯಲ್ಲಿ ಬಂಧಿಸಿ, ಬೀಗಹಾಕಿಕೊಂಡು ಹೊರಗೆ ದುಡಿಮೆ ಹೋಗುವಾಗ ಕಣ್ಣೀರು ಉಕ್ಕುತ್ತದೆ’ ಎನ್ನುವುದು ಅವರ ನೋವಿನ ಮಾತು. ಶಿಶು ಅಭಿವೃದ್ದಿ ಕಲ್ಯಾಣ ಇಲಾಖೆಯಿಂದ ವಿಕಲಚೇತನರ ಭತ್ಯೆಯಿಂದ ಆಗಾಗ್ಗೆ ಬರುವ ಒಂದು ಸಾವಿರ ರೂಪಾಯಿಯಲ್ಲಿ, ಅಂತ್ಯೋದಯದ ಪಡಿತರ ಚೀಟಿಯಿಂದ ದಿನಸಿ ಕೊಂಡು ಈಕೆ ಜೀವನ ಕಳೆಯುತ್ತಿದ್ದಾರೆ.
ಇವರ ಈ ಅಸಹಾಯಕ ಸ್ಥಿತಿ ಕಂಡು, ಕಟ್ಟಿಕೊಂಡ ಗಂಡ, ಬಂಧು- ಬಳಗ… ಎಲ್ಲರೂ ದೂರ ಉಳಿದಿದ್ದಾರೆ. ತಾಯಿ- ಮಗನ ಸಂಕಷ್ಟ ಆಲಿಸಲು ಇಲ್ಲಿ ಬೇರೆ ಕಿವಿಗಳಿಲ್ಲ.
– ಖಂಡಪರಶು ಮಾಗಡಿ