Advertisement

ಕೋವಿಡ್ ಸೋಲಿಸಿದ ಸೋಲಿಗರು!

12:59 AM Dec 22, 2020 | mahesh |

ಚಾಮರಾಜನಗರ: ಮಾಯಾವಿ ಕೊರೊನಾಕ್ಕೆ ಜಗತ್ತು ಮುಗ್ಗರಿಸಿ ಬಿದ್ದಿದೆ. ಜೀವಗಳನ್ನು ಜಗ್ಗಾಡಿದೆ. ಆದರೆ ಕರುನಾಡಿನ ಈ ಒಂದು ಭಾಗಕ್ಕೆ ಮಾತ್ರ ಕೋವಿಡ್ ಕಾಲಿಟ್ಟಿಲ್ಲ!

Advertisement

ಇದು ಕಾಡನ್ನೇ ನಂಬಿಕೊಂಡು, ಬೆಟ್ಟವನ್ನೇ ಜೀವ ಮಾಡಿಕೊಂಡ ಸೋಲಿಗರು ಕೋವಿಡ್ ಗೆದ್ದ ಕಥೆ. ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ನಿವಾಸಿ ಬುಡಕಟ್ಟು ಜನರು ಈ ಸೋಲಿಗರು. 27 ಪೋಡುಗಳಲ್ಲಿನ 10 ಸಾವಿರ ಮಂದಿಯಲ್ಲಿ ಒಬ್ಬರಿಗೂ ಕೋವಿಡ್ ಬಾಧಿಸಿಲ್ಲ. ದೇಶವಿಡೀ ಆತಂಕದ ಉಸಿರು ಬಿಡುತ್ತಿದ್ದಾಗ ಕಾಡಿನಲ್ಲಿ ಯಾವ ಭಯವೂ ಇಲ್ಲದೆ ಸೋಲಿಗರು ನೆಮ್ಮದಿಯಿಂದ ಇದ್ದರು.

ಪ್ರವಾಸಿಗರೇ, ನಿಲ್ಲಿ!
ಅರಣ್ಯಕ್ಕೆ ಪ್ರವಾಸಿಗರ ಭೇಟಿ ಬಂದ್‌ ಮಾಡಿರುವುದು ಸೋಲಿಗರನ್ನು ಪಾರು ಮಾಡಿತು. ಅರಣ್ಯಾಧಿಕಾರಿಗಳು ಪೋಡುಗಳಿಗೆ ತೆರಳಿ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದರು.

ಆದೇಶ ಪಾಲನೆ
ಅರಣ್ಯ ಇಲಾಖೆಯವರು ಜಾಗೃತಿ ಮೂಡಿಸಿದ್ದರಿಂದ ಅವರು ಹೇಳಿ ದಂತೆ ನಡೆದುಕೊಂಡಿದ್ದೇವೆ. ಇಲ್ಲಿಯ ವರೆಗೆ ನಮ್ಮ ಪೋಡುಗಳಲ್ಲಿ ಯಾರಿಗೂ ಕೋವಿಡ್ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಕೆ. ಗುಡಿಯ ಕನ್ನೇರಿ ಪೋಡಿನ ಮುಖ್ಯಸ್ಥ ಕೋಣುರೇಗೌಡ.

ಗೆದ್ದದ್ದು ಹೇಗೆ?
ಮಾರ್ಚ್‌ನಲ್ಲಿ ಲಾಕ್‌ಡೌನ್‌ ಮಾಡಲಾಯಿತು. ರಾಜ್ಯ- ಜಿಲ್ಲೆಗಳ ಗಡಿ ಬಂದ್‌ ಆದವು. ಹೊಸ ವೈರಾಣು ಅವತರಿಸಿದೆ ಎಂಬ ಸುದ್ದಿ ಅರಣ್ಯಾಧಿಕಾರಿಗಳ ಮೂಲಕ ಕಿವಿಗೆ ಬಿದ್ದಾಗ ಸೋಲಿಗರು ಎಚ್ಚೆತ್ತುಕೊಂಡರು. ತಾವು ವಾಸವಿರುವ ಅರಣ್ಯ ಪ್ರದೇಶಗಳ ಗಡಿಗಳನ್ನು ತಾವೇ ಬಂದ್‌ ಮಾಡಿದರು. ತಮ್ಮ ಪೋಡುಗಳಿಗೆ ಬೇಲಿ ಹಾಕಿಕೊಂಡರು. ಹೊರಗಿನವರಾರೂ ಒಳಗೆ ಬಾರದಂತೆ ಹಗಲು-ರಾತ್ರಿ ಕಾದರು.
“ಕೊರೊನಾ ಬಂದಾಗ ಸೋಲಿಗರ ಆರೋಗ್ಯದ ಬಗ್ಗೆ ನಮಗೆ ಆತಂಕವಿತ್ತು. ಆದರೆ ಅವರು ಸ್ವಯಂ ರಕ್ಷಣೆ ಮಾಡಿಕೊಂಡರು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಸಂತೋಷ್‌ ಕುಮಾರ್‌ ಹೇಳಿದ್ದಾರೆ.

Advertisement

ಸಾಮಾನ್ಯರಿಗಿಂತ ಮಿಗಿಲು
ಕೊರೊನಾ ಬಗ್ಗೆ ಸಾಮಾನ್ಯ ಜನರು ಮುನ್ನೆಚ್ಚರಿಕೆ ವಹಿಸ ದಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಬುಡಕಟ್ಟು ಜನರು ಅವಿದ್ಯಾವಂತರು. ಆದರೆ ಆರೋಗ್ಯದ ವಿಷಯ, ಸ್ವಯಂ ರಕ್ಷಣೆ, ಮುನ್ನೆಚ್ಚರಿಕೆಯಲ್ಲಿ ಇತರರಿಗಿಂತ ಮೇಲು ಸ್ತರದಲ್ಲಿ ಇದ್ದಾರೆ ಎಂದಿದ್ದಾರೆ ಚಾಮರಾಜನಗರ ಸಿಸಿಎಫ್ ಮನೋಜ್‌ ಕುಮಾರ್‌.

 ನಾಗಪ್ಪ ಎಸ್‌. ಹಳ್ಳಿಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next