ಅಫಜಲಪುರ: ಪಿಂಚಣಿ, ಪಹಣಿ, ರೇಷನ್ ಕಾರ್ಡ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಂಬಂಧ ಪಟ್ಟಂತೆ ಗ್ರಾಮೀಣ ಭಾಗದ ಜನ ನಿತ್ಯ ತಾಲೂಕು ಕೇಂದ್ರಕ್ಕೆ ಅಲೇದಾಡಿ ಸುಸ್ತಾಗುತ್ತಾರೆ, ಗ್ರಾಮೀಣ ಭಾಗದಲ್ಲೇ ಈ ಸಮಸ್ಯೆಗಳಿಗೆ ಪರಿಹಾರ ಇರುವುದರಿಂದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರವನ್ನು ಕಲ್ಪಿಸಿದ್ದೇವೆ ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ್ ತಿಳಿಸಿದರು.
ತಾಲೂಕಿನ ಕರ್ಜಗಿ ಹೋಬಳಿಯ ಬಂಕಲಗಾ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂಗವಿಕಲ, ವಿಧವಾ ವೇತನನ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟು 40 ಅರ್ಜಿಗಳು ಬಂದಿದ್ದವು. ಈ ಪೈಕಿ 26 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದ್ದೇವೆ. ಉಳಿದ ಅರ್ಜಿಗಳನ್ನು 72 ಗಂಟೆಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತದೆ ಎಂದರು.
ಗ್ರಾಮಸ್ಥರು ಗ್ರಾಮದಲ್ಲಿ ಶೌಚಾಲಯ ಸಮಸ್ಯೆ, ಸ್ಮಶಾನ ಭೂಮಿ ಸಮಸ್ಯೆ ಇದೆ ಎಂದು ಅ ಧಿಕಾರಿಗಳಿಗೆ ಮನವರಿಕೆ ಮಾಡಿದರು. ಇದಕ್ಕೆ ತಹಶೀಲ್ದಾರ್ ಪ್ರತಿಕ್ರಿಯಿಸಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ಸರಿಪಡಿಸಲಾಗುತ್ತದೆ ಎಂದರು.
ಗ್ರಾ.ಪಂ ಅಧ್ಯಕ್ಷ ಬಸವರಾಜ ಮೋಟೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ರೂಪಾ ಹೊಸಮನಿ, ತಾಪಂ ಎಡಿ ರಮೇಶ ಪಾಟೀಲ್, ಜೆಸ್ಕಾಂ ಎಇಇ ನಾಗರಾಜ್ ಸೇರಿದಂತೆ ತಾಲೂಕು ಮಟ್ಟದ ಅ ಧಿಕಾರಿಗಳು ಭಾಗಿಯಾಗಿದ್ದರು. ಪಿಡಿಒ ಸಾವಿತ್ರಿ ಮೇತ್ರೆ ಸ್ವಾಗತಿಸಿದರು. ಚಂದ್ರಕಾಂತ ಹೊಸಮನಿ ನಿರೂಪಿಸಿದರು. ಆರ್.ಐ. ಆನಂದ ನೆರಳೆ ವಂದಿಸಿದರು.