ಹಾಗಂತ ಸ್ಪಷ್ಟಪಡಿಸಿದರು ಹಿರಿಯ ನಟ ದತ್ತಣ್ಣ. ಬಹುಶಃ ಅವರು ಹಾಗೆ ಹೇಳದಿದ್ದರೆ, ಎದುರಿಗಿದ್ದ ಮಂದಿ, ಇದೊಂದು ಮುದುಕರ ಚಿತ್ರ ಎಂದು ಅಂದುಕೊಳ್ಳುವ ಸಾಧ್ಯತೆ ಇತ್ತು. ಏಕೆಂದರೆ, ವೇದಿಕೆ ಮೇಲೆ ಇದ್ದವರಲ್ಲಿ ಹೆಚ್ಚಿನವರು ಹಿರಿಯರೇ. ದತ್ತಣ್ಣ, “ಸಿದ್ಲಿಂಗು’ ಶ್ರೀಧರ್, ಬಾಬು ಹಿರಣ್ಣಯ್ಯ, ಎಚ್.ಜಿ. ಸೋಮಶೇಖರ್ ರಾವ್ ಹೀಗೆ ಹಿರಿಯರ ಸಂಖ್ಯೆ ದೊಡ್ಡದಾಗಿತ್ತು. ಇಷ್ಟೆಲ್ಲಾ ಜನ ಒಂದೇ ಚಿತ್ರದಲ್ಲಿ ನಟಿಸಿದ್ದಾರೆಂದರೆ, ಅದು ಮುದುಕರ ಚಿತ್ರ ಎಂದು ಜನ ನಂಬುವ ಅಪಾಯವಿದೆ ಎಂಬ ಸಂಶಯ ದತ್ತಣ್ಣರಿಗೆ ಬಂದಿರಲಿಕ್ಕೆ ಸಾಕು. ಹಾಗಾಗಿ “ಏಪ್ರಿಲ್‌ನ ಹಿಮಬಿಂದು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕೊನೆಯಲ್ಲಿ ಮಾತಾಡಿದರೂ, ಇದೇ ವಾಕ್ಯದೊಂದಿಗೆ ಮಾತು ಶುರು ಮಾಡಿದರು.
Advertisement
“ಇದು ಮುದುಕರ ಚಿತ್ರವಲ್ಲ. ಹುಡುಗರ ಚಿತ್ರ. ಹಾಗಾಗಿ ಹಿಂದೆ ಕೂತಿರುವ ಮೂವರು ಹುಡುಗರನ್ನು ಮುಂದೆ ಕೂರಿಸಬೇಕಿತ್ತು. ಇದು ಯುವಕರಿಗೆ ಸಂಬಂಧಿಸಿದ ಸಂಗತಿಗಳನ್ನು ಪ್ರತಿಪಾದಿಸುವ ಚಿತ್ರ. ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಪರಿಹಾರ ಸಿಗುತ್ತೆ ಅಂತಾರಲ್ಲ, ಆ ಹಿನ್ನೆಲೆಯ ಕಥೆ ಇದು. ಹಂಚಿಕೊಳ್ಳದಿದ್ದರೆ, ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ. ಕಷ್ಟಗಳು ಬೆಳೆಯುತ್ತಲೇ ಹೋಗುತ್ತವೆ. ಇದು ಆ ಹುಡುಗರಿಗೆ ಗೊತ್ತಿರುವುದಿಲ್ಲ. ಕಾರಣ ಅನುಭವದ ಕೊರತೆ. ಹಾಗಾಗಿ ಮೂರು ಜನಕ್ಕೆ ಮೂರು ವಿಭಿನ್ನ ಸಮಸ್ಯೆಗಳು. ಆಗ ನಾವು ಎದುರಾಗುತ್ತೇವೆ. ನಾವು ಬದಕುವ ರೀತಿ ನೋಡಿ, ನಾವೂ ಹೀಗಿಯೇ ಇರಬಹುದಲ್ವಾ ಎಂದು ಅನಿಸೋಕೆ ಶುರುವಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಸಂದೇಶವಾಗಲೀ, ಬೋಧನೆಯಾಗಲೀ ಇರುವುದಿಲ್ಲ. ನಮ್ಮನ್ನು ನೋಡಿ ಅವರೇ ಕಲಿತುಕೊಳ್ಳುತ್ತಾರೆ.