Advertisement

ಯೋಧನ ಮೊಬೈಲ್‌ ಕಸಿದು ರೈಲಿಂದ ತಳ್ಳಿದರು

01:06 AM Aug 28, 2019 | Lakshmi GovindaRaj |

ಬೆಂಗಳೂರು: ಬೆಂಗಳೂರಿನಿಂದ ಮಂಡ್ಯದ ಮದ್ದೂರು ತಾಲೂಕಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸೇನಾ ಯೋಧರ ಮೊಬೈಲ್‌ ಕಸಿದುಕೊಂಡ ದುಷ್ಕರ್ಮಿಗಳು ಬಳಿಕ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಕಳಗೆ ತಳ್ಳಿ ಪರಾರಿಯಾಗಿರುವ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ.

Advertisement

ಘಟನೆಯಲ್ಲಿ ಭಾರತೀಯ ಸೇನಾ ಯೋಧ ಕೆ.ಬಿ.ಮಾದೇಗೌಡ(28) ಗಂಭೀರವಾಗಿ ಗಾಯಗೊಂಡು ಸೇನಾ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮಾದೇಗೌಡ ಅವರ ಪತ್ನಿ ದೀಪಿಕಾ ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಆ.25ರಂದು ಪ್ರಕರಣ ದಾಖಲಿಸಿದ್ದಾರೆ.

ಯೋಧ ಕೆ.ಬಿ.ಮಾದೇಗೌಡ ಅವರು ಕೆಲ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದು, ಆ.25ರಂದು ಪತ್ನಿ ದೀಪಿಕಾ ಮತ್ತು ಪುತ್ರ ಯಕ್ಷಿತ್‌ ಜತೆ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ಬೆಳಗ್ಗೆ 7.20ಕ್ಕೆ ಸಿಟಿ ರೈಲು ನಿಲ್ದಾಣಕ್ಕೆ ಬಂದು, ಟುಟಿಕೊರಿಯನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕುಟುಂಬ ಸಮೇತ ಮದ್ದೂರಿಗೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಶೌಚಾಲಯಕ್ಕೆ ತೆರಳಿದ ಮಾದೇಗೌಡ ವಾಪಸ್‌ ಬಂದು, ಬಾಗಿಲ ಬಳಿ ನಿಂತಿದ್ದರು.

20 ನಿಮಿಷಗಳ ನಂತರ “ಯಾರೋ ಅಪರಿಚಿತರು ರೈಲಿನಲ್ಲಿದ್ದ ವ್ಯಕ್ತಿಯ ಮೊಬೈಲ್‌ ಕಿತ್ತುಕೊಂಡು, ಚಲಿಸುತಿದ್ದ ರೈಲಿನಿಂದ ಹೊರ ತಳ್ಳಿದ್ದಾರೆ. ಯಾರೋ ರೈಲಿನಿಂದ ಬಿದ್ದು ಹೋದರು’ ಎಂದು ಸಹ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿ, ದೀಪಿಕಾ ಸುತ್ತಮುತ್ತ ನೋಡಿ, ಪತಿ ಇಲ್ಲದನ್ನು ಕಂಡು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದದ್ದನ್ನು ಕಂಡು ಗಾಬರಿಗೊಂಡ ಅವರು ಪ್ರಯಾಣಿಕರ ಸಹಾಯದಿಂದ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ.

ಮಾನವಿಯತೆ ಮೆರೆದ ಯುವಕ: ದೀಪಿಕಾ ಅವರ ಗೋಳಾಟ ಕಂಡ ಚೇತನ್‌ ಎಂಬಾತ ನೆರವಿಗೆ ಧಾವಿಸಿ, ಕೂಡಲೇ ರೈಲಿನದ್ದ ತುರ್ತು ನಿಲುಗಡೆ ಸರಪಳಿ ಎಳೆದು ಕೃಷ್ಣದೇವರಾಯ ರೈಲು ನಿಲ್ದಾಣದ ಸಮೀಪ ರೈಲು ನಿಲ್ಲಿಸಿದ್ದಾರೆ. ನಂತರ ಪುತ್ರ ಯಕ್ಷಿತ್‌, ಯುವಕ ಚೇತನ್‌ ಜತೆ ರೈಲಿನಿಂದ ಇಳಿದ ದೀಪಿಕಾ, ಪತಿಯನ್ನು ಹುಡುಕಲು ಯತ್ನಿಸಿದ್ದಾರೆ. ಅವರಿಗೆ ನೆರವಾದ ಚೇತನ್‌ ಮೊಬೈಲ್‌ ನಂಬರ್‌ ಪಡೆದು ಹುಡುಕಾಟಕ್ಕೆ ಮುಂದಾಗಿದ್ದಾರೆ.

Advertisement

ಸುಮಾರು 45 ನಿಮಿಷಗಳ ಬಳಿಕ ದೀಪಿಕಾ ಅವರಿಗೆ ಕರೆ ಮಾಡಿದ ಚೇತನ್‌, ಅಪರಿಚಿತ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅವರ ಜೇಬಿನಲ್ಲಿ ಭಾರತೀಯ ಸೇನೆಯ ಗುರುತಿನ ಚೀಟಿಯಿದ್ದು, ಕೆ.ಬಿ. ಮಾದೇಗೌಡ ಎಂದು ಉಲ್ಲೇಖೀಸಿರುವುದಾಗಿ ತಿಳಿಸಿದರು. ಅವರೇ ತಮ್ಮ ಪತಿ ಎಂದ ದೀಪಿಕಾ, ಕೂಡಲೇ ಅವರನ್ನು ಸೇನಾ ಕಮಾಂಡೊ ಆಸ್ಪತ್ರೆ ರವಾನಿಸುವಂತೆ ಬೇಡಿಕೊಂಡಿದ್ದಾರೆ.

ಹೀಗಾಗಿ ಚೇತನ್‌ 108 (ಆ್ಯಂಬುಲೆನ್ಸ್‌) ಮತ್ತು ಪೊಲೀಸ್‌ ಸಹಾಯವಾಣಿ 100ಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೀಪಿಕಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಾದೇಗೌಡ ಅವರು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯ ಎಸಗಿದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

ಹೆಚ್ಚಾದ ಮೊಬೈಲ್‌ ಕಳ್ಳರ ಹಾವಳಿ: ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುವ ಯುವಕರ ಗುಂಪೊಂದು ಸಹ ಪ್ರಯಾಣಿಕರ ಮೊಬೈಲ್‌ ಹಾಗೂ ಹಣ ಕಳವು ಮಾಡುವುದಲ್ಲದೆ, ಪ್ರತಿರೋಧ ವ್ಯಕ್ತಪಡಿಸಿದ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ರೈಲಿನಿಂದ ಕೆಳಗೆ ತಳ್ಳಿ ಪರಾರಿಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೋಗುವ ರೈಲುಗಳಲ್ಲಿ ಈ ಗುಂಪು ಸಕ್ರಿಯವಾಗಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next