ಬಸವನಬಾಗೇವಾಡಿ: ಡೋಣಿ ನದಿ ಅಕ್ಕ ಪಕ್ಕದ ಹತ್ತಾರು ಹಳ್ಳಿ ಜನರಿಗೆ ಪ್ರವಾಹದಿಂದ ಹೊರ ಬರಲು ಸಾಧ್ಯವಾಗದೆ ಇರುವಂತ ಸಂದರ್ಭದಲ್ಲಿ ಶಾಶ್ವತವಾಗಿ ಪರಿಹಾರ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಡೋಣಿ ನದಿಗೆ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ಡೋಣೂರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಹಾಗೂ ನಮ್ಮ ಗ್ರಾಮ, ನಮ್ಮ ರಸ್ತೆ, ಗಾಂಧಿ ಪಥ, ಗ್ರಾಮ ಪಥ ಯೋಜನೆಯಡಿ 11 ಕೋಟಿ ಅನುದಾನದಲ್ಲಿ ಯಂಭತ್ನಾಳದಿಂದ ಉಕ್ಕಲಿವರೆಗೆ ಬ್ರಿಡ್ಜ್, ರಸ್ತೆ ನಿರ್ಮಾಣ ಉದ್ಘಾಟನೆ ಹಾಗೂ ಉಕ್ಕಲಿ ಗ್ರಾಮದಲ್ಲಿ ಸಿಸಿರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಡೋಣಿ ನದಿ ಅಕ್ಕ ಪಕ್ಕದ ಉಕ್ಕಲಿ, ಹತ್ತರಕಿಹಾಳ, ಯಂಭತ್ನಾಳ, ಡೋಣೂರ, ದೇಗಿನಾಳ ಸೇರಿದಂತೆ ಹತ್ತಾರು ಹಳ್ಳಿಗಳು ಪ್ರವಾಹಕ್ಕೆ ಒಳಗಾಗುತ್ತಿದ್ದವು. 2013ರಲ್ಲಿ ಆಯ್ಕೆಯಾದ ಬಳಿಕ ಡೋಣಿ ನದಿಗೆ ಬ್ರಿಡ್ಜ್ ನಿರ್ಮಾಣ ಮಾಡಲಾಯಿತು. ಇದರಿಂದ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ, ಹುಬ್ಬಳ್ಳಿ- ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲಾ ಮುಖ್ಯರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಜರ್ಮನಿ ದೇಶ ಅಷ್ಟು ಸುಧಾರಿಸಲು ಮತ್ತು ಮುಂದುವರೆದ ದೇಶವಾಗಲು ಪ್ರಮುಖ ಕಾರಣ ಜರ್ಮನಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಯಿತು. ಹೀಗಾಗಿ ಆದೇಶ ಔದ್ಯೋಗಿಕರಣ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ 2 ರಾಜ್ಯ ಹೆದ್ದಾರಿ, 7 ಪ್ರಮುಖ ರಸ್ತೆ ನಿರ್ಮಾಣ ಮಾಡಿದ್ದು ಕಾರ್ಖಾನೆಗಳು ಬರಲು ಸಾಧ್ಯವಾಗಿದೆ.
ಇದರ ಜೊತೆಯಲ್ಲೇ ಕುಡಿಯುವ ನೀರು, ನೀರಾವರಿ, ಪ್ರವಾಸೋದ್ಯಮ, ಸಾರಿಗೆ, ಶೈಕ್ಷಣಿಕ, ವಿದ್ಯುತ್, ಆಸರೆ ಸೇರಿದಂತೆ ಅನೇಕ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಜನರ ಸಹಕಾರ ಅಗತ್ಯ ಎಂದರು.
ಯರನಾಳದ ಗುರು ಸಂಗನಬಸವ ಶ್ರೀಗಳು ಸಾನ್ನಿಧ್ಯ, ಉಕ್ಕಲಿ ಗ್ರಾಪಂ ಅಧ್ಯಕ್ಷ ಅಶೋಕ ಇಟ್ಟಗಿಹಾಳ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಹಿರಿಯ ಮುಂಖಡ ಅಣ್ಣಾಸಾಹೇಬಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಚಂದ್ರಶೇಖರಗೌಡ ಪಾಟೀಲ, ರಾಜುಗೌಡ ಪಾಟೀಲ, ಅಲಾಲಬಿ ಕೊರಸೆ, ಸುಭಾಷ್ ಕಲ್ಯಾಣಿ, ಶ್ರೀಶೈಲ ಸಜ್ಜನ, ಅಪ್ಪಾಸಾಹೇಬ ಇಂಡಿ, ಬಾಳಪ್ಪ ಮಸಳಿ, ಶ್ರೀಶೈಲ ವಾಲೀಕಾರ, ಬಸವರಾಜ ಸೋಮಪುರ, ಅಶೋಕ ಪಾಟೀಲ, ಸಿದ್ದು ಸಜ್ಜನ, ನಿಂಗನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶಾರದಾ ಬೊಮ್ಮನಹಳ್ಳಿ, ಸಂಜಯ ಪವಾರ, ಪ್ರೇಮಸಿಂಗ್ ಚವ್ಹಾಣ, ಶಂಕರಗೌಡ ಪಾಟೀಲ, ಸಿ.ಬಿ. ಚಿಕ್ಕಲಕಿ, ಶಿವಾನಂದ ಮಂಗಾನವರ, ಶಿವಾನಂದ ಮುರನಾಳ, ಬಸವರಾಜ ಸಿಂದಗಿ, ಬಸಪ್ಪ ಹನುಮಶೆಟ್ಟಿ ಸೇರಿದಂತೆ ಅನೇಕರು ಇದ್ದರು. ಅಪ್ಪು ಆಸಂಗಿ ಸ್ವಾಗತಿಸಿದರು. ಸಿ.ಜಿ. ಹಿರೇಮಠ ನಿರೂಪಿಸಿದರು.