Advertisement

ಸಾಮಾಜಿಕ ಸಮಸ್ಯೆಗೆ ಆಧ್ಯಾತ್ಮಿಕ ಬಡತನವೇ ಕಾರಣ

01:52 PM May 14, 2019 | pallavi |

ನರೇಗಲ್ಲ: ಇಂದಿನ ಸಾಮಾಜಿಕ ಸಮಸ್ಯೆಗೆ ಆಧ್ಯಾತ್ಮಿಕ ಬಡತನವೇ ಕಾರಣವಾಗಿದ್ದು, ಮಠ ಮಾನ್ಯಗಳಲ್ಲಿ ನಡೆಯುವ ಅನುಭಾವವು ನಮ್ಮಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಸಿ ನೈತಿಕ ಪ್ರಜ್ಞೆ, ಸಾಮಾಜಿಕ ಮೌಲ್ಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಡಾ| ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

Advertisement

ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸಾರ್ಥಕ ಜೀವನ ಆಧ್ಯಾತ್ಮಿ ಜ್ಞಾನದ ಅಗತ್ಯವಿದೆ. ಇದು ಪ್ರತಿಯೊಬ್ಬ ಮಾನವನ ಜೀವನಕ್ಕೆ ಆಧಾರ ಸ್ತಂಭವಾಗಿದೆ. ರಾಜಕೀಯ ಹಾಗೂ ಧಾರ್ಮಿಕ ಇತಿಹಾಸ ಬೇರೆ ಬೇರೆ ಅಲ್ಲ, ಎರಡೂ ಒಂದೇ. ದೇಶ ರಕ್ಷಣೆಗಾಗಿ ರಾಜಕೀಯ ಮುಖಂಡರು ಕೈಗೊಳ್ಳುವಂತಹ ಹೋರಾಟದ ನಿರ್ಧಾರನ್ನು ಈ ಹಿಂದೆ ಸಂಗನಬಸವ ಶಿವಯೋಗಿಗಳು ಕೈಗೊಂಡು ಇತಿಹಾಸ ನಿರ್ಮಾಣ ಮಾಡಿದ್ದಾರೆ. ಪುರಾಣ, ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಆದ್ದರಿಂದ ಶಿವಶರಣರ ಜೀವನ ಚರಿತ್ರೆ ಜತೆ ಅವರ ಆಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು.

ಧರ್ಮ ಮನುಷ್ಯನ ಜೀವನಕ್ಕೆ ಪೂರಕವಾಗಿದೆ. ಧರ್ಮ ಇಲ್ಲದೇ ಮನುಷ್ಯನ ಜೀವನ ಕಷ್ಟಸಾಧ್ಯವಾಗಿದೆ. 21ನೇ ಶತಮಾನದಲ್ಲಿ ಶೈಕ್ಷಣಿಕ, ವೈಜ್ಞಾನಿಕವಾಗಿ ಮುಂದುವರಿದರೂ ಕಂದಾಚಾರ, ಮೂಢನಂಬಿಕೆ ಜೀವಂತವಾಗಿವೆ. ಮನುಷ್ಯ ಹಣ, ಐಶ್ಚರ್ಯದ ಕಡೆ ಹೆಚ್ಚು ಒಲವು ತೋರುತ್ತಿದ್ದಾನೆ. ಮಾನವೀಯತೆ, ಕರುಣೆ, ವಿಶ್ವಾಸ ಕಣ್ಮರೆ ಆಗುತ್ತಿದೆ. ಅಮಾನವೀಯತೆ, ಭ್ರಷ್ಟತೆ ತಾಂಡವವಾಡುತ್ತಿವೆ. ಮಾನವನ ಶರೀರ ರಥ ಇದ್ದ ಹಾಗೆ, ಅದಕ್ಕೆ ಆಧ್ಯಾತ್ಮ ಅಗತ್ಯವಾಗಿದೆ ಎಂದರು.

ಕೊಟ್ಟೂರ ದೇಶಿಕರು, ಮುಪ್ಪಿನ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವರಾಜ ಹನಮನಾಳ, ಹನುಮಂತಪ್ಪ ಎಸ್‌., ಅಂದಪ್ಪ ವೀರಾಪೂರ, ಮಲ್ಲಿಕಾರ್ಜುನ ಗುಗ್ಗರಿ, ಐ.ಬಿ. ಒಂಟೇಲೆ, ಮಹ್ಮಾತಪ್ಪ ಬಸವರಡ್ಡೇರ, ವೀರಪ್ಪ ಹೊಂಬಾಳೆ, ಮಲ್ಲಿಕಾರ್ಜುನ ಕಲ್ಲೇಶ್ಯಾಣಿ, ಮಂಜುನಾಥ ತಳವಗೇರಿ, ಅಶೋಕ ಬಸವರಡ್ಡೇರ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next